ದೇವದುರ್ಗ: ತಾಲೂಕಿನ ಗೂಗಲ್ ಕ್ಲಸ್ಟರ್ ವ್ಯಾಪ್ತಿಯ ಮಶಿಹಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ವರ್ಷಗಳಿಂದ ಕಾಯಂ ಶಿಕ್ಷಕರಿಲ್ಲದ್ದರಿಂದ ಅತಿಥಿ ಶಿಕ್ಷಕರೇ ಆಧಾರವಾಗಿದ್ದಾರೆ.
ಮಶಿಹಾಳ ಸ.ಕಿ.ಪ್ರಾ. ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 74 ವಿದ್ಯಾರ್ಥಿಗಳಿದ್ದಾರೆ. ಪ್ರಭಾರಿ ಮುಖ್ಯಶಿಕ್ಷಕ ಶಾಲೆ ಕೆಲಸ ಕಾರ್ಯಕ್ಕಾಗಿ ಶಿಕ್ಷಣಾಧಿಕಾರಿಗಳ ಕಚೇರಿಗೆ, ಆನ್‌ಲೈನ್‌ನಲ್ಲಿ ಮಕ್ಕಳ ಮಾಹಿತಿ ಸಲ್ಲಿಕೆ ಮುಂತಾದ ಕೆಲಸಕ್ಕೆ ಅಲೆಯಬೇಕಿದೆ. ಹೀಗಾಗಿ ಇರುವ ಇಬ್ಬರು ಅತಿಥಿ ಶಿಕ್ಷಕರು 1ರಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಪಾಠ ಮಾಡಬೇಕಿದೆ. 1ರಿಂದ 3ನೇ ತರಗತಿವರೆಗೆ ನಲಿಕಲಿ ಮೂಲಕ ಶಿಕ್ಷಣ ಆರಂಭವಾಗುತ್ತದೆ. ಆದರೆ ಮಕ್ಕಳಿಗೆ ನಲಿಕಲಿ ತರಬೇತಿ ಪಡೆದ ಶಿಕ್ಷಕರಿಲ್ಲ. ಅತಿಥಿ ಶಿಕ್ಷಕರೇ ಬೋಧಿಸುತ್ತಿರುವುದರಿಂದ ಗುಣಮಟ್ಟದ ಶಿಕ್ಷಣ ಗಗನಕುಸುಮವಾಗಿದೆ.
ಕಟ್ಟಡ ಶಿಥಿಲ: ಇನ್ನು ಮಶಿಹಾಳ ಸ.ಕಿ.ಪ್ರಾ. ಶಾಲೆ ಕಟ್ಟಡ ಶಿಥಿಲಗೊಂಡಿದೆ. ಮೇಲ್ಛಾವಣಿ ಸಿಮೆಂಟ್ ಉದುರಿ ಕಬ್ಬಿಣದ ಸರಳುಗಳು ಕಾಣುತ್ತಿವೆ. ಮಳೆ ಬಂದರೆ ಕಟ್ಟಡ ಸೋರುತ್ತದೆ. ಮಳೆ ಬಂದರೆ ಶಾಲೆಗೆ ಅಘೋಷಿತ ರಜೆ ನೀಡಲಾಗುತ್ತದೆ. ಇನ್ನು ಶಾಲಾ ಕಟ್ಟಡಕ್ಕೆ ಭೂ ದಾನಿಗಳು ಜಾಗೆ ನೀಡಿದ್ದಾರೆ. ಭೂ ದಾನಿಗಳಿಂದ ಪಡೆದ ಜಾಗೆಯನ್ನು ಮೊದಲು ರಾಜ್ಯಪಾಲರ ಹೆಸರಿಗೆ ನೋಂದಾಯಿಸಬೇಕು. ಆದರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಈವರೆಗೆ ರಾಜ್ಯಪಾಲರ ಹೆಸರಿಗೆ ನೋಂದಣಿ ಮಾಡಿಸಿಲ್ಲ. ಇನ್ನೂ ಜಾಗೆ ಭೂ ದಾನಿಗಳ ಹೆಸರಲ್ಲೇ ಇದೆ ಎನ್ನಲಾಗಿದೆ.
ಸೌಲಭ್ಯ ಕೊರತೆ: ಶಾಲೆಯಲ್ಲಿ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲ. ಶೌಚಾಲಯವಿದ್ದರೂ ನೀರು, ನಿರ್ವಹಣೆ ಕೊರತೆಯಿಂದ ಬಳಕೆಗೆ ಯೋಗ್ಯವಿಲ್ಲ. ಮಕ್ಕಳು ಮೂತ್ರ ವಿಸರ್ಜನೆಗೆ ಬಯಲನ್ನೇ ಆಶ್ರಯಿಸುವಂತಾಗಿದೆ. ಶಾಲೆಯಲ್ಲಿ ಕಾಯಂ ಶಿಕ್ಷಕರ ಕೊರತೆ ಮತ್ತು ಸೌಲಭ್ಯಗಳ ಕೊರತೆ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೌಲಭ್ಯ ಕಲ್ಪಿಸಬೇಕು. ಕಾಯಂ ಶಿಕ್ಷಕರನ್ನು ನೇಮಿಸಬೇಕು ದಲಿತ ಮುಖಂಡ ಶಾಂತಕುಮಾರ ಹೊನ್ನಟಗಿ ಆಗ್ರಹಿಸಿದ್ದಾರೆ.
ಕಳೆದ ಎರಡ್ಮೂರು ದಿನಗಳ ಹಿಂದೆ ಅಧಿಕಾರ ವಹಿಸಿಕೊಂಡಿದ್ದೇನೆ. ಮಶಿಹಾಳ ಶಾಲೆ ಸಮಸ್ಯೆ ಕುರಿತು ಸಂಬಂಧಪಟ್ಟ ಸಿಆರ್‌ಪಿಯಿಂದ ಮಾಹಿತಿ ಪಡೆದು ಕ್ರಮ ವಹಿಸಲಾಗುತ್ತದೆ.
ಆರ್.ಇಂದಿರಾ,
ಕ್ಷೇತ್ರ ಶಿಕ್ಷಣಾಧಿಕಾರಿ
ನಾಗರಾಜ ತೇಲ್ಕರ್