Advertisement

ಹೆಸರು ನೋಂದಣಿಗೆ ತಪ್ಪದ ರೈತರ ಅಲೆದಾಟ

12:55 PM Feb 14, 2020 | Naveen |

ದೇವದುರ್ಗ: ಬೆಳೆ ಸಮೀಕ್ಷೆಯಲ್ಲಿ ಖಾಸಗಿ ವ್ಯಕ್ತಿಗಳು ಎಡವಟ್ಟು ಮಾಡಿದ್ದರಿಂದ ತಾಲೂಕಿನಲ್ಲಿ ತೊಗರಿ ಬೆಳೆದ ರೈತರು ತೊಗರಿ ಖರೀದಿ ಕೇಂದ್ರದಲ್ಲಿ ರೈತರು ಹೆಸರು ನೋಂದಣಿಗೆ ಅಲೆದಾಡುವಂತಾಗಿದೆ.

Advertisement

ಪಟ್ಟಣದ ಕೃಷಿ ಮಾರುಕಟ್ಟೆ ಆವರಣದ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಸಂಘದಿಂದ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ ಕೇಂದ್ರ ಆರಂಭಿಸಲಾಗಿದೆ. ಒಬ್ಬ ರೈತರಿಂದ 10 ಕ್ವಿಂಟಲ್‌ ತೊಗರಿ ಖರೀದಿಸಲು ನಿರ್ಧರಿಸಲಾಗಿದೆ. ಫೆ.25ರವರೆಗೆ ರೈತರ ಹೆಸರು ನೋಂದಣಿಗೆ ಅವಕಾಶವಿದ್ದು, ಮಾ.15ರವರೆಗೆ ತೊಗರಿ ಖರೀದಿ ಪ್ರಕ್ರಿಯೆ ನಡೆಯಲಿದೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ 5,800 ರೂ. ಮತ್ತು ರಾಜ್ಯ ಸರ್ಕಾರದ ಪ್ರೋತ್ಸಾಹ ಧನ 300 ರೂ. ಸೇರಿ ಕ್ವಿಂಟಲ್‌ ತೊಗರಿಗೆ 6,100 ರೂ. ದರ ನಿಗದಿಪಡಿಸಲಾಗಿದೆ. ತೊಗರಿ ಮಾರಲಿಚ್ಛಿಸುವ ರೈತರು ಪಹಣಿ, ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ ಬುಕ್‌ ದಾಖಲೆ ನೀಡಬೇಕು. ಈಗಾಗಲೇ 645 ರೈತರು ಹೆಸರು ನೋಂದಣಿ ಮಾಡಿಸಿದ್ದಾರೆ.

ಖಾಸಗಿ ವ್ಯಕ್ತಿಗಳ ಎಡವಟ್ಟು: ತಾಲೂಕಿನಾದ್ಯಂತ ಬೆಳೆದ ಬೆಳೆಗಳನ್ನು ಕೃಷಿ ಮತ್ತು ಕಂದಾಯ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ಮಾಡಲಾಗಿದೆ. ಕಂದಾಯ ಅಧಿಕಾರಿಗಳು ಮೊಬೈಲ್‌ ಮೂಲಕ ಬೆಳೆಗಳ ಜಿಪಿಎಸ್‌ ಮಾಡಿಸಲು ಖಾಸಗಿ ವ್ಯಕ್ತಿಗಳಿಗೆ ವಹಿಸಿದ್ದರು. ರೈತರು ತೊಗರಿ ಬೆಳೆದಿದ್ದರೂ ಬೆಳೆ ಸಮೀಕ್ಷೆ ವೇಳೆ ಖಾಸಗಿ ವ್ಯಕ್ತಿಗಳು ಹತ್ತಿ, ಜೋಳ, ಭತ್ತ ಎಂದು ನಮೂದಿಸಿದ್ದಾರೆ.

ಹೀಗಾಗಿ ತೊಗರಿ ಬೆಳೆದ ರೈತರು ಅಗತ್ಯ ದಾಖಲೆ ಹಿಡಿದುಕೊಂಡು ಹೆಸರು ನೋಂದಣಿಗೆ ಖರೀದಿ ಕೇಂದ್ರಕ್ಕೆ ತೆರಳಿದರೆ ಬೆಳೆದ ಬೆಳೆಗೂ, ಜಿಪಿಎಸ್‌ ಮಾಡಿದ್ದಕ್ಕೂ ಹೊಂದಾಣಿಕೆ ಆಗುತ್ತಿಲ್ಲ. ಹೀಗಾಗಿ 1500ಕ್ಕೂ ಹೆಚ್ಚು ರೈತರು ಕೃಷಿ ಇಲಾಖೆಗೆ ದೂರು ನೀಡಿದ್ದಾರೆ. ಹೆಸರು ನೋಂದಣಿ ಆಗದ ರೈತರು ಬೆಳೆ ನಮೂದಿನಲ್ಲಾದ ಸಮಸ್ಯೆ ಪರಿಹಾರಕ್ಕೆ ಕಂದಾಯ ಇಲಾಖೆ, ಕೃಷಿ ಇಲಾಖೆ ಕಚೇರಿಗೆ ಅಲೆಯುವಂತಾಗಿದೆ.

ಯಾವ್ಯಾವ ಗ್ರಾಮಗಳಲ್ಲಿ ಎಡವಟ್ಟು: ತಾಲೂಕಿನ ಕೆ.ಇರಬಗೇರಾ, ಖಾನಾಪುರು, ಕೂಡ್ಲಿಗಿ, ಬೊಮ್ಮನಾಳ, ಹೊನ್ನಟಗಿ, ಕೊಪ್ಪರ, ಅರಷಿಣಿಗಿ, ಕೋತಿಗುಡ್ಡ, ಮಾನಸಗಲ್‌, ಎಚ್‌.ಎನ್‌.ತಾಂಡಾ, ರಾಮನಾಳ, ಯರಮಸಾಳ, ದೊಂಡಬಂಳಿ, ನಗರಗುಡ್ಡ, ಕೋಣಚಪ್ಪಳಿ ಸೇರಿ ಇತರೆ ಗ್ರಾಮಗಳಲ್ಲಿ ಬೆಳೆ ಸಮೀಕ್ಷೆಯಲ್ಲಿ ಖಾಸಗಿ ವ್ಯಕ್ತಿಗಳು ಎಡವಟ್ಟು ಮಾಡಿದ್ದಾರೆ ಎನ್ನಲಾಗಿದೆ.

Advertisement

ಎಲ್ಲೆಲ್ಲಿ ತೊಗರಿ ಬೆಳೆ: ತಾಲೂಕಿನಾದ್ಯಂತ ದೇವದುರ್ಗ ಪಟ್ಟಣ ವ್ಯಾಪ್ತಿಯಲ್ಲಿ ಖುಷ್ಕಿ 3,025 ಹೆಕ್ಟೇರ್‌, ನೀರಾವರಿ 25 ಹೆಕ್ಟೇರ್‌, ಗಬ್ಬೂರು ಖುಷ್ಕಿ 2,277 ಹೆಕ್ಟೇರ್‌ ಪ್ರದೇಶ ನೀರಾವರಿ ಇಲ್ಲ. ಜಾಲಹಳ್ಳಿ ಹೋಬಳಿಯಲ್ಲಿ ಖುಷ್ಕಿ 3,105 ಹೆಕ್ಟೇರ್‌, ನೀರಾವರಿ 38 ಹೆಕ್ಟೇರ್‌, ಅರಕೇರಾ ಖುಷ್ಕಿ 2,865 ಹೆಕ್ಟೇರ್‌, ನೀರಾವರಿ 20 ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬೆಳೆಯಲಾಗಿದೆ.

ಮರು ಸಮೀಕ್ಷೆ: ಖಾಸಗಿ ವ್ಯಕ್ತಿಗಳಿಂದ ಬೆಳೆ ಸಮೀಕ್ಷೆಯಲ್ಲಿ ಆಗಿರುವ ಸಮಸ್ಯೆ ಬಗೆಹರಿಸಲು ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಬೆಳೆಗಳ ಮರು ಸಮೀಕ್ಷೆ ಆರಂಭಿಸಿದ್ದಾರೆ ಎನ್ನಲಾಗಿದೆ.

ಆಗ್ರಹ: ತೊಗರಿ ಖರೀದಿ ಕೇಂದ್ರದಲ್ಲಿ ಒಬ್ಬ ರೈತರಿಂದ 10 ಕ್ವಿಂಟಲ್‌ ತೊಗರಿ ಖರೀದಿಸಲು ಸರ್ಕಾರ ನಿರ್ಧರಿಸಿದೆ. ಇದು ಹೆಚ್ಚಿಗೆ ತೊಗರಿ ಬೆಳೆದ ರೈತರಿಗೆ ಸಮಸ್ಯೆ ಆಗಿದೆ. ಆದ್ದರಿಂದ ಸರ್ಕಾರ ಒಬ್ಬ ರೈತರಿಂದ 25ರಿಂದ 35 ಕ್ವಿಂಟಲ್‌ವರೆಗೆ ತೊಗರಿ ಖರೀದಿಗೆ ಮುಂದಾಗಬೇಕು ಎಂದು ಕೆಆರ್‌ಎಸ್‌ ತಾಲೂಕು ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ಆಗ್ರಹಿಸಿದ್ದಾರೆ.

„ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next