ದೇವದುರ್ಗ: ತಾಲೂಕಿನ ಬಾಗೂರು, ನಿಲವಂಜಿ, ಕರಿಗುಡ್ಡ, ಅಂಜಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಇಲ್ಲಿವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ನಾಲ್ಕು ಗ್ರಾಮದ ಗ್ರಾಮಸ್ಥರು ದೂರಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಇಒ ಹಾಲ ಸಿದ್ದಪ್ಪ ಪೂಜಾರಿ ಅವರೊಂದಿಗೆ ಮಾತುಕತೆ ನಡೆಸಿದ ಗ್ರಾಮಸ್ಥರು, ಬಾಗೂರು ಗ್ರಾಮದಲ್ಲಿ ವಾಟರ್‌ಮನ್ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ. ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾನೆ. ಸಮಸ್ಯೆ ಕುರಿತು ಗ್ರಾಪಂ ಅಧಿಕಾರಿ ಗಮನಕ್ಕೆ ತಂದರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಅಲ್ಲದೇ ಸಮರ್ಪಕವಾಗಿ ನೀರು ಪೂರೈಸದೇ ತೀರಾ ವಿಳಂಬ ಮಾಡುವುದರಿಂದ ಕುಡಿಯುವ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ನಿಲವಂಜಿ, ಕರಿಗುಡ್ಡ, ಅಂಜಳ ಸೇರಿ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಅನುಭವಿಸಬೇಕಾಗಿದೆ. ಬೇಸಿಗೆ ಸಂದರ್ಭ ದಾಹ ನೀಗಿಸಲು ನೀರು ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಪದೇ ಪದೇ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಇಲ್ಲಿವರೆಗೆ ಸಮಪರ್ಕವಾಗಿ ನೀರು ಪೂರೈಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ ಎಂದು ದೂರಿದರು.
ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದು, ನಿರ್ವಹಣೆ ಕೊರತೆಯಿಂದ ಬಳಕೆಗೆ ಬಾರದಂತಹ ಪರಿಸ್ಥಿತಿಗೆ ಬಂದಿವೆ. ಗುಜುರಾತ್ ಮೂಲದವರಿಗೆ ಟೆಂಡರ್ ನೀಡಲಾಗಿತ್ತು. ಸಮರ್ಪಕವಾಗಿ ಕೆಲಸ ಮಾಡದೇ ಇರುವುದರಿಂದ ಅರ್ಧಕ್ಕೆ ಬಿಟ್ಟು ಹೋದ್ದರಿಂದ ಇದೀಗ ನಿರುಪಯುಕ್ತವಾಗಿವೆ. ಗ್ರಾಮಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಗಲೀಜು ನೀರು ರಸ್ತೆಗೆ ಹರಿಯುವುದರಿಂದ ದುರ್ನಾತ ಮಧ್ಯೆ ಕಾಲಕಳೆಯುವಂತ ಸ್ಥಿತಿ ಬಂದಾಗಿದೆ. ಬಹುತೇಕ ಚರಂಡಿಗಳು ಸ್ವಚ್ಛತೆ ಮಾಡದೇ ಹಿಂದೇಟು ಹಾಕಿದ ಪರಿಣಾಮ ದುರ್ನಾತ ಜತೆ ಸೊಳ್ಳೆಕಾಟ ವಿಪರೀತಿವಾಗಿವೆ. ಇಲ್ಲಿನ ಸಮಸ್ಯೆ ಕುರಿತು ಗ್ರಾಪಂ ಅಭಿವೃದ್ಧಿ, ಅಧಿಕಾರಿಗಳಿಗೆ ಸ್ವಚ್ಛತೆಗೊಳಿಸುವಂತೆ ಗಮನಕ್ಕೆ ತರಲಾಗಿದೆ. ಆದರೆ ಇಂದೋ ನಾಳೆ ಎನ್ನುವ ಅಧಿಕಾರಿಗಳ ಹುಸಿ ಭರವಸೆಯಿಂದ ಸಾಂಕ್ರಮಿಕ ರೋಗಗಳಿಗೆ ತತ್ತರಿಸಿದ್ದಾರೆ. ನಾಲ್ಕು ಗ್ರಾಮಗಳಲ್ಲಿ ಕುಡಿಯುವ ನೀರು, ಚರಂಡಿ ಸ್ವಚ್ಛತೆ ಸೇರಿ ಮೂಲಭೂತ ಸೌಲಭ್ಯಗಳು ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.
ಬಾಗೂರು ಸರಕಾರಿ ಶಾಲೆಯಲ್ಲಿ ಮಕ್ಕಳ ಕಲಿಕೆ ಹಿನ್ನೆಡೆಗೆ ಶಿಕ್ಷಕರೇ ವಿಘ್ನ. ಸರಿಯಾಗಿ ಶಾಲೆಗೆ ಬಾರದೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಬೋಧಿಸದೇ ಕಾಲಹರಣ ಮಾಡುತ್ತಿದ್ದಾರೆ. ಶಿಕ್ಷಕರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಲಾಗುತ್ತದೆ ಎಂದು ತಿಳಿಸಿದರು.
ರಮೇಶ ರಾಮನಾಳ, ಮಾರ್ಟಿನ್, ಕಲ್ಯಾಣ ಬಸವ, ಮಲ್ಲೇಶ ಕರಿಗುಡ್ಡ, ಗೋಪಾಲಸ್ವಾಮಿ, ಹೈನೀಲ್, ಶಿವಪ್ಪ, ರಂಗಪ್ಪ, ಲಕ್ಷ್ಮಣ, ಶಿವುಕುಮಾರ, ಬಸವರಾಜ ಇದ್ದರು.
ತಾಲೂಕಿನ ಕೆಲ ಗ್ರಾಮಗಳಲ್ಲಿ 23 ಶುದ್ಧ ಕುಡಿಯುವ ನೀರಿನ ಘಟಕಗಳು ಗುಜುರಾತ್ ಮೂಲದವರಿಗೆ ನೀಡಲಾಗಿತ್ತು. ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ನೀತಿ ಸಂಹಿತೆ ಇರುವ ಕಾರಣ ಮೇ 27ರಂದು ಟೆಂಡರ್ ಕರೆಯಲಾಗುತ್ತದೆ.
•
ವೆಂಕಟೇಶ ಗಲಗ, ಜಿಪಂ ಎಇಇ