Advertisement

ಅಕ್ರಮ ಚಟುವಟಿಕೆಗಳಿಗೆ ಶೀಘ್ರ ಕಡಿವಾಣ

11:09 AM Jun 15, 2019 | Naveen |

ದೇವದುರ್ಗ: ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮೊದಲ ಹಂತದ ಕ್ರಮ ಕೈಗೊಳ್ಳಲಾಗಿದೆ ಎಂದು ನೂತನ ಎಸ್‌ಪಿ ಡಾ| ಸಿ.ಎಸ್‌. ವೇದಮೂರ್ತಿ ತಿಳಿಸಿದರು.

Advertisement

ಪಟ್ಟಣದ ಪೊಲೀಸ್‌ ಠಾಣೆ ಮತ್ತು ವೃತ್ತ ನಿರೀಕ್ಷಕರ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯಚೂರು ಗ್ರಾಮೀಣ, ಸಿರವಾರ ಮತ್ತು ಲಿಂಗಸುಗೂರು ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳಾಗಿವೆ. ಬೀಗ ಹಾಕಿದ ಮನೆಗಳನ್ನು ಗಮನಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ನಾಗರಿಕರು ಕೂಡ ಜಾಗೃತರಾಗಿ ಬ್ಯಾಂಕ್‌ಗಳಲ್ಲಿ ವ್ಯವಹಾರ ಇಟ್ಟುಕೊಳ್ಳುವುದರ ಜತೆಗೆ ಅನಿವಾರ್ಯವಾಗಿ ಬೇರೆಡೆ ಹೋಗುವ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಬೇಕು. ಈ ತಾಲೂಕಿನಲ್ಲಿ ಮಟ್ಕಾ ಜೂಜಾಟ ಮತ್ತು ಅಕ್ರಮ ಮರಳು ದಂಧೆ ಕುರಿತು ಗಮನಿಸಿರುವೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆ ಸಹಯೋಗದೊಂದಿಗೆ ಕಡಿವಾಣ ಹಾಕಲು ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದರು.

ತಾಲೂಕಿನಾದ್ಯಂತ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಂಥ ದಂಧೆಯಲ್ಲಿ ಎಷ್ಟೇ ಪ್ರಭಾವಿಗಳಿದ್ದರೂ ಮುಲಾಜಿಲ್ಲಾದೇ ಕ್ರಮ ತೆಗೆದುಕೊಳ್ಳಲಾಗುವುದು. ಅಕ್ರಮ ದಂಧೆಯಲ್ಲಿ ಯಾರೇ ಇದ್ದರೂ ಪ್ರಭಾವಕ್ಕೆ ಒಳಗಾಗುವುದಿಲ್ಲ. ಪೊಲೀಸ್‌ ಇಲಾಖೆಯಲ್ಲಿ ಕೆಲವರು ಕೂಡ‌(ಮರಳು ಸಾಗಾಣಿಕೆಗೆ ಟಿಪ್ಪರ್‌ ಇಟ್ಟಿರುವುದು) ಭಾಗಿಯಾಗಿರುವ ಕುರಿತು ಮೊದಲ ಬಾರಿಗೆ ನನ್ನ ಗಮನಕ್ಕೆ ಬಂದಿದೆ. ಸೂಕ್ತ ತನಿಖೆ ಮಾಡಿ ಕ್ರಮಗೊಳ್ಳಲಾಗುವುದು ಎಂದು ತಿಳಿಸಿದರು.

ಮಟ್ಕಾ ದಂಧೆ ಅವ್ಯಾಹತವಾಗಿ ನಡೆಯುತ್ತಿವೆ ಎಂದು ಗಮನಸೆಳದಾಗ ಹಂತ ಹಂತವಾಗಿ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುತ್ತದೆ. ಮರಳು ಸಾಗಣೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಚರ್ಚಿಸಿ ಕಡಿವಾಣ ಹಾಕಲು ಕ್ರಮಕೈಗೊಳ್ಳಲಾಗುವುದು. ಪೊಲೀಸ್‌ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಮಾಹಿತಿ ಪಡೆಯಲಾಗಿದೆ. ಸರಕಾರ ಮಟ್ಟದಲ್ಲಿ ನೇಮಕಾತಿ ನಡೆಯುತ್ತದೆ ಎಂದು ತಿಳಿಸಿದರು. ಸಿಪಿಐ ಲೋಕೇಶ, ಪಿಎಸ್‌ಐ ಎಲ್.ಬಿ. ಅಗ್ನಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next