Advertisement

ಸರ್ಕಾರಿ ಶಾಲೆಗಳಲ್ಲಿನ್ನು ಆಂಗ್ಲ ಮಾಧ್ಯಮ

11:17 AM May 22, 2019 | Team Udayavani |

ದೇವದುರ್ಗ: ಸರ್ಕಾರ ಗ್ರಾಮೀಣ ಭಾಗದ ಮಕ್ಕಳು ಇಂಗ್ಲಿಷ್‌ ಮಾಧ್ಯಮದ ಶಿಕ್ಷಣ ಪಡೆಯಲಿ ಎಂಬ ಉದ್ದೇಶದಿಂದ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮದ ಶಿಕ್ಷಣ ಆರಂಭಕ್ಕೆ ಮುಂದಾಗಿದೆ. ತಾಲೂಕಿನ ಐದು ಸರಕಾರಿ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಇಂಗ್ಲಿಷ್‌ ಬೋಧನೆ ಆರಂಭಿಸಲು ಸಿದ್ಧತೆ ನಡೆದಿದೆ.

Advertisement

ದೇವದುರ್ಗ ಪಟ್ಟಣ ಸೇರಿ ತಾಲೂಕಿನ 5 ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮದ ಶಿಕ್ಷಣ ಆರಂಭವಾಗಲಿದೆ. ಇದು ಈ ಭಾಗದ ಪಾಲಕರಲ್ಲಿ ಸಂತಸ ಮೂಡಿಸಿದೆ ಎನ್ನಲಾಗುತ್ತಿದೆ.

ಡಯಟ್‌ನಲ್ಲಿ ತರಬೇತಿ: ಇಂಗ್ಲಿಷ್‌ ಮಾಧ್ಯಮ ಬೋಧನೆಗೆ ಆಯ್ಕೆಗೊಂಡ ಸರಕಾರಿ ಶಾಲೆ ಮುಖ್ಯ ಶಿಕ್ಷಕರಿಗೆ, ಇಂಗ್ಲಿಷ್‌ ಶಿಕ್ಷಕರಿಗೆ ಯರಮರಸ್‌ನ ಡಯಟ್ ಕೇಂದ್ರದಲ್ಲಿ ಏ.10ರಿಂದ 25ರವರೆಗೆ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ತರಬೇತಿ ಕಾರ್ಯಾಗಾರಕ್ಕೆ ಸಿದ್ದತೆ ಶುರುವಾಗಿದೆ. ಇಂಗ್ಲಿಷ್‌ ಮಾಧ್ಯಮ ನುರಿತ ಐದು ಜನ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದಂತ ಶಿಕ್ಷಕರೇ ಒಂದನೇ ತರಗತಿಯಿಂದ ಆರಂಭವಾಗಲಿರುವ ಇಂಗ್ಲಿಷ್‌ ಮಾಧ್ಯಮದಲ್ಲಿ ಮಕ್ಕಳಿಗೆ ಬೋಧಿಸಲಿದ್ದಾರೆ.

ಜಾಗೃತಿ: ಸರಕಾರ ಜಾರಿಗೆ ತಂದ ಇಂಗ್ಲಿಷ್‌ ಮಾಧ್ಯಮ ಬೋಧನೆ ಯೋಜನೆ ಈಗಾಗಲೇ ಆಯ್ಕೆಗೊಂಡ ಐದು ಸರಕಾರಿ ಶಾಲೆ ವ್ಯಾಪ್ತಿಯಲ್ಲಿ ಮಕ್ಕಳನ್ನು ಸೆಳೆಯಲು ಶಿಕ್ಷಣ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಪಾಲಕರು ತಮ್ಮ ಮಕ್ಕಳನ್ನು ಪಟ್ಟಣದ ಪ್ರತಿಷ್ಠಿತ ಖಾಸಗಿ ಇಂಗ್ಲಿಷ್‌ ಮಾಧ್ಯಮಗಳ ಶಾಲೆಗೆ ಸೇರಿಸುತ್ತಾರೆ. ಹೀಗಾಗಿ ಅಂತಹ ಮಕ್ಕಳನ್ನು ಸೆಳೆದು ಸರಕಾರಿ ಶಾಲೆಯಲ್ಲಿ ಪ್ರವೇಶ ಪಡೆಯುವಂತೆ ಪಾಲಕರಲ್ಲಿ ಶಿಕ್ಷಣಣಿಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ.

ಭರದ ಸಿದ್ದತೆ: ತಾಲೂಕಿನಲ್ಲಿ ಆಯ್ಕೆಗೊಂಡ 5 ಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ಶಿಕ್ಷಣ ಆರಂಭಿಸಲು ಭರದ ಸಿದ್ಧತೆ ನಡೆದಿದೆ. ಆರಂಭದಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಲು ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ. ಶಾಲೆ ಆರಂಭದ ದಿನವೇ ಮಕ್ಕಳಿಗೆ ಸಿಹಿ ವಿತರಿಸಲು ಯೋಜಿಸಲಾಗಿದೆ.

Advertisement

ವಾರದಲ್ಲಿ ಪುಸ್ತಕ ಪೂರೈಕೆ: ಸರಕಾರ 1ನೇ ತರಗತಿ ಇಂಗ್ಲಿಷ್‌ ಮಾಧ್ಯಮದ ಬೋಧನೆಗೆ ಬೇಕಾಗುವ ಪಠ್ಯಪುಸ್ತಕಗಳು ಸೇರಿ ಇತರೆ ಸಾಮಗ್ರಿಗಳನ್ನು ಇನ್ನೂ ಪೂರೈಸಿಲ್ಲ. ವಾರದಲ್ಲಿ ಎಲ್ಲವೂ ಸರಬರಾಜು ಆಗಲಿವೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.

ಖಾಸಗಿ ಸಂಸ್ಥೆಗಳಿಗೆ ಹೊಡೆತ: ರಾಜ್ಯ ಸರಕಾರ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮದ ಶಿಕ್ಷಣ ಆರಂಭೕಸಲು ಮುಂದಾಗಿದ್ದು, ಇದು ಆಯಾ ಭಾಗದ ಖಾಸಗಿ ಶಾಲೆಗಳಿಗೆ ಹೊಡೆತ ಬೀಳಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಗ್ರಾಮೀಣ ಪ್ರದೇಶದ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮದ ಶಿಕ್ಷಣಕ್ಕೆ ಪ್ರವೇಶ ಪಡೆದರೆ ಸಮೀಪದ ಖಾಸಗಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಸಿದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಲಿದೆ. ಸರ್ಕಾರ 1ನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ನೀಡಲು ಯೋಜಿಸಿದ್ದು ಶಿಕ್ಷಣ ಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ ಎನ್ನುತ್ತಾರೆ ನಿವೃತ್ತ ಶಿಕ್ಷಕ ಅಮರಯ್ಯ.

ಜೂನ್‌ 1ರಿಂದ ತಾಲೂಕಿನ ಐದು ಸರಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಆರಂಭವಾಗಲಿದೆ. ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಆರಂಭದ ದಿನವೇ ವಿಶೇಷ ಕಾರ್ಯಕ್ರಮ ರೂಪಿಸುವ ಚಿಂತನೆ ಮಾಡಲಾಗುತ್ತಿದೆ. ಈಗಾಗಲೇ ಸಕಲ ಸಿದ್ದತೆ ಮಾಡಿಕೊಂಡಿದ್ದು ಪಾಲಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
••ಎಸ್‌.ಎಂ.ಹತ್ತಿ,
ಕ್ಷೇತ್ರ ಶಿಕ್ಷಣಾಧಿಕಾರಿ, ದೇವದುರ್ಗ

ಯಾವ ಶಾಲೆಗಳು
•ದೇವದುರ್ಗ ಪಟ್ಟಣದ ಸರಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ

•ಕೆ. ಇರಬಗೇರಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

•ಕೊತ್ತದೊಡ್ಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

•ಬುಂಕಲದೊಡ್ಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

•ಗಬ್ಬೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ಯಾ ಶಾಲೆ

ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next