ದೇವದುರ್ಗ: ಕುಡಿಯಲು ಕೆರೆಯ ಕಲುಷಿತ ನೀರೇ ಗತಿ, ಸರಿಯಾದ ರಸ್ತೆ ಇಲ್ಲದ್ದಕ್ಕೆ ಗ್ರಾಮದತ್ತ ಮುಖ ಮಾಡದ ಬಸ್, ಚರಂಡಿ ಸೌಲಭ್ಯ ಇಲ್ಲದ್ದಕ್ಕೆ ರಸ್ತೆಯಲ್ಲೇ ಹರಿವ ಕೊಳಚೆ ನೀರು ಇದು ತಾಲೂಕಿನ ಗಡಿ ಗ್ರಾಮವಾದ ನೀಲಗಲ್ ಗ್ರಾಮದಲ್ಲಿ ಕಂಡುಬರುವ ಸ್ಥಿತಿ.
ತಾಲೂಕಿನ ನಾಗಡದಿನ್ನಿ ಗ್ರಾಪಂ ವ್ಯಾಪ್ತಿಯ ನೀಲಗಲ್ ಗ್ರಾಮ ಅಭಿವೃದ್ಧಿಯಿಂದ ವಂಚಿತವಾಗಿದೆ. ತಾಲೂಕಿನ ಗಡಿ ಗ್ರಾಮವಾದ ನೀಲಗಲ್ ಅಭಿವೃದ್ಧಿಗೆ ತಾಲೂಕು ಪಂಚಾಯಿತಿ ಮತ್ತು ನಾಗಡದಿನ್ನಿ ಗ್ರಾಪಂ ಆಡಳಿತ ನಿರ್ಲಕ್ಷ್ಯ ವಹಿಸಿದೆ. ಪರಿಣಾಮ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಮರೀಚಿಕೆ ಆಗಿದೆ. ಕೆರೆ ನೀರನ್ನು ಕೂಡ ಶುದ್ಧೀಕರಿಸಿ ಪೂರೈಸುತ್ತಿಲ್ಲ. ಕೆರೆಯಲ್ಲಿ ಜಾಲಿಗಿಡ, ಕಸಕಡ್ಡಿಬೆಳೆದಿದ್ದು, ಇಂತಹ ಕಲುಷಿತ ನೀರನ್ನೇ ಗ್ರಾಮಸ್ಥರು ಕುಡಿಯುವಂತಾಗಿದೆ. ಕೆರೆಯ ಕಲುಷಿತ ನೀರನ್ನೇ ಕುಡಿಯುವುದರಿಂದ ಗ್ರಾಮಸ್ಥರು ವಿವಿಧ ಕಾಯಿಲೆ, ಕೈ, ಕಾಲು ನೋವಿನಿಂದ ಬಳಲುತ್ತಿದ್ದಾರೆ.
ಸಾರಿಗೆ ಸೌಲಭ್ಯವಿಲ್ಲ: ತಾಲೂಕಿನ ಗಡಿ ಭಾಗದ ನೀಲಗಲ್ ಗ್ರಾಮಕ್ಕೆ ಸಾರಿಗೆ ಸೌಲಭ್ಯ ಮರೀಚಿಕೆ. ಗ್ರಾಮದ 40ಕ್ಕೂ ಹೆಚ್ಚು ಶಾಲಾ-ಕಾಲೇಜು ವಿದ್ಯಾರ್ಥಿಗಳು ದೇವದುರ್ಗ ಪಟ್ಟಣಕ್ಕೆ ಅಥವಾ ಸಿರವಾರ ತಾಲೂಕು ಕೇಂದ್ರಕ್ಕೆ ಹೋಗಲು ಬಸ್ ಹಿಡಿಯಲು ಗ್ರಾಮದಿಂದ ಸುಮಾರು 2 ಕಿ.ಮೀ. ನಡೆದುಕೊಂಡು ಮುಖ್ಯ ರಸ್ತೆಗೆ ಬರಬೇಕು. ಗ್ರಾಮಕ್ಕೆ ಒಂದು ಶಾಲೆ, ಒಂದು ಬಸ್ ಎಂಬ ಘೋಷಣೆ ಇಲ್ಲಿ ಜಾರಿ ಆಗಿಲ್ಲ. ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ಗ್ರಾಮಸ್ಥರು, ವಿದ್ಯಾರ್ಥಿಗಳು ಹಲವು ಬಾರಿ ಸಾರಿಗೆ ಅಧಿಕಾರಿಗೆ ಮನವಿ ಮಾಡಿದ್ದರೂ ಅಧಿಕಾರಿಗಳ ಹುಸಿ ಭರವಸೆಗೆ ಗ್ರಾಮಸ್ಥರು ತತ್ತರಿಸಿ ಹೋಗಿದ್ದಾರೆ.
ಎರಡು ಸಾವಿರ ಜನಸಂಖ್ಯೆ: ತಾಲೂಕಿನ ಗಡಿ ಗ್ರಾಮವಾದ ನೀಲಗಲ್ ಗ್ರಾಮದಲ್ಲಿ 450ಕ್ಕೂ ಅಧಿಕ ಕುಟುಂಬಗಳಿದ್ದು, ಸುಮಾರು 2 ಸಾವಿರ ಜನಸಂಖ್ಯೆ ಇದೆ. ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಯೋಜನೆಗಳು ಮರೀಚಿಕೆ. ಹೀಗಾಗಿ ಗ್ರಾಮದ ಬಾಲಯೋಗಿ ರೇಣುಕಾ ಶಾಂತಮಲ್ಲ ಶಿವಾಚಾರ್ಯರ ನೇತೃತ್ವದಲ್ಲಿ ಗ್ರಾಮವನ್ನು ಸಿರವಾರ ತಾಲೂಕಿಗೆ ಸೇರಿಸಲು ಆಗ್ರಹಿಸಿ ರಾಜ್ಯ ಹೆದ್ದಾರಿ ತಡೆ ನಡೆಸುವ ಚಿಂತನೆ ನಡೆದಿದೆ. ಹೀಗಾಗಿ ನಾಗಡದಿನ್ನಿ ಗ್ರಾಪಂ ಇಲ್ಲಿನ ಸಮಸ್ಯೆ ಪರಿಹರಿಸಿ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಹೈಕ ವಿಮೋಚನಾ ವೇದಿಕೆ ತಾಲೂಕು ಅಧ್ಯಕ್ಷ ರಾಮಣ್ಣ ಎನ್.ಗಣೇಕಲ್ ಆಗ್ರಹಿಸಿದರು.