ದೇವದುರ್ಗ: ಇಲ್ಲಿನ ಜೆಸ್ಕಾಂ ಇಲಾಖೆಗೆ ಮನೆ, ಸರ್ಕಾರಿ ಕಚೇರಿ, ಆಸ್ಪತ್ರೆ, ವಾಣಿಜ್ಯ ಬಳಕೆದಾರರಿಂದ ಸುಮಾರು 12 ಕೋಟಿ ರೂ. ವಿದ್ಯುತ್ ಬಾಕಿ ಬರಬೇಕಿದೆ. ವಿದ್ಯುತ್ ಬಿಲ್ ವಸೂಲಿಯಲ್ಲಿ ಇಲಾಖೆ ಹಿಂದುಳಿದಿದ್ದರಿಂದ ನಷ್ಟದತ್ತ ಸಾಗುತ್ತಿದೆ. ಜೆಸ್ಕಾಂ ಇಲಾಖೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ಕಳುಹಿಸಿದರೂ ಗ್ರಾಹಕರಿಂದ ಉತ್ತರ ಬರುತ್ತಿಲ್ಲ. ಬಾಕಿ ಬಿಲ್ ವಸೂಲಿಗೆ ಸಿಬ್ಬಂದಿ ಮನೆ-ಕಚೇರಿಗೆ ಅಲೆದರೂ ಸಮರ್ಪಕ ಬಿಲ್ ವಸೂಲಾಗುತ್ತಿಲ್ಲ ಎನ್ನಲಾಗಿದೆ.
33 ಗ್ರಾಮ ಪಂಚಾಯಿತಿ: ತಾಲೂಕಿನ 33 ಗ್ರಾಮ ಪಂಚಾಯಿತಿಗಳಿಂದ 1.20 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಬರಬೇಕಿದೆ. 33 ಗ್ರಾಪಂ ವ್ಯಾಪ್ತಿಯಲ್ಲಿ 90 ಕುಡಿಯುವ ನೀರಿನ ಘಟಕಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಜೆಸ್ಕಾಂ ಇಲಾಖೆಗೆ ಬರಬೇಕಾದ 1.20 ಕೋಟಿ ರೂ. ಬಾಕಿ ಪಾವತಿಸಲು ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಸರಕಾರ ಮಟ್ಟದಿಂದ ಅನುದಾನ ಬಂದಿಲ್ಲ ಎಂಬ ಹಾರಿಕೆ ಉತ್ತರ ಹೇಳುತ್ತಿದ್ದಾರೆ.
ಪುರಸಭೆ ಬಾಕಿ: ಪಟ್ಟಣಕ್ಕೆ ನೀರು ಪೂರೈಸುವ ಘಟಕಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಪುರಸಭೆಯಿಂದ ಜೆಸ್ಕಾಂಗೆ 1.32 ಕೋಟಿ ಪಾವತಿ ಆಗಬೇಕಿದೆ. ಪುರಸಭೆ ಕಚೇರಿಗೆ ಅಲೆದು ಅಲೆದು ಜೆಸ್ಕಾಂ ಅಧಿಕಾರಿಗಳು ಬೇಸತ್ತು ಹೋಗಿದ್ದಾರೆ. ಗ್ರಾಮೀಣ ಮತ್ತು ಪಟ್ಟಣದ ನೀರಿನ ಘಟಕಗಳಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದರೆ ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುವ ಕಾರಣಕ್ಕೆ ಜೆಸ್ಕಾಂ ಅನಿವಾರ್ಯವಾಗಿ ವಿದ್ಯುತ್ ಪೂರೈಸುತ್ತಿದೆ.
ಮನೆಗಳ ಬಾಕಿ 2.20 ಕೋಟಿ: ಪಟ್ಟಣ ಸೇರಿ ತಾಲೂಕಿನ 33 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳ ವಿದ್ಯುತ್ ಬಿಲ್ 2.20 ಕೋಟಿ ಬಾಕಿ ಇದೆ. ಜೆಸ್ಕಾಂ ಸಿಬ್ಬಂದಿ ಗ್ರಾಹಕರ ಮನೆಗಳಿಗೆ ನಿತ್ಯ ಅಲೆಯುತ್ತಿದ್ದರೂ ಸಂಪೂರ್ಣ ಬಾಕಿ ವಸೂಲಾಗುತ್ತಿಲ್ಲ. ಕೆಲ ಗ್ರಾಹಕರು ಪಾವತಿಸಿದರೆ, ಮತ್ತೆ ಕೆಲವರು ನೆಪ ಹೇಳುತ್ತಿದ್ದಾರೆ ಎಂದು ಸಿಬ್ಬಂದಿ ಹೇಳುತ್ತಾರೆ. ಸಮರ್ಪಕ ವಿದ್ಯುತ್ ಬಾಕಿ ವಸೂಲಾಗದಿದ್ದರೆ ವೇತನ ತಡೆಹಿಡಿಯಬೇಕಾಗುತ್ತದೆ ಎಂದು ಜೆಸ್ಕಾಂ ಅಧಿಕಾರಿಗಳು ಎಚ್ಚರಿಸುತ್ತಿದ್ದಾರೆ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
ವಿವಿಧ ಕಚೇರಿ ಬಿಲ್ ಬಾಕಿ: ಇನ್ನು ಸರಕಾರದ ವಿವಿಧ ಇಲಾಖೆಗಳಿಂದಲೂ ಲಕ್ಷಾಂತರ ರೂ. ಬಿಲ್ ಬಾಕಿ ಇದೆ. ಸರ್ಕಾರಿ ಆಸ್ಪತ್ರೆ, ವಸತಿ ನಿಲಯ, ಅಂಗನವಾಡಿ ಕೇಂದ್ರ, ಬಿಎಸ್‌ಎನ್‌ಎಲ್, ತಹಶೀಲ್ದಾರ್ ಕಚೇರಿ, ತಾಲೂಕು ಪಂಚಾಯಿತಿ ಸೇರಿ ಇತರೆ ಇಲಾಖೆಯಲ್ಲಿ ಲಕ್ಷಾಂತರ ರೂ. ವಿದ್ಯುತ್ ಬಿಲ್ ಬಾಕಿ ಉಳಿದಿದೆ. ಬಿಎಸ್‌ಎನ್‌ಎಲ್ ಕಚೇರಿ 5 ಲಕ್ಷ, ಸ್ಥಳೀಯ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಬಿಲ್ 4.50 ಲಕ್ಷ, ಪಟ್ಟಣ ಸೇರಿ ತಾಲೂಕಿನ 130 ಅಂಗನವಾಡಿ ಕೇಂದ್ರಗಳ ವಿದ್ಯುತ್ ಬಿಲ್ 3 ಲಕ್ಷ ರೂ. ಬಾಕಿ ಉಳಿದಿದೆ. ತಹಶೀಲ್ದಾರ್ ಕಚೇರಿ 50 ಸಾವಿರ, ತಾಲೂಖು ಪಂಚಾಯಿತಿ ಕಚೇರಿ 40 ಸಾವಿರ ವಿದ್ಯುತ್ ಬಿಲ್ ಪಾವತಿಸಿಲ್ಲ. ಮೊರಾರ್ಜಿ ದೇಸಾಯಿ ವಸತಿ ನಿಲಯ ಸೇರಿ ಇತರೆ ಸರಕಾರಿ ವಸತಿ ನಿಲಯಗಳ ವಿದ್ಯುತ್ ಬಿಲ್ 4 ಲಕ್ಷ ರೂ. ಬಾಕಿ ಬರಬೇಕಿದೆ ಎಂದು ಜೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಏತ ನೀರಾವರಿ 14 ಲಕ್ಷ ರೂ: ನಿಲವಂಜಿ, ಚಿಂಚೋಡಿ, ಗೂಗಲ್ ಗ್ರಾಮಗಳ ವ್ಯಾಪ್ತಿಯ ಹತ್ತಾರು ಹಳ್ಳಿಗಳ ಜಮೀನುಗಳಿಗೆ ನೀರುಣಿಸುವ ಏತ ನೀರಾವರಿ ಯೋಜನೆಯ ಇಲಾಖೆ ಅಧಿಕಾರಿಗಳು ಜೆಸ್ಕಾಂಗೆ 14 ಲಕ್ಷ ರೂ. ಬಾಕಿ ಪಾವತಿಸಬೇಕಿದೆ. ಆದರೆ ಇದೀಗ ಚಿಂಚೋಡಿ, ಗೂಗಲ್ ಗ್ರಾಮದಲ್ಲಿ ಏತ ನೀರಾವರಿ ಸೌಲಭ್ಯ ಸ್ಥಗಿತವಾಗಿದೆ. ನಿಲವಂಜಿ ಗ್ರಾಮದಲ್ಲಿ ಮಾತ್ರ ಏತ ನೀರಾವರಿ ಯೋಜನೆ ಇದ್ದೂ ಇಲ್ಲದಂತಾಗಿದೆ. ತಾಲೂಕಿನಲ್ಲಿ ಕಚೇರಿ ಲಭ್ಯವಿಲ್ಲದ ಕಾರಣ ಏತ ನೀರಾವರಿ, ಕೆರೆಗಳ ಪರಿಸ್ಥಿತಿ ಹೇಳತೀರದಂತಾಗಿದೆ.
ನೋಟಿಸ್‌ಗಿಲ್ಲ ಸ್ಪಂದನೆ: ಸರಕಾರಿ ಕಚೇರಿ, ಆಸ್ಪತ್ರೆ, ವಸತಿ ನಿಲಯ ಗ್ರಾಮ ಪಂಚಾಯಿತಿ ಸೇರಿ ಇತರೆ ಇಲಾಖೆಗೆ ವಿದ್ಯುತ್ ಬಿಲ್ ಪಾವತಿಸುವಂತೆ ಈಗಾಗಲೇ ಹತ್ತಾರೂ ಬಾರಿ ಜೆಸ್ಕಾಂ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ಕಳಿಸಿದ್ದಾರೆ. ಆದರೆ ಬಹುತೇಕ ಇಲಾಖೆ ಅಧಿಕಾರಿಗಳು ನೋಟಿಸ್‌ಗೆ ಸ್ಪಂದಿಸುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ. ವಿದ್ಯುತ್ ಬಿಲ್ ಪಾವತಿಸುವಂತೆ ಜೆಸ್ಕಾಂ ವಾಹನಗಳ ಮೂಲಕ ಜಾಗೃತಿ ಮೂಡಿಸಿದೆ. ಆದರೆ ಜೆಸ್ಕಾಂ ಇಲಾಖೆಗೆ ಬರಬೇಕಾದಂತ ವಿದ್ಯುತ್ ಬಾಕಿ ಬಾರದೇ ಇರುವುದರಿಂದ ಇಲ್ಲಿನ ಅಧಿಕಾರಿ, ಸಿಬ್ಬಂದಿ ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸದ ಸಿಬ್ಬಂದಿ ತಿಳಿಸಿದ್ದಾರೆ.
ವಿದ್ಯುತ್ ಬಾಕಿ ಬಿಲ್ ಪಾವತಿಸುವಂತೆ ಈಗಾಗಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ನೋಟಿಸ್ ಜಾರಿ ಮಾಡಲಾಗಿದೆ. ಸರಕಾರದಿಂದ ಹಣ ಬಂದ ನಂತರ ಪಾವತಿಸುವ ಭರವಸೆ ನೀಡುತ್ತಿದ್ದಾರೆ. ವಿದ್ಯುತ್ ಸ್ಥಗಿತಗೊಳಿಸಿದರೆ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ ಸಿಬ್ಬಂದಿಯನ್ನು ನಿತ್ಯ ವಿದ್ಯುತ್ ವಸೂಲಿಗೆ ಕಳಿಸಲಾಗುತ್ತಿದೆ.
•
•ಬಸವರಾಜ ಚವ್ಹಾಣ,
ಎಇಇ ದೇವದುರ್ಗ ಜೆಸ್ಕಾಂ
ನಾಗರಾಜ ತೇಲ್ಕರ್