Advertisement

ಪುಸ್ತಕ ವ್ಯಾಪಾರ ನೀರಸ

05:05 PM Oct 23, 2019 | Naveen |

„ನಾಗರಾಜ ತೇಲ್ಕರ್‌

Advertisement

ದೇವದುರ್ಗ (ಸಿಂಧನೂರು): ಸಿಂಧನೂರು ಸಮೀಪದ ಹೊಸಳ್ಳಿ ಕ್ಯಾಂಪ್‌ನ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ರಾಯಚೂರು ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಾಕಲಾದ ಪುಸ್ತಕ ಮಳಿಗೆಗಳಲ್ಲಿ ಪುಸ್ತಕ ಖರೀದಿಸುವವರ ಕೊರತೆ ಕಂಡುಬಂತು.

ಸಮ್ಮೇಳನಕ್ಕೆ ಆಗಮಿಸಿದವರು ಪುಸ್ತಕ ಮಳಿಗೆಗಳಲ್ಲಿ ಇರಿಸಿದ್ದ ಪುಸ್ತಕಗಳನ್ನು ನೋಡುತ್ತ ಹೋಗುತ್ತಿದ್ದರೆ ವಿನಃ ಖರೀದಿಸುವವರ ಸಂಖ್ಯೆ ವಿರಳವಾಗಿತ್ತು. ಕೆಲ ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಮಾತ್ರ ತಮಗೆ ಬೇಕಾದ ಪುಸ್ತಕಗಳನ್ನು ಕೇಳಿ,
ಹುಡುಕಾಡಿ ಖರೀದಿಸುತ್ತಿದ್ದರು.

ಬೆಂಗಳೂರಿನ ನವಭಾರತ ಪಬ್ಲಿಕೇಷನ್ಸ್‌, ಚಿಲಿಪಿಲಿ ಪ್ರಕಾಶನ, ಭಂಡಾರ ಪ್ರಕಾಶನ ಮಸ್ಕಿ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಚಿತ್ರ ಪ್ರದರ್ಶನ, ಅಮ್ಮಿ ಪ್ರಕಾಶನ ಮತ್ತು ಕಲಾರಾಧ ಜಗಲ್ಬಂದಿ ಸಿಂಧನೂರು ಸೇರಿ ಇತರೆ ಪುಸ್ತಕ ವ್ಯಾಪಾರಿಗಳು, ಪಬ್ಲಿಷರ್ ಪುಸ್ತಕ ಮಳಿಗೆ ಹಾಕಿದ್ದಾರೆ. ದೇಶದ ಮಹಾನ್‌ ನಾಯಕರ, ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಬೇಕಾದ ಪುಸ್ತಕಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕೃತಿಗಳು ಸೇರಿ ವಿವಿಧ ಪುಸ್ತಕಗಳನ್ನು ಮಾರಲಾಗುತ್ತಿದೆ. ವಿದ್ಯಾರ್ಥಿಗಳು ಸಾಹಿತ್ಯ ಆಸಕ್ತರು ಮಳಿಗೆಯಲ್ಲಿ ಪುಸ್ತಕ ನೋಡಿದಷ್ಟು ಖರೀದಿಗೆ ಮುಂದಾಗಲಿಲ್ಲ. ಕಾರ್ಯಕ್ರಮದ ಆರಂಭದಲ್ಲೇ ಜನ ಪುಸ್ತಕ ಮಳೆಗೆಗಳತ್ತ ಹೆಜ್ಜೆ ಹಾಕಿದರು. ಸಮ್ಮೇಳನ ಉದ್ಘಾಟನೆ, ಮಧ್ಯಾಹ್ನ ಊಟದ ನಂತರ ಮಳಿಗೆಗಳತ್ತ ಜನ ಹೋಗದ್ದರಿಂದ ಭಣ ಭಣ ಎನ್ನುತ್ತಿದ್ದವು. ಇನ್ನು ಖಾದಿ ಭಾಂಡಾರದವರು ಹಾಕಿದ ಮಳಿಗೆಯಲ್ಲಿ ಜನ ಬಟ್ಟೆ ಖರೀದಿಸುತ್ತಿದ್ದ ದೃಶ್ಯ ಕಂಡುಬಂತು.

ವಿದ್ಯಾರ್ಥಿಗಳೇ ಹೆಚ್ಚು: ರಾಯಚೂರು ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ವಿವಿಧ ತಾಲೂಕುಗಳ ಸಾಹಿತ್ಯಾಸಕ್ತರು ಸೇರಿದಂತೆ ಸಿಂಧನೂರು ನಗರ, ಸುತ್ತಲಿನ ಗ್ರಾಮೀಣ ಭಾಗಗಳ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ಹೆದ್ದಾರಿ ಪಕ್ಕದ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ಸಮ್ಮೇಳನ ಆಯೋಜಿಸಿದ್ದರಿಂದ ಹೆದ್ದಾರಿಯುದ್ದಕ್ಕೂ ಬೈಕ್‌, ಇತರೆ ವಾಹನಗಳಲ್ಲಿ ಸಾರ್ವಜನಿಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಸಾಹಿತ್ಯಾಸಕ್ತರು, ಶಿಕ್ಷಕರು ಆಗಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸರ್ಕಾರಿ-ಖಾಸಗಿ ಶಾಲೆಗಳ ವಿದ್ಯಾರ್ಥಿಗಳನ್ನು ವಾಹನಗಳಲ್ಲಿ ಕರೆತರಲಾಗಿತ್ತು. ಸಮ್ಮೇಳನಕ್ಕಾಗಿ ನಿರ್ಮಿಸಿದ ಮಹಾದ್ವಾರದ ಪಕ್ಕದಲ್ಲಿ ಬೈಕ್‌, ಇತರೆ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ಆದರೂ ಕೆಲವರು ಹೆದ್ದಾರಿ ಪಕ್ಕದಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದ್ದು ಕಂಡುಬಂತು. ಹೆದ್ದಾರಿಯಲ್ಲಿ ಟ್ರಾಫಿಕ್‌ ಸಮಸ್ಯೆ ಆಗದಂತೆ ಪೊಲೀಸರು ಕ್ರಮ ವಹಿಸಿದ್ದರು.

Advertisement

ಮಳಿಗೆಗಳು: ಇನ್ನು ಸಮ್ಮೇಳನದಲ್ಲಿ ವಿವಿಧ ಮಳಿಗೆಗಳನ್ನು ಹಾಕಲಾಗಿತ್ತು. ತಾಲೂಕು ಆರೋಗ್ಯ ಇಲಾಖೆಯಿಂದ ಜನರಲ್ಲಿ ಜಾಗೃತಿ ಮೂಡಿಸಲು ಮಳಿಗೆ ಹಾಕಲಾಗಿತ್ತು. ಇನ್ನು ಸಮ್ಮೇಳನಕ್ಕೆ ಹೋಗುವ ಮಾರ್ಗದಲ್ಲಿ ತಳ್ಳು ಬಂಡಿಗಳಲ್ಲಿ ವಿವಿಧ ತಿಂಡಿ, ತಿನಿಸುಗಳನ್ನು ಮಾರಲಾಗುತ್ತಿತ್ತು. ಇನ್ನು ಸಮ್ಮೇಳನದ ಮಹಾದ್ವಾರ ಇತರೆಡೆ ಯುವಕರು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಗೋಷ್ಠಿಗೆ ಜನರ ಕೊರತೆ: ಮಧ್ಯಾಹ್ನ ವಿವಿಧ ಗೋಷ್ಠಿಗಳು ನಡೆದವು. ಆದರೆ ಬಹುತೇಕ ಜನರು ಊಟ ಮಾಡಿ ವಾಪಸ್‌ ಹೋಗಿದ್ದರಿಂದ ಸಮ್ಮೇಳನದಲ್ಲಿ ಮಧ್ಯಾಹ್ನ ನಡೆದ ಗೋಷ್ಠಿಗಳಿಗೆ ಸಭಿಕರ ಕೊರತೆ ಕಂಡುಬಂತು. ಹೆದ್ದಾರಿ ಕೂಡ ಬಿಕೋ ಎನ್ನುತ್ತಿತ್ತು. ಬೆಳಗ್ಗೆ ವಾಹನಗಳಿಂದ ತುಂಬಿದ್ದ ಮಹಾದ್ವಾರದ ಪಕ್ಕದ ಜಾಗೆ ಮಧ್ಯಾಹ್ನದ ವೇಳೆಗೆ ಖಾಲಿ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next