Advertisement

ಅವ್ಯವಸ್ಥೆ ಆಗರ ಕನ್ನಡ ಸಾಹಿತ್ಯ ಭವನ

01:11 PM Feb 27, 2020 | Naveen |

ದೇವದುರ್ಗ: ಪಟ್ಟಣದ ಗುರುಭವನ ಹಿಂದೆ ಪುರಸಭೆ ಎಸ್‌ಎಫ್‌ಸಿ ಅನುದಾನ 8.50 ಲಕ್ಷ ವೆಚ್ಚದಲ್ಲಿ 2008-09ನೇ ಸಾಲಿನಲ್ಲಿ ನಿರ್ಮಿಸಿದ ಕನ್ನಡ ಸಾಹಿತ್ಯ ಭವನ ನಿರ್ವಹಣೆ ಕೊರತೆಯಿಂದಾಗಿ ಅವ್ಯವಸ್ಥೆ ಆಗರವಾಗಿದೆ.

Advertisement

ಕನ್ನಡ ಸಾಹಿತ್ಯ ಭವನದಲ್ಲಿ ಸಾಹಿತ್ಯಿಕ ಚಟುವಟಿಕೆಗಳು ನಡೆಯುತ್ತಿಲ್ಲ.ಭವನದ ಒಳಗೆ ಜೇಡ ಬೆಳೆದಿದೆ. ಭವನದ ಸುತ್ತಲೂ ಕಸದ ರಾಶಿ ಬಿದ್ದಿದೆ. ಕಿಡಿಗೇಡಿಗಳು ಗೋಡೆಗೆ ಅಸಭ್ಯ ಬರಹಗಳನ್ನು ಬರೆಯಲಾಗಿದೆ. ಬೆಲೆ ಬಾಳುವ ಕುರ್ಚಿ, ಟೇಬಲ್‌ ಇತರೆ ಸಾಮಗ್ರಿ ಪೂರೈಸಲಾಗಿದೆ. ಆದರೆ ಇವು ಧೂಳು ತಿನ್ನುತ್ತಿವೆ. ಕನ್ನಡ ಸಾಹಿತ್ಯ ಚಟುವಟಿಕೆ, ಸಭೆಗಳು ಖಾಸಗಿ ವ್ಯಕ್ತಿಗಳ ಅಂಗಡಿಗಳಲ್ಲಿ ನಡೆಯುತ್ತಿವೆ. ಕನ್ನಡ ಸಾಹಿತ್ಯ ಪರಿಷತ್‌ನ ಚಟುವಟಿಕೆಗಳನ್ನು ಶಾಲಾ-ಕಾಲೇಜಿನಲ್ಲಿ ನಡೆಸಲಾಗುತ್ತಿದೆ.

ಪತ್ರಿಕಾಗೋಷ್ಠಿಗೆ ಬಳಕೆ: ಆರಂಭದಲ್ಲಿ ಈ ಭವನವನ್ನು ಕನ್ನಡ ಸಾಹಿತ್ಯ ಭವನವೆಂದೇ ಕರೆಯಲಾಗುತ್ತಿತ್ತು. ಆದರೆ ಇಲ್ಲಿ ಸಾಹಿತ್ಯಿಕ ಚಟುವಟಿಕೆ ನಡೆಯದ್ದರಿಂದ ಮತ್ತು ಪಟ್ಟಣದಲ್ಲಿ ಪತ್ರಿಕಾ ಭವನ ಇಲ್ಲದ್ದರಿಂದ ಈ ಭವನವನ್ನು ಪತ್ರಿಕಾಗೋಷ್ಠಿಗೆ ಬಳಸಲಾಗುತ್ತಿದೆ. ಈಗ ಈ ಭವನ ಪತ್ರಿಕಾಗೋಷ್ಠಿಗೆ ಮಾತ್ರ ಸೀಮಿತವಾಗಿದೆ. ಪತ್ರಿಕಾಗೋಷ್ಠಿಗಳು ಇದ್ದಾಗ ಮಾತ್ರ ಭವನದ ಬಾಗಿಲು ತೆರೆಯುತ್ತದೆ. ಉಳಿದ ದಿನ ಬೀಗ ಜಡಿಯಲಾಗಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್‌ನವರಾಗಲಿ ಇಲ್ಲವೇ ಪತ್ರಿಕಾಗೋಷ್ಠಿಗಳಿಗೆ ಭವನವನ್ನು ಬಳಸುವ ಪತ್ರಕರ್ತರ ಸಂಘದವರಾಗಲಿ ನಿರ್ವಹಣೆಗೆ ಮುಂದಾಗುತ್ತಿಲ್ಲ. ಭವನದಲ್ಲಿನ ಅವ್ಯವಸ್ಥೆಗೆ ಸಂಘ-ಸಂಸ್ಥೆಯವರು, ರಾಜಕೀಯ ಮುಖಂಡರು ಇಲ್ಲಿ ಪತ್ರಿಕಾಗೋಷ್ಠಿ ನಡೆಸಲು ಮುಜುಗರಪಡುವಂತಾಗಿದೆ. ಭವನದ ಹೊರಗಡೆ ಬೆಳಕಿನ ವ್ಯವಸ್ಥೆ ಇಲ್ಲದೇ ಇರುವ ಕಾರಣ ಆಗಾಗ ಕಿಡಿಗೇಡಿಗಳು ಅನೈತಿಕ ಚಟುವಟಿಕೆಗೆ ಬಳಕೆ ಮಾಡುವುದರಿಂದ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು, ಪೌಚ್‌ಗಳು ಬಿದ್ದಿವೆ. ಇನ್ನಾದರೂ ಸಂಬಂಧಿಸಿದವರು ಕನ್ನಡ ಸಾಹಿತ್ಯ ಭವನ ನಿರ್ವಹಣೆಗೆ ಮುಂದಾಗಬೇಕೆಂದು ಸಾಹಿತ್ಯಾಸಕ್ತರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next