Advertisement

ದೇವದುರ್ಗ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಮುಹೂರ್ತ ಫಿಕ್ಸ್‌

03:29 PM Mar 17, 2020 | Suhan S |

ದೇವದುರ್ಗ: ಸ್ಥಳೀಯ ಪುರಸಭೆಗೆ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಳ್ಳುತ್ತಿದ್ದಂತೆ ಇದೀಗ ಚುನಾವಣೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಮಾ.21ರಂದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

Advertisement

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಕಾಂಗ್ರೆಸ್‌, ಬಿಜೆಪಿ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ.

ಪುರಸಭೆಯ 23 ಸದಸ್ಯರಲ್ಲಿ ಕಾಂಗ್ರೆಸ್‌ 11, ಬಿಜೆಪಿ 8, ಜೆಡಿಎಸ್‌ ನ 3 ಮತ್ತು ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಪಕ್ಷೇತರ ಸದಸ್ಯೆ ಕಾಂಗ್ರೆಸ್‌ ಬೆಂಬಲಿತ ಎಂದು ಹೇಳಲಾಗುತ್ತಿದೆ. ಯಾವ ಪಕ್ಷಕ್ಕೂ ಬಹುಮತ ಇಲ್ಲ. ಹೀಗಾಗಿ ಇಲ್ಲಿ ಜೆಡಿಎಸ್‌ ಸದಸ್ಯರೇ ನಿರ್ಣಾಯಕರಾಗಲಿದ್ದಾರೆ. ಆದರೆ ಅವರ ನಡೆ ನಿಗೂಢವಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಪಕ್ಷದಲ್ಲಿ ಸದಸ್ಯರಾದ ಶರಣಗೌಡ ಗೌರಂಪೇಟ ಮತ್ತು ವೆಂಕಟೇಶ ಮಕ್ತಲ್‌ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಮಾನಪ್ಪ ಮೇಸ್ತ್ರಿ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಭೀಮನಗೌಡ ಮೇಟಿ ಅಧ್ಯಕ್ಷ ಸ್ಥಾನಕ್ಕೆ, ಉಪಾಧ್ಯಕ್ಷ ಸ್ಥಾನಕ್ಕೆ ಶಿವಮ್ಮ ಶರಣಪ್ಪ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಎಚ್ಡಿಕೆ ನಿರ್ಣಯ: ನಿರ್ಣಾಯಕ ಪಾತ್ರ ವಹಿಸಲಿರುವ ಜೆಡಿಎಸ್‌ ಸದಸ್ಯರು ಯಾರನ್ನು ಬೆಂಬಲಿಸಬೇಕೆಂಬುದನ್ನು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ನಿರ್ಧರಿಸಲಿದ್ದಾರೆ ಎನ್ನಲಾಗಿದೆ. ಜೆಡಿಎಸ್‌ ಮುಖಂಡರಾದ ಕರೆಮ್ಮ ಗೋಪಾಲಕೃಷ್ಣ ಚಿಂತಲಕುಂಟಿ ಮತ್ತು ಬುಡ್ಡನಗೌಡ ಜಾಗಟಕಲ್‌ ನೇತೃತ್ವದಲ್ಲಿ ಜೆಡಿಎಸ್‌ ಸದಸ್ಯರು ಬೆಂಗಳೂರಿನಲ್ಲಿ ಬಿಡಾರ ಹೂಡಿದ್ದಾರೆ.

Advertisement

ಸದಸ್ಯರಿಗೆ ಪ್ರವಾಸಕ್ಕೆ: ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌, ಬಿಜೆಪಿಯಲ್ಲಿ ಪೈಪೋಟಿ ಲಕ್ಷಣ ಕಂಡುಬರುತ್ತಿದ್ದಂತೆ ಬಿಜೆಪಿ6 8 ಸದಸ್ಯರು ಮತ್ತು ಕಾಂಗ್ರೆಸ್‌ನ 10 ಸದಸ್ಯರು ಪ್ರತ್ಯೇಕವಾಗಿ ಪ್ರವಾಸಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಪಕ್ಷೇತರ ಸದಸ್ಯರನ್ನು ಕರೆದುಕೊಂಡು ಬರಲು ಉಪಾಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿರುವ ಕಾಂಗ್ರೆಸ್‌ನ ಮಾನಪ್ಪ ಮೇಸ್ತ್ರಿಗೆ ಜವಾಬ್ದಾರಿ ವಹಿಸಲಾಗಿದ್ದು, ಅವರು ಮಂಗಳವಾರ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಆಪರೇಷನ್‌ ಕಮಲ: ಶಾಸಕ ಕೆ.ಶಿವನಗೌಡ ನಾಯಕ ತಮ್ಮ ಹತ್ತಿರದ ಸಂಬಂಧಿ, ಸದಸ್ಯ ಭೀಮನಗೌಡ ಮೇಟಿಗೆ ಅಧ್ಯಕ್ಷ ಸ್ಥಾನ ಕೊಡಿಸಲು ನಿಗೂಢ ತಂತ್ರ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ಜೆಡಿಎಸ್‌ ಸದಸ್ಯರ ಬೆಂಬಲ ಪಡೆಯುವುದು, ಇಲ್ಲದೇ ಹೋದಲ್ಲಿ ಕಾಂಗ್ರೆಸ್‌ನ 4 ಸದಸ್ಯರನ್ನು ಆಪರೇಷನ್‌ ಕಮಲ ಮಾಡಿ ಸೆಳೆಯುವ ವಿಚಾರ ಹೊಂದಿದ್ದಾರೆ. ಶಾಸಕರು ಮತ್ತು ಸಂಸದರ

ಮತ ಇರುವ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಆಶಾದಾಯಕ ಪ್ರಯತ್ನಗಳನ್ನು ನಡೆಸಿದೆ. ಸಾಮಾನ್ಯ ಕ್ಷೇತ್ರದಲ್ಲಿ ಆಯ್ಕೆಯಾದ ಇಬ್ಬರಸದಸ್ಯರನ್ನು ಕಡೆಗಣಿಸಿ ಸಂಬಂಧಿಕ ಭೀಮನಗೌಡ ಮೇಟಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಹೊರಟಿದ್ದಕ್ಕೆ ಲಿಂಗಾಯತ ಸಮಾಜದಲ್ಲಿ ಅಸಮಾಧಾನ ಶುರುವಾಗಿದೆ.

ಕಾಂಗ್ರೆಸ್‌ಗೆ ಪ್ರತಿಷ್ಠೆ ಪ್ರಶ್ನೆ: ಕಾಂಗ್ರೆಸ್‌ 11 ಸದಸ್ಯ ಬಲ ಹೊಂದಿದ್ದು, ಇದರ ಜತೆಗೆ ಪಕ್ಷೇತರ ಸದಸ್ಯೆ ಕಾಂಗ್ರೆಸ್‌ ಬೆಂಬಲಿತರೇ ಆಗಿದ್ದಾರೆ. ಪಕ್ಷೇತರ ಸದಸ್ಯೆ ಕಾಂಗ್ರೆಸ್‌ಗೆ ಬೆಂಬಲಿಸಿದಲ್ಲಿ 12 ಸದಸ್ಯ ಬಲವಾಗಲಿದೆ. ಹೀಗಾಗಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ, ಮಾಜಿ ಸಂಸದ ಬಿ.ವಿ. ನಾಯಕ ಈ ಬಾರಿ ಪುರಸಭೆ ಗದ್ದುಗೆಯನ್ನು ಕೈವಶ ಮಾಡಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ಮಾವ-ಅಳಿಯರಾದ ಮಾಜಿ ಸಂಸದ ಬಿ.ವಿ. ನಾಯಕ, ಶಾಸಕ ಕೆ. ಶಿವನಗೌಡರ ಜಿದ್ದಾಜಿದ್ದಿಯಲ್ಲಿ ಅಧಿಕಾರ ಯಾವ ಪಕ್ಷಕ್ಕೆ ಒಲಿಯಲಿದೆ ಎಂಬ ಕುತೂಹಲ ಏರ್ಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next