ದೇವದುರ್ಗ: ದೇವದುರ್ಗ ತಾಲೂಕಿನಲ್ಲಿ ಬಾಲ ಕಾರ್ಮಿಕ ಅಧಿಕಾರಿ ಮತ್ತು ಅಬಕಾರಿ ಇಲಾಖೆ ಕಚೇರಿ ಇಲ್ಲದ್ದರಿಂದ ತಾಲೂಕಿನಲ್ಲಿ ಬಾಲ ಕಾರ್ಮಿಕ ಪದ್ಧತಿ ಮತ್ತು ಅಕ್ರಮ ಮದ್ಯ ಮಾರಾಟಕ್ಕೆ ತಡೆ ಇಲ್ಲದಾಗಿದೆ. ಈ ಎರಡೂ ಕಚೇರಿಗಳು ಮಾನ್ವಿಯಲ್ಲಿರುವುದರಿಂದ ಅಧಿಕಾರಿಗಳು ತಾಲೂಕಿಗೆ ಬರುವುದೇ ಅಪರೂಪವಾಗಿದೆ. ಹೀಗಾಗಿ ಅನಿಷ್ಠ ಪದ್ಧತಿಯಾದ ಬಾಲ ಕಾರ್ಮಿಕ ಮತ್ತು ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆದಿದೆ. ಆಗೊಮ್ಮೆ, ಈಗೊಮ್ಮೆ ಅಧಿಕಾರಿಗಳು ದಾಳಿ ನಡೆಸಿದರೂ ಯಾವುದೇ ಪರಿಣಾಮ ಬೀರದಾಗಿದೆ.
ಅಕ್ರಮ ಮದ್ಯ ಮಾರಾಟ: ದೇವದುರ್ಗ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಎಗ್ಗಿಲ್ಲದೇ ಅಕ್ರಮ ಮದ್ಯ ಮಾರಾಟ ನಡೆದಿದೆ. ಪಟ್ಟಣದಲ್ಲಿರುವ ಮದ್ಯದಂಗಡಿಗಳು ಅಬಕಾರಿ ನಿಯಮ ಪಾಲಿಸುತ್ತಿಲ್ಲ. ಗ್ರಾಹಕರಿಗೆ ಹೆಚ್ಚಿನ ದರದ ಬರೆ ಹಾಕುತ್ತಿವೆ. ಪಟ್ಟಣದಲ್ಲಿ ಐದು ಮದ್ಯದಂಗಡಿಗಳಿದ್ದು, ಒಂದು ಬಾರ್ ಆ್ಯಂಡ್ ರೆಸ್ಟೋರೆಂಟ್ ಇದೆ. ಇಲ್ಲಿ ಮಾತ್ರ ಬಾರ್‌ನಲ್ಲಿ ಕುಳಿತು ಮದ್ಯ ಸೇವಿಸಲು ಅನುಮತಿ ಇದೆ. ಅಬಕಾರಿ ನಿಯಮದ ಪ್ರಕಾರ ಉಳಿದ ಅಂಗಡಿಗಳಲ್ಲಿ ಮದ್ಯ ಸೇವಿಸಲು ಅವಕಾಶ ಇಲ್ಲದಿದ್ದರೂ ಟೇಬಲ್, ಕುರ್ಚಿ ಹಾಕಿ ಮದ್ಯ ಸೇವನೆಗೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಎಂಆರ್‌ಪಿ ದರಕ್ಕಿಂತ 20ರಿಂದ 30 ರೂ. ಹೆಚ್ಚು ವಸೂಲಿ ಮಾಡಲಾಗುತ್ತಿದೆ. ಇದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಗೊತ್ತಿದ್ದರೂ ತಮ್ಮ ಪಾಲನ್ನು ಪಡೆದು ಮೌನ ಸಮ್ಮತಿ ನೀಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಗ್ರಾಮಗಳಲ್ಲಿ ಜೋರು: ಇನ್ನು ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಪಟ್ಟಣದ ಮದ್ಯದಂಗಡಿಗಳಿಂದಲೇ ಅಕ್ರಮವಾಗಿ ಮದ್ಯ ಸರಬರಾಜು ಆಗುತ್ತಿದೆ. ಹಳ್ಳಿಗಳ ಹೋಟೆಲ್, ಕಿರಾಣಿ ಅಂಗಡಿ, ಸೈಕಲ್ ಶಾಪ್, ಪಾನ್ ಶಾಪ್ ಸೇರಿ ಇತರೆ ಅಂಗಡಿಗಳಲ್ಲಿ ಹಗಲು, ರಾತ್ರಿ ಎನ್ನದೇ ಮದ್ಯ ಮಾರಲಾಗುತ್ತಿದೆ. ಗಾಂಧಿ ಜಯಂತಿ, ಗಣೇಶ ಹಬ್ಬ, ಚುನಾವಣೆ ವೇಳೆ ಪಟ್ಟಣದಲ್ಲಿ ಮದ್ಯದಂಗಡಿಗಳು ಬಂದಾದರೂ ಹಳ್ಳಿಗಳಲ್ಲಿ ಮದ್ಯ ಎಗ್ಗಿಲ್ಲದೇ ಸಿಗುತ್ತಿದೆ. ತಾಂಡಾಗಳಲ್ಲಿ ಕಳ್ಳಬಟ್ಟಿ: ತಾಲೂಕಿನ ತಾಂಡಾಗಳಲ್ಲಿ ಕಳ್ಳಭಟ್ಟಿ ಸರಾಯಿ ತಯಾರಿ ಕೂಡ ನಡೆಯುತ್ತಿದೆ.
ಅಬಕಾರಿ ಇಲಾಖೆ ಅಧಿಕಾರಿಗಳು ಇದನ್ನು ತಡೆಯುವಲ್ಲಿ ವಿಫಲವಾಗಿದ್ದಾರೆ. ಬಾಲ ಕಾರ್ಮಿಕರು ಹೆಚ್ಚು: ಇನ್ನು ತಾಲೂಕಿನಲ್ಲಿ ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ನಾರಾಯಣಪುರ ಬಲದಂಡೆ ಕಾಲುವೆಯಿಂದಾಗಿ ನೀರಾವರಿ ಸೌಲಭ್ಯ ಕಲ್ಪಿಸಿದ ನಂತರ ಕೃಷಿ ಚಟುವಟಿಕೆಗೆ ಕಾರ್ಮಿಕರ ಕೊರತೆ ಆಗುತ್ತಿದೆ. ಹೀಗಾಗಿ ಜಮೀನು ಮಾಲೀಕರು ಶಾಲೆ ಬಿಟ್ಟ ಮಕ್ಕಳನ್ನು ಕೃಷಿ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಬಾಲ ಕಾರ್ಮಿಕರ ಸಾಗಾಟ: ಸುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಟಂಟಂ ರಿಕ್ಷಾ, ಗೂಡ್ಸ್ ವಾಹನಗಳಲ್ಲಿ ಬಾಲ ಕಾರ್ಮಿಕರು, ಕೃಷಿ ಕಾರ್ಮಿಕರನ್ನು ವಿವಿಧ ಗ್ರಾಮಗಳಿಗೆ ಕೃಷಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಾರೆ. ಬಾಲ ಕಾರ್ಮಿಕ ಅಧಿಕಾರಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಆಗಾಗ ಕಾಟಾಚಾರಕ್ಕೆ ಎಂಬಂತೆ ದಾಳಿ ನಡೆಸಿ ಬಾಲ ಕಾರ್ಮಿಕರನ್ನು ವಶಕ್ಕೆ ಪಡೆದು ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸುತ್ತಾರೆ. ಆದರೆ ಇದಕ್ಕೆ ಕಡಿವಾಣ ಹಾಕುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ.
ಜನ ಪ್ರತಿನಿಧಿ ಗಳು ಮೌನ: ದೇವದುರ್ಗ ತಾಲೂಕು ಕೇಂದ್ರವಾಗಿದ್ದರೂ ಇಲ್ಲಿ ಬಾಲ ಕಾರ್ಮಿಕ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳ ಕಚೇರಿ ತೆರೆಯುವಲ್ಲಿ ಇಲ್ಲಿನ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರುತ್ತಿಲ್ಲ. ಆಯಾ ಇಲಾಖೆಗಳ ಮೇಲಾಧಿಕಾರಿಗಳು ಈ ಬಗ್ಗೆ ಕ್ರಮ ವಹಿಸುತ್ತಿಲ್ಲ. ಕ್ಷೇತ್ರದ ಶಾಸಕರು ಸಂಬಂಧಪಟ್ಟ ಸಚಿವರು, ಇಲಾಖೆ ಮೇಲಾಧಿಕಾರಿಗಳ ಜತೆ ಚರ್ಚಿಸಿ ದೇವದುರ್ಗದಲ್ಲಿ ಬಾಲಕಾರ್ಮಿಕ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳ ಕಚೇರಿ ಸ್ಥಾಪನೆಗೆ ಮುಂದಾಗಬೇಕೆಂದು ಕರವೇ ಮುಖಂಡ ಉಸ್ಮಾನ್ ಗೌರಂಪೇಟೆ ಆಗ್ರಹಿಸಿದ್ದಾರೆ.
ದೇವದುರ್ಗ ತಾಲೂಕು ಕೇಂದ್ರ ಸ್ಥಾನದಲ್ಲಿ ಬಾಲಕಾರ್ಮಿಕ ಕಚೇರಿ ಸ್ಥಾಪನೆಗೆ ಈಗಾಗಲೇ ಶಾಸಕರು, ಸಂಸದರ ಗಮನಕ್ಕೆ ತರಲಾಗಿದೆ. ಕಚೇರಿ ಅಗತ್ಯ ಹಿನ್ನೆಲೆ ರಾಜ್ಯ ಮಟ್ಟದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
ಮಂಜುನಾಥ,
ಬಾಲಕಾರ್ಮಿಕ ಅಧಿಕಾರಿ ರಾಯಚೂರು