ದೇವದುರ್ಗ: ತಾಲೂಕಿನ ಗಬ್ಬೂರು ಗ್ರಾಮದಲ್ಲಿರುವ ಬಸ್ ನಿಲ್ದಾಣದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ಪ್ರಯಾಣಿಕರು ತೊಂದರೆ ಪಡುವಂತಾಗಿದೆ. ನಿರ್ವಹಣೆ ಮಾಡಲಾಗದೇ ಶೌಚಗೃಹಕ್ಕೆ ಬೀಗ ಜಡಿಯಲಾಗಿದೆ.
ಎಲ್ಲೆಂದರಲ್ಲಿ ಮೂತ್ರ ವಿಜರ್ಸನೆ ಮಾಡಲಾಗುತ್ತಿದೆ. ಇದರಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಕಸದ ರಾಶಿ ರಾರಾಜಿಸುತ್ತಿದೆ ಎಂದು ಪ್ರಯಾಣಿಕರು ದೂರಿದ್ದಾರೆ.
ಸ್ವಚ್ಛತೆಗೆ ಕ್ರಮವಹಿಸದ ಹಿನ್ನೆಲೆಯಲ್ಲಿ ಪ್ರಯಾಣಿಕರು ಅಸ್ವಚ್ಛತೆ ಮಧ್ಯ ಗ್ರಾಮಗಳಿಗೆ ತೆರಳಬೇಕಾಗಿದೆ. ಸೂಕ್ತ ಆಸನದ ವ್ಯವಸ್ಥೆ ಇಲ್ಲದೇ ಇರುವುದರಿಂದ ಎಲ್ಲೆಂದರಲ್ಲಿ ನಿಂತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಬಸ್ ನಿಲ್ದಾಣ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿಯಾದರೂ ಸೌಲಭ್ಯ ಕೊರತೆಯಿಂದ ಪ್ರಯಾಣಿಕರಿಗೆ ಕಿರಿಕಿರಿಯಾಗುತ್ತಿದೆ ಎಂದು ಚನ್ನವೀರಪ್ಪ ಆರೋಪಿಸಿದರು.
ಗ್ರಂಥಾಲಯ ಸೌಲಭ್ಯ ಕೊರತೆ: ಗಬ್ಬೂರು ಗ್ರಾಮದಲ್ಲಿ ನಿರ್ಮಿಸಲಾದ ಗ್ರಂಥಾಲಯಕ್ಕೆ ಕುಡಿಯುವ ನೀರು, ಶೌಚಾಲಯ ಸೇರಿ ಅಗತ್ಯ ಮೂಲಭೂತ ಸೌಲಭ್ಯಗಳಿಲ್ಲ. ಹೀಗಾಗಿ ಓದುಗರ ಸಂಖ್ಯೆ ದಿನೇ ದಿನೇ ಇಳಿಮುಖವಾಗುತ್ತಿದೆ. ಗ್ರಂಥಾಲಯಕ್ಕೆ ದಿನ ಪತ್ರಿಕೆಗಳ ಪೂರೈಕೆ ಸಹ ಇಲ್ಲ. ಎರಡಂತಸ್ತಿನ ಕಟ್ಟಡವಿದ್ದರೂ ಓದುಗರ ಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳು ಕಲ್ಪಿಸಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
ಆಗಾಗ ಓದುಗರು ಬಾರದೇ ಇದ್ದಲ್ಲಿ ಬಿಕೋ ಎನ್ನುತ್ತಿದೆ. 30 ಸಾವಿರ ಪುಸ್ತಕಗಳು: ಗಬ್ಬೂರು ಗ್ರಾಮದ ಗ್ರಂಥಾಲಯಕ್ಕೆ 30 ಸಾವಿರದಷ್ಟು ಪುಸ್ತಕಗಳು ಪೂರೈಕೆ ಮಾಡಲಾಗಿದೆ. ಸ್ಪರ್ಧಾತ್ಮಕ, ಕಥೆ, ಕಾದಂಬರಿ, ಕೆಲ ಮಹಾನೀಯರ ಪುಸ್ತಕಗಳಿವೆ. ಆದರೆ ಓದುಗರಿಗೆ ದಿನ ಪತ್ರಿಕೆಗಳ ಕೊರತೆ ಉಂಟಾಗಿದೆ.
ಗಬ್ಬೂರು ಗ್ರಾಮದ ಬಸ್ ನಿಲ್ದಾಣದ ಶೌಚಾಲಯಕ್ಕೆ ನೀರು ಮತ್ತು ನಿರ್ವಹಣೆ ಕೊರತೆ ಉಂಟಾಗಿದೆ. ಇದರ ಬಗ್ಗೆ ಕೆಲ ಸಂಘಟನೆ ಮುಖಂಡರು ಗಮನಕ್ಕೆ ತಂದಿದ್ದಾರೆ. ಸಮಸ್ಯೆ ಕುರಿತು ಮೇಲಧಿಕಾರಿಗಳು ಗಮನಕ್ಕೆ ತರಲಾಗಿದೆ.
ಹಸನ್ ಅಲಿ,
ಸಾರಿಗೆ ಘಟಕ ವ್ಯವಸ್ಥಾಪಕ
ಸೌಲಭ್ಯಗಳ ಮರೀಚಿಕೆ ಕುರಿತು ಗಮನಕ್ಕೆ ಬಂದಿದೆ. ಗಬ್ಬೂರು ಗ್ರಂಥಾಲಯ ಸಮಸ್ಯೆ ಹಂತ ಹಂತವಾಗಿ ಬಗೆಹರಿಸಲಾಗುವುದು. ಓದುಗರಿಗೆ ಬೇಕಾಗುವ ಅಗತ್ಯ ಪುಸ್ತಕಗಳು ಪೂರೈಕೆ ಮಾಡಲಾಗಿದೆ.
ರಭಿನಾಳ,
ಜಿಲ್ಲಾ ಗ್ರಂಥಾಲಯ ಅಧಿಕಾರಿ