Advertisement

ಎಗ್ಗಿಲ್ಲದೇ ಸಾಗಿದೆ ಮರಳು ಸಾಗಾಟ

04:49 PM Apr 27, 2019 | Team Udayavani |

ದೇವದುರ್ಗ: ಸಮೀಪದ ಅಮರಾಪುರು ಕ್ರಾಸ್‌ ಬಳಿ ಮರಳು ದಾಸ್ತಾನು ಯಾರ್ಡ್‌ ನಿಂದ ಸಾಗಾಟ ಸ್ಥಗಿತಗೊಂಡಿದ್ದರಿಂದ ಕೇಂದ್ರಕ್ಕೆ ಬೀಗ ಜಡಿಯಲಾಗಿದೆ. ಹೀಗಾಗಿ ಮರಳು ಸಂಗ್ರಹ ಪ್ರಾಂಗಣದಲ್ಲಿ ಜಾಲಿಗಿಡಗಳು ಬೆಳೆದು ಅವ್ಯವಸ್ಥೆ ಆಗರವಾಗಿ ಮಾರ್ಪಟ್ಟಿದೆ.

Advertisement

ಹಿಂದೆ ರಾಯಚೂರು ಜಿಲ್ಲಾಧಿಕಾರಿ ಯಾಗಿದ್ದ ಶಶಿಕಾಂತ್‌ ಸೆಂಥಿಲ್ ಅಮರಾಪುರು ಕ್ರಾಸ್‌ ಬಳಿ ಮರಳು ದಾಸ್ತಾನು ಪ್ರಾಂಗಣ ಉದ್ಘಾಟಿಸಿದ್ದರು. ರಾಯಲ್ಟಿ ಪಡೆದು ಇಲ್ಲಿಂದಲೇ ಮರಳು ಸಾಗಣೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಕಳೆದ ಆರೇಳು ತಿಂಗಳಿಂದ ಸ್ಟಾಕ್‌ಯಾರ್ಡ್‌ ಬಂದಾಗಿದ್ದು, ಅಕ್ರಮ ಮರಳು ಸಾಗಣೆ ಜೋರಾಗಿದೆ.

ಕೃಷ್ಣಾ ನದಿಯಿಂದ ಮರಳು ತಂದು ಜಮೀನಿನಲ್ಲಿ ಸಂಗ್ರಹಿಸಿ ಅಕ್ರಮವಾಗಿ ಸಾಗಾಟ ಮಾಡುವುದು ಹೆಚ್ಚಿದೆ. ಹೇರುಂಡಿ, ಚಿಂಚೋಡಿ, ನೀಲವಂಜಿ, ಬುಂಕಲದೊಡ್ಡಿ ಸೇರಿ ಇತರೆ ನದಿ ಪಕ್ಕದ ಗ್ರಾಮಗಳಿಂದ ಹಗಲು ರಾತ್ರಿ ಅಕ್ರಮ ಮರಳು ಸಂಗ್ರಹ, ಸಾಗಾಟ ಎಗ್ಗಿಲ್ಲದೇ ನಡೆದಿದೆ. ಅಕ್ರಮ ಮರಳು ಸಾಗಾಟ ತಡೆಗೆ ಚೆಕ್‌ಪೋಸ್ಟ್‌ ಸ್ತಾಪಿಸಿದ್ದರೂ ಅಕ್ರಮ ಮರಳು ದಂಧೆ ಮಾತ್ರ ನಿಂತಿಲ್ಲ.

ಸಿಗುತ್ತಿಲ್ಲ ಮರಳು: ವಿವಿಧ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಮರಳು ಸಿಗದೇ ಮನೆ ನಿರ್ಮಿಸಿಕೊಳ್ಳಲು ಪರದಾಡುವಂತಾಗಿದೆ. ಅಕ್ರಮ ಸಾಗಣೆ ಮಾಡುವ ಟ್ರ್ಯಾಕ್ಟರ್‌ ಮಾಲೀಕರು ಬೇಕಾಬಿಟ್ಟಿಯಾಗಿ ಹಣ ಕೇಳುತ್ತಿರುವುದು ಬಡ ಫಲಾನುಭವಿಗಳಿಗೆ ಹೊರೆಯಾಗುತ್ತಿದೆ.

ಜಾಲಹಳ್ಳಿ ವ್ಯಾಪ್ತಿಯಲ್ಲಿ ಅಕ್ರಮ ಮರಳು ದಂಧೆ ಮಿತಿ ಮೀರಿದೆ. ಇದಕ್ಕೆ ಕಡಿವಾಣ ಹಾಕುವಲ್ಲಿ ಅಧಿಕಾರಿಗಳು ಕೂಡ ವಿಫಲರಾಗಿದ್ದಾರೆ. ಇತ್ತೀಚೆಗೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಎಎಸ್ಪಿ ನೇತೃತ್ವದಲ್ಲಿ ನಡೆದ ಎಸ್‌ಸಿ, ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ದಲಿತರು ಅಕ್ರಮ ಮರಳು ಸಾಗಾಟ ನಿಯಂತ್ರಿಸಬೇಕೆಂದು ಆಗ್ರಹಿಸಿದ್ದರು. ಮರಳು ಸಾಗಣೆ ವಾಹನಗಳು ವೇಗವಾಗಿ ಚಲಿಸುವುದರಿಂದ ಗ್ರಾಮೀಣ ಜನರು ಆತಂಕದಲ್ಲೇ ಸಂಚರಿಸುವಂತಾಗಿದೆ ಅಳಲು ತೋಡಿಕೊಂಡಿದ್ದೇವೆ. ಆದರೂ ನಿಯಂತ್ರಣಕ್ಕೆ ಮುಂದಾಗಿಲ್ಲ. ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕದೇ ಇದ್ದಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಭೀಮರಾಜ ಜರದಬಂಡಿ ಆಗ್ರಹಿಸಿದ್ದಾರೆ.

Advertisement

ಒಂದು ರಾಯಲ್ಟಿ ಪಡೆದು ಮೂರು ಬಾರಿ ಅಕ್ರಮವಾಗಿ ಮರಳು ಸಾಗಣೆ ದಂಧೆ ಜೋರಾಗಿದೆ. ಇನ್ನು ಟ್ರ್ಯಾಕ್ಟರ್‌ ಮಾಲೀಕರು ಜಮೀನಿನಲ್ಲಿ ಮರಳು ಸಂಗ್ರಹಿಸಿ ದುಪ್ಪಟ್ಟು ದರದಲ್ಲಿ ಮಾರುತ್ತಿದ್ದಾರೆ.
••ಹೆಸರು ಹೇಳಲು ಇಚ್ಛಿಸದ ಪಿಡಬ್ಲ್ಯೂಡಿ ಸಿಬ್ಬಂದಿ

Advertisement

Udayavani is now on Telegram. Click here to join our channel and stay updated with the latest news.

Next