ದೇವದುರ್ಗ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಡವರಿಗೆ ಪಡಿತರ ತಲುಪಿಸಲು ಏ.10ರ ವರೆಗೆ ಗಡುವು ನೀಡಲಾಗಿದ್ದು, ಆಹಾರಧಾನ್ಯ ವಿತರಣೆಯಲ್ಲಿ ಫಲಾನುಭವಿಗಳಿಂದ ಹಣ ವಸೂಲಿ, ತೂಕದಲ್ಲಿ ವ್ಯತ್ಯಾಸ ನಡೆದಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಗಾಣದಾಳ, ಕರ್ಕಹಳ್ಳಿ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕ್ರಮಕ್ಕೆ ಸಿದ್ಧತೆ ನಡೆದಿದೆ.
ಬಿಪಿಎಲ್, ಅಂತ್ಯೋದಯ ಸೇರಿ 50 ಸಾವಿರಕ್ಕೂ ಹೆಚ್ಚು ಕಾರ್ಡ್ ಹೊಂದಿವೆ. 2500 ಹೊಸ ಕಾರ್ಡ್‌ಗಳು ಬಾಕಿ ಇದ್ದು, ಅಂತಹ ಫಲಾನುಭವಿಗಳು ಪಡಿತರದಿಂದ ವಂಚಿತರಾಗಿದ್ದಾರೆ. ಉಚಿತ ಆಹಾರ ವಿತರಣೆಯಲ್ಲಿ ಹಣ ವಸೂಲಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಗೋಲ್‌ಮಾಲ್: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಏ.14ರ ವರೆಗೆ ಲಾಕ್ ಡೌನ್ ಘೋಷಣೆ ಹಿನ್ನೆಲೆ ರಾಜ್ಯ ಸರ್ಕಾರ ಪಡಿತರದಾರರಿಗೆ ಎರಡು ತಿಂಗಳ ಅಕ್ಕಿ, ಗೋ ದಿ ಪೂರೈಸಲು ಆದೇಶಿಸಿದೆ. ಆದರೆ ಇಲ್ಲಿನ ಕೆಲ ನ್ಯಾಯಬೆಲೆ ಅಂಗಡಿಗಳಿಂದ ಆಹಾರ ಧಾನ್ಯ ವಿತರಿಸುವಾಗ ತೂಕದಲ್ಲಿ ವ್ಯತ್ಯಾಸವಾಗುತ್ತದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಈ ಬಗ್ಗೆ ತಹಶೀಲ್ದಾರ್ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಣ ವಸೂಲಿ, ತೂಕದಲ್ಲಿ ಗೋಲ್‌ಮಾಲ್ ನಡೆದ ಹಿನ್ನೆಲೆ ಗಾಣಧಾಳ, ಕರ್ಕಹಳ್ಳಿ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.
ಪಡಿತರ ಕಾರ್ಡ್ ಸೌಲಭ್ಯ ಇಲ್ಲದವರಿಗೂ ಉಚಿತ ಅಕ್ಕಿ, ಗೋದಿ ನೀಡಲಾಗುತ್ತಿದೆ ಎಂದು ಆದೇಶಿಸಿದ ಹಿನ್ನೆಲೆಯಲ್ಲಿ ಬಹುತೇಕರು ನ್ಯಾಯಬೆಲೆ ಅಂಗಡಿಗಳಿಗೆ ಅಲೆದು ಪಡಿತರ ಸಿಗದೇ ವಾಪಸ್ ಆಗುತ್ತಿದ್ದಾರೆ. ಹಂಚಿಕೆ ಮಾಡಲು ಸರ್ಕಾರದಿಂದ ಇನ್ನೂ ಆಹಾರ ಪೂರೈಕೆಯಾಗಿಲ್ಲ ಎನ್ನುವ ಉತ್ತರ ಅಂಗಡಿ ಮಾಲೀಕರಿಂದ ಕೇಳಿಬರುತ್ತಿದ್ದು, ನೂರಾರು ಬಡವರು ನ್ಯಾಯಬೆಲೆ ಅಂಗಡಿಗಳಿಗೆ ಅಲೆಯುವಂತಾಗಿದೆ.
ದಾನಿಗಳಿಂದ ಆಹಾರ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಡವರು-ನಿರ್ಗತಿಕರಿಗೆ ಆಹಾರ ವಿತರಣೆಗಾಗಿ ದಾನಿಗಳ ಮೂಲಕ ಅಕ್ಕಿ, ಬೇಳೆ, ಖಾರ, ಉಪ್ಪು, ಎಣ್ಣೆ, ಅರಿಶಿಣ, ಮಸಾಲೆ ಪ್ಯಾಕೇಟ್ ಸೇರಿ ಇತರೆ ಆಹಾರ ಪದಾರ್ಥಗಳನ್ನು ದಾನಿಗಳು ತಾಲೂಕಾಡಳಿತಕ್ಕೆ ನೀಡುತ್ತಿದ್ದಾರೆ.
ತೂಕದಲ್ಲಿ ವ್ಯತ್ಯಾಸ, ಹಣ ವಸೂಲಿ ದೂರು ಬಂದ ಹಿನ್ನೆಲೆ ಎರಡು ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕ್ರಮಕ್ಕೆ ಸಿದ್ಧತೆ ನಡೆದಿದೆ. ದಾನಿಗಳ ಮೂಲಕ ಆಹಾರ ಪದಾರ್ಥಗಳು ಬರುತ್ತಿದ್ದು, ಬಡವರು- ನಿರ್ಗತಿಕರನ್ನು ಗುರುತಿಸಿ ಹಂಚಿಕೆ ಮಾಡಲಾಗುತ್ತಿದೆ.
ಮಧುರಾಜ್ ಯಾಳಗಿ,
ತಹಶೀಲ್ದಾರ್