ದೇವದುರ್ಗ: ಸ್ಥಳೀಯ ಪುರಸಭೆ ಚುನಾವಣೆ ಮುಗಿದೂ ಫಲಿತಾಂಶ ಪ್ರಕಟಗೊಂಡು ವರ್ಷವಾದರೂ ಸದಸ್ಯರ ಕೈಗೆ ಅಧಿಕಾರ ಸಿಗದ್ದಕ್ಕೆ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.
2018ರ ಆಗಸ್ಟ್ 31ರಂದು ಸ್ಥಳೀಯ ಪುರಸಭೆಯ 23 ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು. ಸೆ.3ರಂದು ಫಲಿತಾಂಶ ಪ್ರಕಟವಾಗಿತ್ತು. ಕಾಂಗ್ರೆಸ್ ಪಕ್ಷದಿಂದ 11 ಜನ ಸದಸ್ಯರು, ಬಿಜೆಪಿ 8, ಜೆಡಿಎಸ್‌ನ 3 ಮತ್ತು ಒಬ್ಬ ಪಕ್ಷೇತರ ಸದಸ್ಯರು ಗೆದ್ದು ನಗೆ ಬೀರಿದ್ದರು. ಆದರೆ ವರ್ಷವಾದರೂ ಆಡಳಿತ ಮಂಡಳಿ ರಚನೆ ಆಗದ್ದಕ್ಕೆ ಗೆದ್ದು ನಗೆ ಬೀರಿದ್ದ ಸದಸ್ಯರ ಮೊಗದಲ್ಲಿ ಮೊದಲಿದ್ದ ಉತ್ಸಾಹ, ಹುಮ್ಮಸ್ಸು ಈಗ ಕಮರಿ ಹೋಗಿದೆ.
ಆರಂಭದಲ್ಲಿ 5 ವರ್ಷ ಅಧಿಕಾರ ಅನುಭವಿಸಬೇಕು, ಪಟ್ಟಣದ ಜ್ವಲಂತ ಸಮಸ್ಯೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ಉತ್ಸಾಹ ಸದಸ್ಯರಲ್ಲಿತ್ತು. ಇದೀಗ ಒಂದು ವರ್ಷ ಅಧಿಕಾರವಿಲ್ಲದೇ ವ್ಯರ್ಥವಾಗಿದ್ದರಿಂದ ಬಹುತೇಕ ಸದಸ್ಯರಲ್ಲಿ ನಿರಾಸೆ ಮೂಡಿದೆ. ಚುನಾವಣೆಯಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಆಯ್ಕೆಯಾದ ಸದಸ್ಯರು ತಮ್ಮ ಕೈಗೆ ಅಧಿಕಾರ ಸಿಗದ್ದಕ್ಕೆ ಯಾಕಾದರೂ ಚುನಾವಣೆಗೆ ನಿಂತೇವೋ ಎಂದು ಪೇಚಾಡುವಂತಾಗಿದೆ.
ಸಮಸ್ಯೆಗಿಲ್ಲ ಸ್ಪಂದನೆ: ತೀರ್ಪಿನ ನಿರೀಕ್ಷೆಯಲ್ಲಿ ಸದಸ್ಯರು: ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ವಿರುದ್ಧ ಕೆಲ ಸ್ಥಳೀಯ ಸಂಸ್ಥೆಗಳ ಸದಸ್ಯರು ಹೈಕೋರ್ಟ್ ಮೊರೆ ಹೋಗಿದ್ದರಿಂದ ಆಡಳಿತ ಮಂಡಳಿ ರಚನೆ ಆಗಿಲ್ಲ. ಹೈಕೋರ್ಟ್ ತೀರ್ಪಿಗಾಗಿ ಸದಸ್ಯರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಹೈಕೋರ್ಟ್ ತೀರ್ಪು ಪ್ರಕಟವಾಗಲಿದೆ ಎನ್ನಲಾಗಿದೆ. ಹೀಗಾಗಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬಿಜೆಪಿ-ಕಾಂಗ್ರೆಸ್ ಒಳಗೊಳಗೆ ಪ್ರಯತ್ನ ನಡೆಸಿದ್ದು, ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರನ್ನು ಸೆಳೆಯಲು ತಂತ್ರ ಹೆಣೆಯುತ್ತಿವೆ ಎನ್ನಲಾಗಿದೆ.
ಇನ್ನು ವಾರ್ಡ್‌ಗಳಲ್ಲಿ ರಸ್ತೆ, ಚರಂಡಿ ಸ್ವಚ್ಛತೆ, ಬೀದಿ ದೀಪ, ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ ಇವೆ. ಇಂತಹ ಸಮಸ್ಯೆಗಳನ್ನು ನಿವಾಸಿಗಳು ತಮ್ಮ ಗಮನಕ್ಕೆ ತರುತ್ತಿದ್ದಾರೆ. ತಾವು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಅಧಿಕಾರಿಗಳು ಆಡಿದ್ದೇ ಆಟವಾಗಿದೆ. ತಮ್ಮ ಮಾತಿಗೆ ಪುರಸಭೆ ಮುಖ್ಯಾಧಿಕಾರಿಗಳಾಗಲಿ, ಉಳಿದ ವಿಭಾಗದ ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲಿ ಬೆಲೆ ನೀಡುತ್ತಿಲ್ಲ ಎಂದು ಸದಸ್ಯರು ಅಳಲು ತೋಡಿಕೊಂಡಿದ್ದಾರೆ. ಇನ್ನು ಪುರಸಭೆ ಆಡಳಿತ ಅಧಿಕಾರಿಯಾದ ರಾಯಚೂರು ಸಹಾಯಕ ಆಯುಕ್ತರು ಇಲ್ಲಿಗೆ ಒಮ್ಮೆ ಬಂದು ಹೋದವರು ತಿರುಗಿ ಬಂದಿಲ್ಲ. ಪುರಸಭೆ ಮುಖ್ಯಾಧಿಕಾರಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದಕ್ಕಿಂತ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಿಟಿಂಗ್ ನೆಪದಲ್ಲಿ ಗೈರು ಆಗುವುದು ಸಾಮಾನ್ಯವಾಗಿದೆ ಎಂದು ಸದಸ್ಯರು ದೂರಿದ್ದಾರೆ.