Advertisement

ಕೃಷ್ಣೆ ಉಕ್ಕಿ ಹರಿದರೂ ಟ್ಯಾಂಕರ್‌ ನೀರೇ ಗತಿ

11:23 AM Aug 25, 2019 | Naveen |

ನಾಗರಾಜ ತೇಲ್ಕರ್‌
ದೇವದುರ್ಗ:
ತಾಲೂಕಿನಲ್ಲಿ ಹರಿದಿರುವ ಕೃಷ್ಣಾ ನದಿ ಉಕ್ಕಿ ಹರಿದರೂ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಜನ ಪರದಾಡುವಂತಾಗಿದೆ.

Advertisement

ಕೃಷ್ಣಾ ನದಿ ಪ್ರವಾಹದಿಂದಾಗಿ ಪಟ್ಟಣಕ್ಕೆ ನೀರು ಪೂರೈಸುವ ಗಾಗಲ್ ಬಳಿಯ ಜಾಕ್‌ವೆಲ್ಗೆ ವಿದ್ಯುತ್‌ ಒದಗಿಸುವ ಮೂರು ಪರಿವರ್ತಕಗಳುಮುಳುಗಡೆ ಆಗಿ ದುರಸ್ತಿಗೀಡಾಗಿದ್ದರಿಂದ ಪಟ್ಟಣದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದ್ದು, ಪುರಸಭೆಯಿಂದ ಎಲ್ಲ ವಾರ್ಡ್‌ಗಳಿಗೆ ನಿತ್ಯ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ.

ಪ್ರವಾಹದಿಂದಾಗಿ ಗಾಗಲ್ ಬಳಿಯ ಜಾಕ್‌ವೆಲ್ನಲ್ಲಿ ವಿದ್ಯುತ್‌ ಪರಿವರ್ತಕ ಸೇರಿ ಇತರೆ ಯಂತ್ರೋಪಕರಣ ದುರಸ್ತಿಗೀಡಾಗಿವೆ. ಕಳೆದ ನಾಲ್ಕೈದು ದಿನಗಳಿಂದ ಸಂಬಂಧಿಸಿದ ಇಲಾಖೆ ಸಿಬ್ಬಂದಿ ದುರಸ್ತಿ ಕಾರ್ಯ ನಡೆಸಿದ್ದಾರೆ. ಹೀಗಾಗಿ ಜಾಕ್‌ವೆಲ್ನಿಂದ ಪಟ್ಟಣಕ್ಕೆ ನೀರು ಪೂರೈಕೆ ಆಗುವವರೆಗೆ ಪುರಸಭೆ ಟ್ಯಾಂಕರ್‌ ನೀರು ಪೂರೈಸುತ್ತಿದೆ. ಪರಿವರ್ತಕ ದುರಸ್ತಿ, ಟ್ಯಾಂಕರ್‌ ನೀರು ಪೂರೈಕೆಗೆ, ಟ್ರ್ಯಾಕ್ಟರ್‌ ಮತ್ತು ಖಾಸಗಿ ಬೋರ್‌ವೆಲ್ಗಳ ಬಾಡಿಗೆಗೆ ಪುರಸಭೆ 40 ಲಕ್ಷ ರೂ.ಗಳ ಕ್ರಿಯಾಯೋಜನೆ ತಯಾರಿಸಿ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಜತೆಗೆ ಪುರಸಭೆ ಮುಖ್ಯಾಧಿಕಾರಿ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಜಿಲ್ಲಾಧಿಕಾರಿಗಳು ಶಾಸಕರ ಜತೆ ಚರ್ಚಿಸಿ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.

ವಿದ್ಯುತ್‌ ಪರಿವರ್ತಕಗಳನ್ನು ದುರಸ್ತಿಗಾಗಿ ಕಳಿಸಲಾಗಿದೆ. ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ತಾತ್ಕಾಲಿಕವಾಗಿ ವಿದ್ಯುತ್‌ ಪರಿವರ್ತಕ ಒದಗಿಸುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಪುರಸಭೆ ಮನವಿ ಮಾಡಿದೆ. ತ್ರಿಫೇಸ್‌ ವಿದ್ಯುತ್‌ ಸಾಮರ್ಥ್ಯ ಟಿಸಿಯನ್ನು ಬೇರೆಕಡೆಯಿಂದ ತರಿಸಿ ಕೊಡುವ ಭರವಸೆ ನೀಡಿದ್ದಾರೆ. ಕಳೆದ ನಾಲ್ಕೆ ೖದು ದಿನಗಳಿಂದ ನಿರಂತರ ದುರಸ್ತಿ ಕಾರ್ಯ ಮುಂದುವರಿದಿದೆ. ಗಾಗಲ್ ಗ್ರಾಮದ ಹತ್ತಿರದ ಕುಡಿಯುವ ನೀರಿನ ಜಾಕವೆಲ್ ಬಳಿ ಕೆಲ ಸಣ್ಣಪುಟ್ಟ ದುರಸ್ತಿ ಕಾರ್ಯಕ್ಕೆ ಪುರಸಭೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ತಾಂಡಾಗಳಲ್ಲೂ ನೀರಿನ ಸಮಸ್ಯೆ: ಪುರಸಭೆ ವ್ಯಾಪ್ತಿಯ ಮೂರ್‍ನಾಲ್ಕು ದೊಡ್ಡಿ, ತಾಂಡಾಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇಲ್ಲಿ ಖಾಸಗಿ ಬೋರ್‌ವೆಲ್ಗಳನ್ನು ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ. ಪಟ್ಟಣದ 20 ವಾರ್ಡ್‌ಗಳಿಗೆ ನಿತ್ಯ ಆರು ಟ್ಯಾಂಕರ್‌ನಂತೆ ನೀರು ಪೂರೈಸಲಾಗುತ್ತಿದೆ. ನೀರು ಪೂರೈಕೆಯಲ್ಲಿ ಅಕ್ರಮ ತಡೆಗೆ ಟ್ಯಾಂಕರ್‌ಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ. ನಿತ್ಯ ಟ್ಯಾಂಕರ್‌ ನೀರು ಪೂರೈಸುತ್ತಿದ್ದರೂ ಜನತೆಗೆ ಸಮರ್ಪಕ ನೀರು ಸಿಗದೇ ಪರದಾಡುವಂತಾಗಿದೆ.

Advertisement

ನಿತ್ಯ ಕಾದಾಟ: ಇನ್ನು ವಾರ್ಡ್‌ಗಳಲ್ಲಿ ಟ್ಯಾಂಕರ್‌ ಬಂದ್‌ ಕೂಡಲೇ ಜನ ನೀರು ಹಿಡಿಯಲು ತಾ ಮುಂದು, ನಾ ಮುಂದು ಎಂದು ಮುಗಿಬೀಳುವುದು, ಜಗಳವಾಡುವುದು ಸಾಮಾನ್ಯವಾಗಿದೆ. ವಾರ್ಡ್‌ ನಿವಾಸಿಗಳು ನಿತ್ಯ ಬೆಳಗ್ಗೆ ಸದಸ್ಯರ ಮನೆಗೆ ಹೋಗಿ ನೀರು ಒದಗಿಸುವಂತೆ ದುಂಬಾಲು ಬೀಳುತ್ತಿದ್ದಾರೆ. ಇದು ವಾರ್ಡ್‌ ಸದಸ್ಯರಿಗೆ ತಲೆನೋವಾಗಿ ಪರಿಣಮಿಸಿದೆ.

ಟ್ಯಾಂಕರ್‌ ಬಾಡಿಗೆಗಿಲ್ಲ ಹಣ: ಇನ್ನು ಟ್ಯಾಂಕರ್‌ ನೀರು ಪೂರೈಸುವ ಟ್ರ್ಯಾಕ್ಟರ್‌ನವರಿಗೆ, ಬಾಡಿಗೆ ಬೋರ್‌ವೆಲ್ನವರಿಗೆ ಪುರಸಭೆ ಲಕ್ಷಾಂತರ ರೂ. ಪಾವತಿಸಬೇಕಿದೆ. ಮಾಲೀಕರು ಹಣ ಪಾವತಿಸುವಂತೆ ಅಧಿಕಾರಿಗಳ ಬೆನ್ನತ್ತಿದ್ದಾರೆ. ಆದರೆ ಜಿಲ್ಲಾಡಳಿತ ಇನ್ನೂ ಪುರಸಭೆಗೆ ಅನುದಾನ ಬಿಡುಗಡೆ ಮಾಡದ್ದರಿಂದ ಮುಖ್ಯಾಧಿಕಾರಿ ಗೊಂದಲಕ್ಕೀಡಾಗಿದ್ದಾರೆ ಎನ್ನಲಾಗಿದೆ. ಜಿಲ್ಲಾಡಳಿತ ಅನುದಾನ ಬಿಡುಗಡೆ ಮಾಡಿದ ನಂತರ ಬಾಡಿಗೆ ಪಾವತಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಟ್ರ್ಯಾಕ್ಟರ್‌ ಮಾಲೀಕರೊಬ್ಬರು ತಿಳಿಸಿದ್ದಾರೆ. ಕೂಡಲೇ ಜಾಕ್‌ವೆಲ್ನಲ್ಲಿನ ಯಂತ್ರೋಪಕರಣ ಮತ್ತು ಟಿಸಿ ದುರಸ್ತಿ ಮಾಡಿ ನೀರು ಪೂರೈಕೆಗೆ ಕ್ರಮ ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಗಾಗಲ್ ಬಳಿಯ ಜಾಕ್‌ವೆಲ್ನ ಮೂರು ಟಿಸಿಗಳು ಮುಳುಗಡೆಯಾಗಿದ್ದು, ದುರಸ್ತಿಗೆ ಕಳಿಸಲಾಗಿದೆ. 40 ಲಕ್ಷ ರೂ. ವೆಚ್ಚದ ಕ್ರಿಯಾಯೋಜನೆ ರೂಪಿಸಿ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಾಸಕರ ಜತೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಲಾಗುತ್ತದೆ.
ತಿಮ್ಮಪ್ಪ ಜಗಲಿ,
 ಪುರಸಭೆ ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next