Advertisement

ಅಕ್ರಮ ದಂಧೆಗಳಿಗೆ ಕಡಿವಾಣ ಎಂದು?ಮಟ್ಕಾ, ಅಕ್ರಮ ಮದ್ಯ-ಪೆಟ್ರೋಲ್‌ ಮಾರಾಟ

05:11 PM Jan 16, 2021 | Team Udayavani |

ದೇವದುರ್ಗ: ನಾರಾಯಣಪುರ ಬಲದಂಡೆ ನೀರಾವರಿ ಸೌಲಭ್ಯ ಬಳಿಕ ತಾಲೂಕಿನಾದ್ಯಂತ ಅಕ್ರಮ ಮದ್ಯ, ಮಟ್ಕಾ ಹಾವಳಿ ಹೆಚ್ಚಾಗಿದೆ. ಇದರಿಂದ ಪೊಲೀಸ್‌ ಮತ್ತು ಅಬಕಾರಿ ಇಲಾಖೆಗೆ ನಿತ್ಯ ಸಾರ್ವಜನಿಕರು ಹಾಕುವ ಶಾಪ, ಆಕ್ರೋಶ ಮಾತ್ರ ತಪ್ಪದಂತಾಗಿದೆ. ಪಟ್ಟಣ ಸೇರಿ ತಾಲೂಕಿನಾದ್ಯಂತ ಗ್ರಾಮೀಣ ಭಾಗದಲ್ಲಿ ಮಟ್ಕಾ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ.

Advertisement

ಹೋಟೆಲ್‌, ಪಾನ್‌ಶಾಪ್‌, ಕಿರಾಣಿ ಅಂಗಡಿ ಸೇರಿದಂತೆ ಎಲ್ಲೆಂದರಲ್ಲಿ ಮಟ್ಕಾ ಬರೆಯುವವರ ಸಂಖ್ಯೆ ಹೆಚ್ಚಿದೆ. ಸಂಜೆಯಾಗುತ್ತಿದ್ದಂತೆ ಮಟ್ಕಾ ದಂಧೆ ಜೋರಾಗಿ ನಡೆಯುತ್ತಿದೆ. ಬಡವರು, ಕೂಲಿ ಕಾರ್ಮಿಕರು ದುಡಿದ ಹಣವನ್ನೆಲ್ಲ ಮಟ್ಕಾಕ್ಕೆ ಸುರಿದು ಬೀದಿಗೆ ಬರುತ್ತಿದ್ದು ಅವರ ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ. ಈ ಬಗ್ಗೆ ಗ್ರಾಮದ ಮುಖಂಡರು ಪೊಲೀಸ್‌ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿವೆ.

ಮದ್ಯಕ್ಕೆ ದುಪ್ಪಟ್ಟು ದರ: ಸರ್ಕಾರ ಮದ್ಯ ಮಾರಾಟ ಅಂಗಡಿಗಳಿಗೆ ಪರವಾನಗಿ ನೀಡಿದೆ. ಆದರೆ ಪಟ್ಟಣ ಸೇರಿ ಜಾಲಹಳ್ಳಿ, ಗಬ್ಬೂರು, ಅರಕೇರಾ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದ್ದು, ದುಪ್ಪಟ್ಟು ದರ ವಸೂಲಿ ಮಾಡಲಾಗುತ್ತಿದೆ. ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ಸಾಗಿದ್ದು ಕುಡುಕರ ಹಾವಳಿ ಹೆಚ್ಚಾಗಿದೆ.ಇನ್ನು ಕುಟುಂಬಗಳಲ್ಲಿ ನೆಮ್ಮದಿಯೇ ಇಲ್ಲವಾಗಿದೆ. ಬಾರ್‌ಗಳಿಂದ ಹಳ್ಳಿಗಳಿಗೆ ಮದ್ಯ ವ್ಯಾಪಕವಾಗಿ
ಸಾಗಿಸಲಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಹೆಚ್ಚಿನ ದರಕ್ಕೆ ಮಾರಲಾಗುತ್ತಿದೆ ಎನ್ನುವ ಆರೋಪಗಳು  ದಟ್ಟವಾಗಿವೆ.

ಮಾನ್ವಿಯಲ್ಲಿ ಕಚೇರಿ: ದೇವದುರ್ಗ ಪಟ್ಟಣದಲ್ಲಿ ಅಬಕಾರಿ ಕಚೇರಿ ಇಲ್ಲ. ಬದಲಾಗಿ ಮಾನ್ವಿ ತಾಲೂಕಿನಲ್ಲಿ ಅಬಕಾರಿ ಕಚೇರಿ ಇರುವುದರಿಂದ ಅಕ್ರಮ ಮದ್ಯ ಮಾರಾಟಕ್ಕೆ ಭಯವೇ ಇಲ್ಲದಂತಾಗಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಪಟ್ಟಣದ ಮದ್ಯದಂಗಡಿಗಳಿಗೆ ಭೇಟಿ ನೀಡಿ ಹೋಗುತ್ತಾರೆ. ಆದರೆ ಗ್ರಾಮೀಣ
ಪ್ರದೇಶದತ್ತ ತಿರುಗಿಯೂ ನೋಡುತ್ತಿಲ್ಲ ಎನ್ನುತ್ತಾರೆ ಗ್ರಾಮೀಣರು.

ಪೆಟ್ರೋಲ್‌ ಹಾವಳಿ: ಮಟ್ಕಾ, ಅಕ್ರಮ ಮದ್ಯ ಮಾರಾಟ ಒಂದೆಡೆಯಾದರೆ ಇನ್ನೊಂದೆಡೆ ಅಕ್ರಮ ಪೆಟ್ರೋಲ್‌ ಮಾರಾಟ ಹಾವಳಿ ಕೂಡ ಜನರಿಗೆ ತಲೆನೋವಾಗಿದೆ. ಅಂಗಡಿ, ಪಾನಶಾಪ್‌ ಮುಂದೆ ರಾಜಾರೋಷವಾಗಿ ಪೆಟ್ರೋಲ್‌ ಮಾರಲಾಗುತ್ತಿದೆ. ಮಾರಾಟಕ್ಕೆ ಅ ಧಿಕೃತ ಪರವಾನಗಿ ಇಲ್ಲದಿದ್ದರೂ ವ್ಯಾಪಾರ ಮಾತ್ರ ಜೋರಾಗಿಯೇ ನಡೆಯುತ್ತಿದೆ. ಪೆಟ್ರೋಲ್‌ ಮಾರಾಟದಿಂದ ಪಟ್ಟಣದಲ್ಲಿ ಬೆಂಕಿ ಅವಘಡ ಘಟನೆ ನಡೆದು ಪ್ರಾಣ ಕಳೆದುಕೊಂಡ ನೋವು ಇನ್ನೂ ಜನರ ಸ್ಮೃತಿ ಪಟಲದಿಂದ ದೂರಾಗುವ ಮುನ್ನವೇ ಮತ್ತೆ ಈ ದಂಧೆ ಅವ್ಯಾಹತವಾಗಿ ನಡೆದಿದೆ. ಗ್ರಾಮೀಣ ಪ್ರದೇಶದಲ್ಲಿ ಕೃಷ್ಣಾನದಿ ದಂಡೆ ಗ್ರಾಮಗಳಲ್ಲಿ ಜೂಜಾಟ ಕೂಡ ವ್ಯಾಪಕವಾಗಿ ನಡೆಯುತ್ತಿದ್ದು, ಇವೆಲ್ಲ ಅಕ್ರಮಗಳಿಗೆ ಯಾವಾಗ ಕಡಿವಾಣ ಬೀಳುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.

Advertisement

ಪಟ್ಟಣ ಸೇರಿ ತಾಲೂಕಿನಾದ್ಯಂತ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ದಂಧೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಕಡಿವಾಣ ಹಾಕಬೇಕು. ಅಕ್ರಮ ಮಟ್ಕಾ, ಜೂಜಾಟ, ಮದ್ಯ ಮರಾಟದ ದಂಧೆಗಳಿಗೆ ಕಡಿವಾಣ ಹಾಕಿ, ಇಂತಹ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಹೆಡೆಮುರಿ ಕಟ್ಟಬೇಕು.
ನರಸಣ್ಣ ನಾಯಕ ರೈತ ಸಂಘದ ಅಧ್ಯಕ್ಷ, ಜಾಲಹಳ್ಳಿ

ಅಕ್ರಮ ಮದ್ಯ ಮಾರಾಟದ ಬಗ್ಗೆ ಹಲವು ಪ್ರಕರಣ ದಾಖಲು ಮಾಡಲಾಗಿದೆ. ಸಾರ್ವಜನಿಕರಿಂದ ದೂರು ಬಂದಲ್ಲಿ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ. ಹೆಚ್ಚಿನ ದರ ಮಾರಾಟದ ಬಗ್ಗೆ ಕ್ರಮ ವಹಿಸಲಾಗುತ್ತದೆ.
ಬಸವರಾಜ ಕಾಕರಗಲ್‌, ಅಬಕಾರಿ ಸಿಪಿಐ

ನಾನು ಇತ್ತೀಚಿಗೆ ಅಧಿಕಾರ ವಹಿಸಿಕೊಂಡಿದ್ದೇನೆ. ಅಕ್ರಮ ಕುರಿತು ದೂರುಗಳು ಬಂದಲ್ಲಿ ಕ್ರಮ ವಹಿಸಲಾಗುತ್ತದೆ. ಪೊಲೀಸ್‌ ಇಲಾಖೆಗೆ ಸಾರ್ವಜನಿಕರ ಸಹಕಾರ ಅಗತ್ಯ.
ಸಣ್ಣಮನಿ, ಪೊಲೀಸ್‌ ಇನ್ಸ್‌ಸ್ಪೆಕ್ಟರ್‌

*ನಾಗರಾಜ ತೇಲ್ಕರ್

Advertisement

Udayavani is now on Telegram. Click here to join our channel and stay updated with the latest news.

Next