Advertisement

ಪಾಲಿಟೆಕ್ನಿಕ್‌ ಕಾಲೇಜ್‌ ಕಟ್ಟಡ ಕಾಮಗಾರಿ ನನೆಗುದಿಗೆ

01:07 PM Jun 28, 2019 | Naveen |

ನಾಗರಾಜ ತೇಲ್ಕರ್‌
ದೇವದುರ್ಗ:
ಪಟ್ಟಣದ ಹೊರವಲಯದ ವಿದ್ಯಾನಗರದಲ್ಲಿ ನಿರ್ಮಿಸುತ್ತಿರುವ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಕಟ್ಟಡ ಕೆಲ ವರ್ಷದಿಂದ ನನೆಗುದಿಗೆ ಬಿದ್ದಿದ್ದರಿಂದ ಕಾಲೇಜ್‌ನ್ನು ಸಮೀಪದ ಮಹಿಳಾ ವಸತಿ ನಿಲಯದಲ್ಲಿ ನಡೆಸಲಾಗುತ್ತಿದೆ.

Advertisement

ದೇವದುರ್ಗ ಪಟ್ಟಣಕ್ಕೆ 2009ರಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಮಂಜೂರಾಗಿದೆ. 2014-15ನೇ ನೇ ಸಾಲಿನಲ್ಲಿ ನಬಾರ್ಡ್‌ 19ರ ಯೋಜನೆಯಡಿ 326 ಲಕ್ಷ ರೂ. ವೆಚ್ಚದಲ್ಲಿ ಪಾಲಿಟೆಕ್ನಿಕ್‌ ಕಾಲೇಜ್‌ ಕಟ್ಟಡ ಕಾಮಗಾರಿಗೆ ಆರ್‌.ವಿ. ದೇಶಪಾಂಡೆ ಚಾಲನೆ ನೀಡಿದ್ದರು. ಕಾಮಗಾರಿಯನ್ನು ಲ್ಯಾಂಡ್‌ ಆರ್ಮಿಗೆ ವಹಿಸಲಾಗಿತ್ತು. ಆದರೆ ಇದರಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದರಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.

ವಿದ್ಯಾರ್ಥಿಗಳ ಸಂಖ್ಯೆ ಕುಸಿತ: 2009ರಲ್ಲಿ ಪಟ್ಟಣಕ್ಕೆ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜ್‌ ಮಂಜೂರಾದ ಈ ಭಾಗದ ವಿದ್ಯಾರ್ಥಿಗಳು, ಪಾಲಕರು ಸಂತಸ ವ್ಯಕ್ತಪಡಿಸಿದ್ದರು. ಮೊದಲ ವರ್ಷ ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ನಂತರ ಕಾಲೇಜಿಗೆ ಸೂಕ್ತ ಕಟ್ಟಡ, ಬೋಧನೆಗೆ ಬೇಕಾದ ಉಪಕರಣ, ನೀರು, ಶೌಚಾಲಯ ಸೇರಿ ಮೂಲ ಸೌಲಭ್ಯ ಕೊರತೆಯಿಂದ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತ ಬಂದಿದೆ. ಕಳೆದ ವರ್ಷ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಆದರೆ ಪ್ರಸಕ್ತ ವರ್ಷ ಸಿವಿಲ್ಗೆ 9 ಮತ್ತು ಮೆಕ್ಯಾನಿಕಲ್ ಕೋರ್ಸ್‌ಗೆ 8 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದು, ಒಟ್ಟಾರೆ ಕಾಲೇಜಿನಲ್ಲಿ ಕೇವಲ 38 ವಿದ್ಯಾರ್ಥಿಗಳಿದ್ದಾರೆ.

ಪ್ರವೇಶ ಹಿಂದೇಟು: ಸರಕಾರಿ ಪಾಲಿಟೆಕ್ನಿಕ್‌ ಕಾಲೇಜ್‌ನಲ್ಲಿ ಕಂಪ್ಯೂಟರ್ ಸೈನ್ಸ್‌, ಎಲೆಕ್ಟ್ರಿಕಲ್ ಕೋರ್ಸ್‌ಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಮುಂದೆ ಬರುತ್ತಿಲ್ಲ. ಈ ಕೋರ್ಸ್‌ ಕಲಿತರೆ ದೂರದ ಬೆಂಗಳೂರಿನಂತಹ ಮಹಾನಗರಗಳಿಗೆ ಕೆಲಸಕ್ಕೆ ಹೋಗಬೇಕಾಗುತ್ತದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಾರೆ ಕಾಲೇಜಿನ ಉಪನ್ಯಾಸಕರು. ಸಿವಿಲ್, ಮೆಕ್ಯಾನಿಕಲ್ ಕೋರ್ಸ್‌ಗಳಿಗೆ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ.

ಆದರೆ ಕಾಲೇಜಿನಲ್ಲಿ ವಿಷಯವಾರು ಉಪನ್ಯಾಸಕರು ಇದ್ದರೂ, ವಿದ್ಯಾರ್ಥಿಗಳು ಪ್ರವೇಶಕ್ಕೆ ಮುಂದಾಗುತ್ತಿಲ್ಲ ಎನ್ನಲಾಗಿದೆ.

Advertisement

ಪ್ರವೇಶಕ್ಕೆ ಜಾಗೃತಿ: ಸರಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಪ್ರವೇಶ ಪಡೆಯುವಂತೆ ಕಾಲೇಜಿನ ಆಡಳಿತ ಮಂಡಳಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೂ ಮುನ್ನವೇ ಪಟ್ಟಣದ ಪ್ರೌಢಶಾಲೆಗೆ ಹೋಗಿ 10ನೇ ತರಗತಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶ ನಂತರ ಇಲ್ಲಿನ ವಿದ್ಯಾರ್ಥಿಗಳು ಬೇರೆ ಬೇರೆ ಜಿಲ್ಲೆಗಳಿಗೆ ಅಧ್ಯಯನಕ್ಕೆ ಹೋಗುವುದರಿಂದ ಪಟ್ಟಣದ ಪಾಲಿಟೆಕ್ನಿಕ್‌ ಕಾಲೇಜ್‌ನಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ.

ಪ್ರಾಚಾರ್ಯ ಹುದ್ದೆ ಖಾಲಿ: 2018ರಲ್ಲಿ ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಚಾರ್ಯರ ನಿವೃತ್ತಿ ನಂತರ ಹುದ್ದೆ ಭರ್ತಿ ಆಗಿಲ್ಲ. ಉಪನ್ಯಾಸಕರೇ ಪ್ರಭಾರಿ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 12 ಜನ ಉಪನ್ಯಾಸಕರಿದ್ದಾರೆ. 6 ಜನ ಸಿಬ್ಬಂದಿ ಇದ್ದಾರೆ. ಪರಿಚಾರಕ, ರಾತ್ರಿ ಕಾವಲುಗಾರ ಹುದ್ದೆ ಖಾಲಿ ಇದ್ದು, ಖಾಸಗಿ ಟೆಂಡರ್‌ ಮೂಲಕ ಹುದ್ದೆ ಭರ್ತಿ ಮಾಡಲಾಗಿದೆ.

ಹೆಚ್ಚಿನ ಪ್ರವೇಶಕ್ಕಾಗಿ ಶಾಲೆಗಳಿಗೆ ಹೋಗಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗಿದೆ. ಕುಡಿಯುವ ನೀರು, ಕಾಂಪೌಂಡ್‌ ಸೇರಿ ಮೂಲ ಸೌಲಭ್ಯಗಳು ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
••ಶಫೀಕ್‌ ಅಹ್ಮದ್‌,
ಪ್ರಭಾರಿ ಪ್ರಾಚಾರ್ಯ

ಸರಕಾರಿ ಪಾಲಿಟೆಕ್ನಿಕ್‌ ಕಾಲೇಜ್‌ ಕಟ್ಟಡ ನಿರ್ಮಾಣಕ್ಕೆ ಅನುದಾನ ವಿಳಂಬವಾಗಿದ್ದಕ್ಕೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಕಾಮಗಾರಿ ಆರಂಭಿಸಲಾಗಿದೆ. ಆದಷ್ಟು ಬೇಗನೆ ಕೆಲಸ ಮುಗಿಸಲು ಕ್ರಮ ಕೈಗೊಳ್ಳಲಾಗುತ್ತದೆ.
••ರಾಠೊಡ,
ಎಇಇ ಲ್ಯಾಂಡ್‌ಆರ್ಮಿ

Advertisement

Udayavani is now on Telegram. Click here to join our channel and stay updated with the latest news.

Next