Advertisement

ಶಾಲೆಗಳ ಎಸ್‌ಬಿ ಖಾತೆ ಬಡ್ಡಿ ಮೇಲೆ ಸರ್ಕಾರದ ಕಣ್ಣು

10:52 AM Jul 04, 2019 | Naveen |

ನಾಗರಾಜ ತೇಲ್ಕರ್‌
ದೇವದುರ್ಗ
: ಸಮಗ್ರ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಶಾಲೆಗಳಿಗೆ ಬಿಡುಗಡೆಯಾದ ಅನುದಾನ ಹಲವು ವರ್ಷಗಳಿಂದ ಬಳಕೆ ಆಗದೇ ಎಸ್‌ಬಿ ಖಾತೆಗಳಲ್ಲಿ ಹಾಗೇ ಉಳಿದಿದೆ. ಈ ಹಣಕ್ಕೆ ಜಮೆಯಾದ ಬಡ್ಡಿ ಹಣದ ಮೇಲೆ ಸರ್ಕಾರದ ಕಣ್ಣು ಬಿದ್ದಿದ್ದು, ಇದನ್ನು ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ಬೆಂಗಳೂರು ಇಲ್ಲಿಗೆ ಡಿಡಿ ಮೂಲಕ ಪಾವತಿಸುವಂತೆ ಶಾಲಾ ಮುಖ್ಯಗುರುಗಳಿಗೆ ಆದೇಶ ಹೊರಡಿಸಲಾಗಿದೆ.

Advertisement

2012ರಿಂದ ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿದೆ. ಬಳಿಕ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಅಸ್ತಿತ್ವಕ್ಕೆ ಬಂದಿತ್ತು. 2019-20ನೇ ಸಾಲಿಗೆ ರಾಜ್ಯದಲ್ಲಿ ಸಮಗ್ರ ಶಿಕ್ಷಣ ಅಭಿಯಾನ ಕಾರ್ಯಕ್ರಮ ಜಾರಿಗೊಳಿಸಿದೆ. ಪ್ರಾಥಮಿಕ, ಪ್ರೌಢಶಾಲೆಗಳು, ಆದರ್ಶ, ಕಿತ್ತೂರ ರಾಣಿ ಚೆನ್ನಮ್ಮ, ಕೆಜಿಬಿವಿ, ವಸತಿ ಶಾಲೆಗಳು ಸೇರಿದಂತೆ ಅನೇಕ ಸರಕಾರಿ ಶಿಕ್ಷಣ ಸಂಸ್ಥೆಗಳ ಅಕೌಂಟ್‌ನಲ್ಲಿರುವ ಸರ್ವ ಶಿಕ್ಷಣ ಅಭಿಯಾನದ ಅನುದಾನಕ್ಕೆ ಜಮೆಯಾದ ಬಡ್ಡಿಯನ್ನು ಡಿಡಿ ಮುಖಾಂತರ 2019ರ ಮೇ 21ರೊಳಗೆ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರ ಮುಖಾಂತರ ಎಲ್ಲ ಶಾಲೆಗಳ ಮುಖ್ಯಗುರುಗಳಿಗೆ ಆದೇಶ ಹೊರಡಿಸಲಾಗಿತ್ತು. ಈ ಆದೇಶವನ್ನು ಬಹುತೇಕ ಶಾಲೆಗಳ ಮುಖ್ಯ ಶಿಕ್ಷಕರು ಪಾಲನೆ ಮಾಡದ್ದರಿಂದ ಜು.5ರವರೆಗೆ ಗಡುವು ವಿಸ್ತರಿಸಲಾಗಿದೆ. ತಾಲೂಕಿನ 315 ಪ್ರಾಥಮಿಕ ಶಾಲೆ, 31 ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಡಿಡಿ ಮೂಲಕ ಈಗಾಗಲೇ 51 ಲಕ್ಷ ರೂ. ಪಾವತಿಸಿದ್ದಾರೆ. ಉಳಿದ 45 ಲಕ್ಷಕ್ಕೂ ಹೆಚ್ಚು ಹಣ ಸಂಬಂಧಪಟ್ಟ ಮುಖ್ಯಶಿಕ್ಷಕರಿಗೆ ಜು.5ರವರೆಗೆ ಗಡುವು ನೀಡಲಾಗಿದೆ.

ಶಾಲಾ ಅಕೌಂಟ್‌ನಲ್ಲಿದ್ದ ಬಡ್ಡಿ ಹಣದ ಮೇಲೆ ಏಕಾಏಕಿ ಶಿಕ್ಷಣ ಇಲಾಖೆ ಕಣ್ಣು ಹಾಕಿರುವುದು ಶಾಲಾ ಅಭಿವೃದ್ಧಿ ಸಮಿತಿಯವರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಣ ಶಾಲೆಗಳ ಖಾತೆಯಲ್ಲಿ ಜಮೆ ಇದ್ದರೆ ಶಾಲೆಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಬಳಸಲು ಅನುಕೂಲವಾಗುತ್ತಿತ್ತು. ಅನೇಕ ಶಾಲೆಗಳಲ್ಲಿ ನೀರು, ಶೌಚಾಲಯ, ಆವರಣ ಗೋಡೆಯಂತಹ ಸೌಲಭ್ಯ ಕೊರತೆ ಇದೆ. ಇದಕ್ಕೆ ಅನುದಾನದ ಅಭಾವವೂ ಇದೆ. ಬಡ್ಡಿ ಹಣದಲ್ಲಿ ಶಾಲೆಗಳಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಬಳಸಬಹುದಿತ್ತು ಎನ್ನುತ್ತಾರೆ ಶಿಕ್ಷಣ ಪ್ರೇಮಿಗಳು.

ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮ ಸ್ಥಗಿತಗೊಂಡು ಸುಮಾರು 7ವರ್ಷಗಳು ಕಳೆದಿವೆ. ಪ್ರತಿಯೊಂದು ಶಾಲೆಯಲ್ಲಿ ಪ್ರತಿ ವರ್ಷದ ಬಡ್ಡಿ ಸೇರಿದಂತೆ ಲಕ್ಷಾಂತರ ರೂ. ಹಣ ಸಂಗ್ರಹವಾಗಿದೆ. ಸ್ಥಳೀಯ ಶಾಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಶಿಕ್ಷಣ ಇಲಾಖೆ ಈ ಹಣವನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಬೇಕಿತ್ತು ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ರಾಜ್ಯ ಸರಕಾರ ಈ ಆದೇಶವನ್ನು ಮರುಪರಿಶೀಲಿಸುವ ಅಗತ್ಯವಿದೆ. ಸ್ಥಳೀಯ ಸಮಸ್ಯೆಗಳಿಗೆ ಅಕೌಂಟ್‌ನಲ್ಲಿರುವ ಹಣವನ್ನು ಉಪಯೋಗಿಸಲು ಪ್ರತ್ಯೇಕ ನಿಯಮವನ್ನು ಜಾರಿಗೊಳಿಸಿದರೆ ಬಹುಪ್ರಯೋಜನವಾದೀತು ಎನ್ನುತ್ತಾರೆ ನಿವೃತ್ತ ಶಿಕ್ಷಕ ರಾಜಪ್ಪ.

ಶಾಲೆಗಳ ಎಸ್‌ಬಿ ಖಾತೆಯಲ್ಲಿರುವ ಬಡ್ಡಿ ಹಣವನ್ನು ಸಣ್ಣಪುಟ್ಟ ದುರಸ್ತಿ ಕೆಲಸ ಕಾರ್ಯಗಳಿಗೆ ಹಣ ಬಳಕೆ ಮಾಡಲು ಆದೇಶ ನೀಡದೇ, ಬಡ್ಡಿಯನ್ನು ರಾಜ್ಯ ಯೋಜನಾಧಿಕಾರಿಗಳ ಖಾತೆಗೆ ಜಮೆ ಮಾಡುವಂತೆ ಆದೇಶ ಹೊರಡಿಸಿದ್ದು ಸರಿಯಲ್ಲ. ಇದು ಸರಕಾರಿ ಶಾಲೆಗಳ ಬಲವರ್ಧನೆಗೆ ಸರಕಾರ ಅನುಸರಿಸುತ್ತಿರುವ ದ್ವಂದ್ವ ನಿಲುವಾಗಿದೆ.
••ಮಲ್ಲೇಶ,
ಬಾಪೂಜಿ ಶಾಲೆ ಎಸ್‌ಡಿಎಂಸಿ ಉಪಾಧ್ಯಕ್ಷ

Advertisement

ಸರಕಾರದ ಆದೇಶದಂತೆ ಸರಕಾರಿ ಶಾಲೆಗಳ ಖಾತೆಯಲ್ಲಿರುವ ಬಡ್ಡಿ ಹಣವನ್ನು ಈಗಾಗಲೇ ಬಹುತೇಕ ಶಿಕ್ಷಕರು ಡಿಡಿ ಮೂಲಕ ನೀಡಿದ್ದಾರೆ. ಇನ್ನೂ ಕೆಲವರು ನೀಡಿಲ್ಲ. ಅಂಥವರಿಗೆ ಜು.5ರವರೆಗೆ ಅವಕಾಶ ಕಲ್ಪಿಸಲಾಗಿದೆ. ಬಡ್ಡಿ ಹಣದ ಡಿಡಿ ನೀಡದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
••ಡಾ| ಎಸ್‌.ಎಂ. ಹತ್ತಿ,
ಕ್ಷೇತ್ರ ಶಿಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next