Advertisement

ನದಿ ತೀರದ ಗ್ರಾಮಗಳಲ್ಲಿ ಮುಂಜಾಗ್ರತೆಗೆ ಸೂಚನೆ

03:45 PM Jul 31, 2019 | Naveen |

ದೇವದುರ್ಗ: ನಾರಾಯಣಪುರ ಬಸವಸಾಗರ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ 1.63 ಲಕ್ಷ ಕ್ಯೂಸೆಕ್‌ ನೀರನ್ನು ಹರಿಬಿಟ್ಟಿದ್ದರಿಂದ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಅಧಿಕಾರಿಗಳು ಮುಂಜಾಗ್ರತೆಗೆ ಕ್ರಮ ವಹಿಸಬೇಕು ಎಂದು ತಹಶೀಲ್ದಾರ್‌ ಮಂಜುನಾಥ ಸೂಚಿಸಿದರು.

Advertisement

ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಮಟ್ಟದ ಅಧಿಕಾರಿಗಳ ತುರ್ತು ಸಭೆ ನಡೆಸಿದ ಅವರು, ನದಿಯಲ್ಲಿ ಪ್ರವಾಹ ಭೀತಿ ಉಂಟಾದ ಹಿನ್ನೆಲೆಯಲ್ಲಿ ತಾಲೂಕಿನ ಅಧಿಕಾರಿಗಳು ರಜೆ ಮೇಲೆ ತೆರಳದಂತೆ ಜಿಲ್ಲಾಡಳಿತ ಆದೇಶಿಸಿದೆ. ಇದನ್ನು ಎಲ್ಲ ಅಧಿಕಾರಿಗಳು ಪಾಲಿಸಬೇಕು ಎಂದರು.

ಗ್ರಾಮ ಪಂಚಾಯಿತಿ ಅಧಿಕಾರಿಗಳು ನದಿ ತೀರದ ಗ್ರಾಮಗಳಲ್ಲಿ ಡಂಗೂರ ಸಾರಿ ಜನತೆಗೆ ಕೃಷ್ಣಾ ನದಿಗೆ ಇಳಿಯದಂತೆ, ಜಾನುವಾರುಗಳನ್ನು ಬಿಡದಂತೆ ಜಾಗೃತಿ ಮೂಡಿಸಬೇಕು. ಗ್ರಾಪಂ ಅಧಿಕಾರಿಗಳು ರಜೆ ಹಾಕದಂತೆ ಸೂಚನೆ ನೀಡಬೇಕು ಎಂದು ತಾಪಂ ಕಾ.ನಿ. ಅಧಿಕಾರಿ ಹಾಲಸಿದ್ದಪ್ಪ ಪೂಜೇರಿ ಅವರಿಗೆ ಸೂಚಿಸಿದರು.

ಶ್ರಾವಣ ಮಾಸ ಆರಂಭವಾಗಲಿದೆ. ಕೃಷ್ಣಾ ನದಿ ತೀರದ ತಾಲೂಕಿನ ಅಣೆಮಲ್ಲೇಶ್ವರ, ಗೂಗಲ್, ಹೂವಿನಹೆಡಗಿ, ವೀರಗೋಟ, ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಅತಿ ಹೆಚ್ಚು ಭಕ್ತರು ಆಗಮಿಸುತ್ತಾರೆ. ದೇವಸ್ಥಾನಗಳಲ್ಲಿ ಬಂದೋಬಸ್ತ್ಗೆ ಕ್ರಮ ವಹಿಸುವಂತೆ ಸಿಪಿಐ ಲೋಕೇಶ ಅವರಿಗೆ ತಹಶೀಲ್ದಾರ್‌ ಸೂಚಿಸಿದರು.

ಕೃಷ್ಣಾ ನದಿಯಲ್ಲಿ ಪ್ರವಾಹ ಉಂಟಾಗಿ ಗ್ರಾಮಸ್ಥರು ತೊಂದರೆಗೆ ಸಿಲುಕಿದರೆ ಅವರ ರಕ್ಷಣೆಗೆ ಲೈಪ್‌ ಜಾಕೆಟ್, ದೋಣಿ ಮತ್ತು ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದರು.

Advertisement

ನದಿ ದಂಡೆಯಲ್ಲಿರುವ ವಿದ್ಯುತ್‌ ಕಂಬಗಳಿಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಬೇಕು. ಜೆಸ್ಕಾಂ ಸಿಬ್ಬಂದಿ ಕಂಬ ಏರದಂತೆ ನೋಡಿಕೊಳ್ಳಬೇಕು. ಗ್ರಾಮಗಳಲ್ಲಿ ವಿದ್ಯುತ್‌ ಸಮಸ್ಯೆ ಆಗದಂತೆ ಕ್ರಮ ವಹಿಸಬೇಕು ಎಂದು ಜೆಸ್ಕಾಂ ಎಇಇ ಬಸವರಾಜ ಚವ್ಹಾಣ ಅವರಿಗೆ ತಹಶೀಲ್ದಾರ್‌ ಸೂಚಿಸಿದರು.

ನದಿಯಿಂದ ಕುಡಿಯುವ ನೀರಿನ ಘಟಕಗಳಿಗೆ ನೀರು ಸರಬರಾಜು ಮಾಡಲು ನದಿ ತೀರದಲ್ಲಿ ಮೋಟರ್‌ಗಳನ್ನು ಹಾಕಲಾಗಿತ್ತು. ಈಗ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿದ್ದರಿಂದ ಮೋಟರ್‌ಗಳನ್ನು ತೆಗೆಯಲಾಗಿದೆ. ನದಿಪಾತ್ರದ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಆಗದಂತೆ ಕ್ರಮ ವಹಿಸಲು ಜಿಪಂ ಎಇಇ ವೆಂಕಟೇಶ ಗಲಗ ಅವರಿಗೆ ಸೂಚನೆ ನೀಡಿದರು.

ಜಾನುವಾರುಗಳಿಗೆ ನೀರು, ಮೇವು ಮತ್ತು ಔಷಧ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಪಶು ವೈದ್ಯಾಧಿಕಾರಿಗೆ ಸೂಚಿಸಲಾಯಿತು. ತಾಲೂಕಿನ ನದಿ ತೀರದ ಗ್ರಾಮಗಳ ವ್ಯಾಪ್ತಿಯ ಸಹಾಯಕ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ರಜೆ ಮೇಲೆ ಹೋಗದಂತೆ ನೋಡಿಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಬನದೇಶ ಅವರಿಗೆ ಸೂಚಿಸಿದರು.

ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾದರೆ ತುರ್ತಾಗಿ ಗಂಜಿ ಕೇಂದ್ರ ತೆರೆಯಲು ಕ್ರಮ ವಹಿಸಬೇಕು. ಗಂಜಿ ಕೇಂದ್ರಕ್ಕೆ ಅಗತ್ಯ ಆಹಾರ ಸರಬರಾಜು ಮಾಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗೆ ಸೂಚಿಸಲಾಯಿತು. ಕಂದಾಯ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ರಾಜ್ಯ ಹೆದ್ದಾರಿ ಬಂದ್‌ ಸಂಭವ: ಬಸವಸಾಗರ ಜಲಾಶಯದಿಂದ ಇನ್ನೂ ಹೆಚ್ಚಿನ ಪ್ರಮಾಣದ ನೀರು ಹರಿಬಿಡುವ ಸಾಧ್ಯತೆ ಇದ್ದು, ದೇವದುರ್ಗ-ಕಲಬುರಗಿ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಬಂದಾಗುವ ಲಕ್ಷಣ ಕಂಡುಬರುತ್ತಿದೆ. ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಇನ್ನೂ ಹೆಚ್ಚಿನ ಪ್ರಮಾಣದ ನೀರು ಹರಿಬಿಡುವ ಸಾಧ್ಯತೆ ಇದೆ. 2 ಲಕ್ಷ ಕ್ಯೂಸೆಕ್‌ ನೀರು ಬಿಟ್ಟರೆ ಕೊಪ್ಪರ ಗ್ರಾಮದ ಲಕ್ಷ್ಮೀನರಸಿಂಹ ದೇವಸ್ಥಾನ ಜಲಾವೃತವಾಗುವ ಸಂಭವವಿದೆ.

ನದಿ ದಂಡೆಯಲ್ಲಿ ಬಟ್ಟೆ ತೊಳೆದ ಮಹಿಳೆಯರು: ಕೃಷ್ಣಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ತಾಲೂಕು ಆಡಳಿತ ನದಿ ತೀರದ ಗ್ರಾಮಗಳಲ್ಲಿ ಡಂಗೂರ ಸಾರಿ ನದಿ ದಂಡೆಗೆ ಹೋಗದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ. ಆದರೂ ಕೊಪ್ಪರ ಗ್ರಾಮದ ನದಿ ದಂಡೆಯಲ್ಲಿ ಮಹಿಳೆಯರು ಲಕ್ಷ್ಮೀ ನರಸಿಂಹ ದೇವಸ್ಥಾನ ಪಕ್ಕದ ನದಿ ದಂಡೆಯಲ್ಲಿ ಬಟ್ಟೆ ಒಗೆಯುತ್ತಿದ್ದಾರೆ. ತಾಲೂಕು ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡುಇದನ್ನು ತಡೆಯಬೇಕೆಂದು ಗ್ರಾಮಸ್ಥ ಅನಿಲಕುಮಾರ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next