Advertisement
ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇನ್ನೊಂದೆಡೆ ಸತತ ಎರಡ್ಮೂರು ವರ್ಷಗಳಿಂದ ಸಮರ್ಪಕ ಮಳೆ ಇಲ್ಲದೇ ಅಂತರ್ಜಲ ಮಟ್ಟ ಕುಸಿದು ಬೋರ್‌ವೆಲ್ಗಳು ಬಿಕ್ಕುತ್ತಿವೆ. ತೆರೆದಬಾವಿಗಳಲ್ಲೂ ನೀರಿಲ್ಲದಾಗಿದೆ. ಗ್ರಾಮೀಣ ಜನ, ಜಾನುವಾರುಗಳ ಜಲ ಮೂಲವಾಗಿದ್ದ ಕೆರೆಗಳು ಬತ್ತಿ ಬರಿದಾಗಿವೆ. ಹಳ್ಳಿ ದೊಡ್ಡಿ, ತಾಂಡಾಗಳ ಜನತೆ ಕೊಡ ಹಿಡಿದುಕೊಂಡು ನೀರಿಗೆ ಅಲೆದಾಡುವುದು ಸಾಮಾನ್ಯವಾಗಿದೆ. ಆದರೂ ತಾಲೂಕು ಆಡಳಿತ ಬರ ನಿರ್ವಹಣೆಗೆ ಸಮರ್ಪಕ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ.
Related Articles
Advertisement
ಹೂಳು ಎತ್ತಲು ಆಗ್ರಹ: ತಾಲೂಕಿನಾದ್ಯಂತ 25ಕ್ಕೂ ಹೆಚ್ಚು ಕೆರೆಗಳಿವೆ. ಕೆರೆಗಳಲ್ಲಿ ಹೂಳು ತುಂಬಿದ್ದು, ನೀರು ಸಂಗ್ರಹ ಸಾಮರ್ಥಯ ಕುಸಿದಿದೆ. ಸುಮಾರು ವರ್ಷಗಳಿಂದ ವಿವಿಧ ಸಂಘಟನೆಗಳ ಸದಸ್ಯರು ಕೆರೆಗಳ ಹೂಳೆತ್ತಬೇಕೆಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಸರ್ಕಾರಕ್ಕೆ ಪ್ರಸ್ತಾವನೆ ಕಳಿಸುವುದಾಗಿ ಅಧಿಕಾರಿಗಳು ಹುಸಿ ಭರವಸೆ ನೀಡುತ್ತ ಕಾಲಹರಣ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಜಿಲ್ಲಾಧಿಕಾರಿ ಆದೇಶಕ್ಕಿಲ್ಲ ಬೆಲೆ: ತಾಲೂಕಿನ ಬಹುತೇಕ ಗ್ರಾಮಗಳು, ತಾಂಡಾ, ದೊಡ್ಡಿಗಳಲ್ಲಿ ಕುಡಿಯುವ ನೀರಿನ ಬವಣೆ ಶುರುವಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಗ್ರಾಪಂ 14ನೇ ಹಣಕಾಸು ಯೋಜನೆ ಅನುದಾನ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಆದರೆ ಗ್ರಾಪಂ ಅಧಿಕಾರಿಗಳು ಈ ಅನುದಾನ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಕರಿಗುಡ್ಡ, ಅಮರಾಪುರು ಈ ಎರಡೂ ಗ್ರಾಮ ಪಂಚಾಯಿತಿಗಳ ಉಸ್ತುವಾರಿ ವಹಿಸಿಕೊಂಡ ಅಧಿಕಾರಿ ಜನರ ಕೈಗೂ ಸಿಗುತ್ತಿಲ್ಲ, ಕಚೇರಿಗೆ ಬರುತ್ತಿಲ್ಲ. ಹೀಗಾಗಿ ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆಯುತ್ತಿಲ್ಲ. ಹಿರಿಯ ಅಧಿಕಾರಿಗಳು ಗ್ರಾಪಂ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥ ಹನುಮಗೌಡ, ರಂಗಪ್ಪ ಆಗ್ರಹಿಸಿದ್ದಾರೆ.
ಕಸಾಯಿಖಾನೆಗೆ ಜಾನುವಾರು: ಹೊಲಗದ್ದೆಗಳು ಬರಡು ಭೂಮಿಯಂತೆ ಕಾಣುತ್ತಿವೆ. ತಾಲೂಕಿನಾದ್ಯಂತ ಮೇವಿನ ಅಭಾವ ಉಲ್ಬಣಗೊಂಡಿದೆ. ಮೇವು ಬ್ಯಾಂಕ್ ಸ್ಥಾಪನೆ ಮಾಡುವಲ್ಲಿ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ ಮೇವು ಸಿಗದೇ ರೈತರು ಜಾನುವಾರುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಸ್ಥಿತಿ ತಲೆದೋರಿದೆ. ಕೂಡಲೇ ತಾಲೂಕು ಆಡಳಿತ ಗ್ರಾಮೀನ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು. ಜಾನುವಾರುಗಳಿಗೆ ಮೇವು ಒದಗಿಸಬೇಕೆಂದು ಜೈ ಕರವೇ ಅಧ್ಯಕ್ಷ ಖಾದರ ಪಾಷಾ ಆಗ್ರಹಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರೈತರಿಂದ ಮೇವಿನ ಬೇಡಿಕೆ ಬಂದಿಲ್ಲ. ಬಂದಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ.••ಮಲ್ಲಿಕಾರ್ಜುನ ಅರಕೇರಿ,
ತಹಶೀಲ್ದಾರ್, ದೇವದುರ್ಗ ನಾಗರಾಜ ತೇಲ್ಕರ್