ದೇವದುರ್ಗ: ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಯೋಜನೆ, ಸೌಲಭ್ಯ ಒದಗಿಸಿದೆ. ಜತೆಗೆ ಕಡ್ಡಾಯ ಶಿಕ್ಷಣ ಹಕ್ಕು ಜಾರಿಗೆ ತಂದಿದೆ. ಆದರೆ ಪಾಲಕರು, ಸಮುದಾಯ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂದಿಗೂ ಅದೆಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.
ಶಾಲೆಗೆ ಸೇರಿಸಿದರೂ ಶಾಲೆ ಬಿಡಿಸಿ ಮಕ್ಕಳನ್ನು ಕೃಷಿ ಕೂಲಿ ಕೆಲಸಕ್ಕೆ, ಇತರೆ ಕೆಲಸಕ್ಕೆ ಕಳಿಸಲಾಗುತ್ತಿದೆ. ಇದಲ್ಲದೇ ಶಾಲೆಯಿಂದ ಹೊರಗುಳಿದ ಮಕ್ಕಳು ಬೀದಿ ಬೀದಿ ಅಲೆದು ಚರಂಡಿ, ಕಸದ ರಾಶಿಯಲ್ಲಿ ಬಿದ್ದ ಮದ್ಯದ ಬಾಟಲಿ, ನೀರಿನ ಬಾಟಲಿ, ರಟ್ಟು, ಪೇಪರ್, ಕಬ್ಬಿಣ ಇತರೆ ತ್ಯಾಜ್ಯ ಸಂಗ್ರಹಿಸಿ ಗುಜರಿಗೆ ಹಾಕಿ ನಿತ್ಯ 150ರಿಂದ 200 ರೂ. ಸಂಪಾದಿಸಿಬದುಕಿನ ಬಂಡಿ ದೂಡುತ್ತಿದ್ದಾರೆ. ಇವರನ್ನು ಶಾಲೆಗೆ ಕರೆತರಬೇಕಾದ ವಿವಿಧ ಇಲಾಖೆ ಅಧಿಕಾರಿಗಳು ಒಬ್ಬರತ್ತ ಮತ್ತೂಬ್ಬರು ಬೊಟ್ಟು ಮಾಡುತ್ತ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ.
ತಾಲೂಕು ಆಡಳಿತ, ಶಿಕ್ಷಣ ಇಲಾಖೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಕೂಲಿಗೆ ತೆರಳುವ, ಚಿಂದಿ ಆಯುವ ಮಕ್ಕಳನ್ನು ಗುರುತಿಸಿ ಅವರನ್ನು ಶಾಲೆಗೆ ಕರೆತರುವ ನಿಟ್ಟಿನಲ್ಲಿ ಕಾರ್ಯಗಳಾಗುತ್ತಿಲ್ಲ. ಬದಲಿಗೆ ಜಾಗೃತಿಜಾಥಾಕ್ಕೆ ಮಾತ್ರ ಸೀಮಿತವಾಗಿದೆ. ಇನ್ನು ಕೆಲವೆಡೆ ನೆಪಕ್ಕೆ ಮಾತ್ರ ದಾಳಿ ಮಾಡಿ ಬಾಲ ಕಾರ್ಮಿಕರನ್ನು ರಕ್ಷಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಸಮಿತಿ ರಚನೆ: ಪ್ರತಿವರ್ಷ ನೂರಾರು ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಇಂತಹ ಮಕ್ಕಳನ್ನು ಗುರುತಿಸಿ ಮರಳಿ ಶಾಲೆಗೆ ಕರೆತರಲು ತಹಶೀಲ್ದಾರ್ ನೇತೃತ್ವದಲ್ಲಿ ತಾಲೂಕು ಮಟ್ಟದ ಅ ಧಿಕಾರಿಗಳ ಸಮಿತಿ ರಚನೆ ಆಗಿದೆ. ಆದರೆ ಒಬ್ಬರತ್ತ ಮತ್ತೂಬ್ಬರು ಬೊಟ್ಟು ಮಾಡುತ್ತ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದರಿಂದ ಶಿಕ್ಷಣ ವಂಚಿತ ಮಕ್ಕಳು ಮುಖ್ಯವಾಹಿನಿಗೆ ಬರುತ್ತಿಲ್ಲ. ಶಿಕ್ಷಣ ಇಲಾಖೆ ತನ್ನ ತಪ್ಪು ಮುಚ್ಚಿಕೊಳ್ಳಲು ಪ್ರತಿವರ್ಷ ಸಮೀಕ್ಷೆಯಲ್ಲಿ ನೂರಾರು ಮಕ್ಕಳು ಶಾಲೆಯಿಂದ ಹೊರಗುಳಿದಿವೆ. 2019-20ನೇ ಸಾಲಿನಲ್ಲಿ 28 ಮಕ್ಕಳು ಶಾಲೆಯಿಂದ ಹೊರಗುಳಿದಿವೆ ಎಂದು ಸಮೀಕ್ಷೆಯಲ್ಲಿ ಪತ್ತೆಯಾಗಿದೆ.
ಸೌಲಭ್ಯಕ್ಕಾಗಿ ಶಾಲೆಗೆ ದಾಖಲು: ಇನ್ನು ಗ್ರಾಮೀಣ ಭಾಗದಲ್ಲಿ ಪಾಲಕರು ಮಕ್ಕಳನ್ನು ಸರ್ಕಾರಿ ಸೌಲಭ್ಯ ಪಡೆಯಲು ಮಾತ್ರ ಶಾಲೆಗೆ ಸೇರಿಸುತ್ತಿದ್ದಾರೆ. ಸರ್ಕಾರ ಮಧ್ಯಾಹ್ನ ಬಿಸಿಯೂಟ, ಕ್ಷೀರಭಾಗ್ಯ, ಉಚಿತ ಸೈಕಲ್, ಸಮವಸ್ತ್ರ, ಶೂ, ಶಿಷ್ಯವೇತನ, ಪಠ್ಯಪುಸ್ತಕ ಸೇರಿ ಇತರೆ ಯೋಜನೆ ಜಾರಿಗೊಳಿಸಿದೆ. ಈ ಸೌಲಭ್ಯ ಪಡೆದ ನಂತರ ಮಕ್ಕಳು ಶಾಲೆಯಿಂದ ಹೊರಗುಳಿದು ಹೊಲಗಳಲ್ಲಿ, ಇತರೆಡೆ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎನ್ನಲಾಗುತ್ತಿದೆ.
ಶಿಕ್ಷಕರು ಹಿಂದೇಟು: ಇನ್ನು ಮಕ್ಕಳು ಶಾಲೆಗೆ ಗೈರಾದಲ್ಲಿ ಅಂತಹ ಮಕ್ಕಳ ಮನೆಗೆ ತೆರಳಿ ಪಾಲಕರ ಮನವೊಲಿಸಿ ಪುನಃ ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ಶಿಕ್ಷಕರು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಈಗಾಗಲೇ ಜಾಗೃತಿ ಮೂಡಿಸಲಾಗಿದೆ. ಪಾಲಕರು ಜಾಗೃತರಾಗಬೇಕು. ಸಮುದಾಯದ ಸಹಕಾರವೂ ಅಗತ್ಯವಾಗಿದೆ.
ಆರ್.ಇಂದಿರಾ,
ಕ್ಷೇತ್ರ ಶಿಕ್ಷಣಾಧಿಕಾರಿ
ನಾಗರಾಜ ತೇಲ್ಕರ್