Advertisement

ಖಾಸಗಿ ಶಾಲೆಗಳ ಪ್ರಚಾರ ಜೋರು

11:17 AM Apr 13, 2019 | Naveen |

ದೇವದುರ್ಗ: ಒಂದೆಡೆ ಬೇಸಿಗೆ ಬಿಸಿಲಿನ ಕಾವು, ಚುನಾವಣೆ ಪ್ರಚಾರದ ಕಾವು ಏರುತ್ತಿದ್ದರೆ ಇತ್ತ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳನ್ನು ಸೆಳೆಯಲು ಪ್ರಚಾರದ ಮೊರೆ ಹೋಗಿವೆ. ಇದಕ್ಕಾಗಿ ತಮ್ಮ ಶಾಲೆಗಳ ಸಿಬ್ಬಂದಿ ಮತ್ತು ಖಾಸಗಿ ವ್ಯಕ್ತಿಗಳನ್ನು ನೇಮಿಸಿ ಮನೆ-ಮನೆಗೆ ತೆರಳಿ ಕರಪತ್ರ ಹಂಚುತ್ತಿದ್ದಾರೆ.

Advertisement

ಪಟ್ಟಣ ಸೇರಿ ವಿವಿಧ ತಾಲೂಕಿನ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲೆಯಲ್ಲಿ ನೀಡುವ ಶಿಕ್ಷಣ, ಸೌಲಭ್ಯ ಕುರಿತು ಕರಪತ್ರ ಮುದ್ರಿಸಿ ಮನೆ-ಮನೆಗೆ ತೆರಳಿ ಹಂಚಿ ಮಕ್ಕಳನ್ನು ತಮ್ಮ ಶಾಲೆ-ಕಾಲೇಜಿಗೆ ಸೇರಿಸುವಂತೆ ಪಾಲಕರ
ಮನವೊಲಿಸುತ್ತಿವೆ. ಪಟ್ಟಣ ಸೇರಿದಂತೆ ವಿವಿಧ ತಾಲೂಕು ಮತ್ತು ಗ್ರಾಮೀಣ ಭಾಗದಲ್ಲಿ ಹಲವಾರು ಖಾಸಗಿ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿವೆ. ಪ್ರೀ ನರ್ಸರಿಯಿಂದ ಹಿಡಿದು ಪದವಿವರೆಗೆ ಶಿಕ್ಷಣ ನೀಡುತ್ತಿವೆ. ಅದರಲ್ಲೂ ಕಾಲೇಜು
ಹೊಂದಿರುವ ಸಂಸ್ಥೆಗಳು ಪ್ರಥಮ ಪಿಯುಸಿ, ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳನ್ನು ಸೆಳೆಯಲು ಭರ್ಜರಿ ಪ್ರಚಾರ ನಡೆಸುತ್ತಿವೆ. ಸಂಸ್ಥೆ ಸಿಬ್ಬಂದಿ ಹಾಗೂ ಸಂಸ್ಥೆಯಿಂದ ಕರಪತ್ರ ಹಂಚಿಕೆಗೆ ನೇಮಕಗೊಂಡವರು ಬಿರು ಬಿಸಿಲಲ್ಲೂ ಮನೆ-ಮನೆಗೆ ತೆರಳಿ ಕರಪತ್ರ ವಿತರಿಸುತ್ತಿದ್ದಾರೆ. ಇದಲ್ಲದೇ ಕೆಲ ಸಂಸ್ಥೆಗಳವರು ಬೆಳಗ್ಗೆ ಪತ್ರಿಕಾ ವಿತರಕರ ಬಳಿಗೆ ತೆರಳಿ ಪತ್ರಿಕೆಗಳಲ್ಲಿ ಕರಪತ್ರ ಹಾಕಿ ಹಂಚುವಂತೆ ದುಂಬಾಲು ಬೀಳುತ್ತಿದ್ದಾರೆ.

ವೆಕೇಷನ್‌ ಕ್ಲಾಸ್‌ ಹಾವಳಿ: ಇನ್ನು ಬೇಸಿಗೆಯಲ್ಲಿ ಎಸ್ಸೆಸ್ಸಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗಾಗಿ ಶಿಕ್ಷಕರು, ಉಪನ್ಯಾಸಕರು, ಕೆಲ ಸಂಸ್ಥೆಯವರು ವೆಕೇಷನ್‌ ಕ್ಲಾಸ್‌ ನಡೆಸುತ್ತಿದ್ದಾರೆ. ಇವರೂ ಕೂಡ ಮಕ್ಕಳನ್ನು ತಮ್ಮೆಡೆಗೆ ಸೆಳೆಯಲು ಕರಪತ್ರದ ಮೊರೆ ಹೋಗಿದ್ದಾರೆ.

ಬ್ಯಾನರ್‌ಗೆ ಬ್ರೇಕ್‌: ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಫ್ಲೆಕ್ಸ್‌, ಬ್ಯಾನರ್‌ಗಳ ಅಳವಡಿಕೆ ನಿಷೇಧಿಸಲಾಗಿದೆ. ಇದರ ಬಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ತಗುಲಿದೆ. ಎಲ್ಲೆಂದರಲ್ಲಿ ತಮ್ಮ ಶಾಲೆ, ಕಾಲೇಜುಗಳಲ್ಲಿ ಪ್ರವೇಶ
ಪಡೆಯುವಂತೆ ಮತ್ತು ಸಾಧಕ ಮಕ್ಕಳ ಭಾವಚಿತ್ರಗಳಿರುವ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಖಾಸಗಿ ಸಂಸ್ಥೆಗಳವರು ಹಾಕುತ್ತಿದ್ದರು. ಈಗ ನೀತಿ ಸಂಹಿತೆಯಿಂದಾಗಿ ಫ್ಲೆಕ್ಸ್‌ ಬ್ಯಾನರ್‌ಗೆ ಬ್ರೇಕ್‌ ಬಿದ್ದಿದೆ. ಹೀಗಾಗಿ ಖಾಸಗಿ ಸಂಸ್ಥೆಗಳವರು ಮನೆ-ಮನೆಗೆ ತೆರಳಿ ಮಕ್ಕಳನ್ನು, ಪಾಲಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆನ್ನಲಾಗಿದೆ.

ಡೊನೇಷನ್‌ ಹಾವಳಿ: ಇನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ದುಬಾರಿ ಶುಲ್ಕದ ಜೊತೆಗೆ ಡೊನೇಷನ್‌ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಪ್ರತಿ ವರ್ಷ ಕೇಳಿಬರುತ್ತಿವೆ. ಆದರೆ ಇವುಗಳನ್ನು ನಿಯಂತ್ರಿಸಬೇಕಾದ ಶಿಕ್ಷಣ ಇಲಾಖೆ ಅಧಿಕಾರಿಗಳು ಯಾರಾದರೂ ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಎಂಬ ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದಾರೆ ಎಂದು ಪಾಲಕರು ಆರೋಪಿಸಿದ್ದಾರೆ.

Advertisement

ಮಕ್ಕಳ ಬಳಕೆ: ಗ್ರಾಮೀಣ ಪ್ರದೇಶದಲ್ಲಿನ ಶೇ.60ರಷ್ಟು ಮಕ್ಕಳು ಬೇಸಿಗೆ ರಜೆಯಲ್ಲಿ ಕೋಚಿಂಗ್‌ ತರಬೇತಿ ಪಡೆಯಲು ಪಟ್ಟಣಕ್ಕೆ ಬರುತ್ತಿದ್ದಾರೆ. ಇಲ್ಲಿನ ಕೆಲ ಶಿಕ್ಷಣ ಸಂಸ್ಥೆಗಳು ಈ ಮಕ್ಕಳನ್ನು ತಮ್ಮ ಸಂಸ್ಥೆ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇಂಥ ಸಂಸ್ಥೆಗಳ ವಿರುದ್ಧ ಶಿಕ್ಷಣಣಿಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಲಿಂಗಣ್ಣ ಮಕಾಶಿ ಆಗ್ರಹಿಸಿದ್ದಾರೆ.

ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುವ ನೆಪದಲ್ಲಿ ಪಾಲಕರಿಂದ ಹಣ ವಸೂಲಿ ದಂಧೆಗಿಳಿದಿವೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಇಂಥ ಸಂಸೆಗಳ ವಿರುದ್ಧ ಕ್ರಮ ಕೈಗೊಂಡು ಮಾನ್ಯತೆ ರದ್ದುಪಡಿಸಬೇಕು.
. ವೀರಭದ್ರಯ್ಯ,
   ಶಿಕ್ಷಣ ಪ್ರೇಮಿ

ನಾಗರಾಜ ತೇಲ್ಕರ್

Advertisement

Udayavani is now on Telegram. Click here to join our channel and stay updated with the latest news.

Next