ಪುಣೆ, ಅ. 20: ನಾಟಕ ರಚನೆ, ನಟನೆ, ನಿರ್ದೇಶನ, ಗಾಯನ ಮುಂತಾದ ಬಹುಮುಖ ಪ್ರತಿಭೆಯ ಅದ್ಭುತ ವ್ಯಕ್ತಿತ್ವವುಳ್ಳ ದೇವದಾಸ್ ಕಾಪಿಕಾಡ್ ಅವರು ತನ್ನ ಅಸಾಧಾರಣ ವ್ಯಕ್ತಿತ್ವದೊಂದಿಗೆ ತುಳು ರಂಗಭೂಮಿಯನ್ನು ಸಮೃದ್ಧಗೊಳಿಸಿದ ಶ್ರೇಷ್ಠ ಕಲಾವಿದರೆಂದರೆ ತಪ್ಪಾಗಲಾರದು. ಬಹಳಷ್ಟು ಹಿಂದಿನಿಂದಲೂ ನಾವೆಲ್ಲ ಕಾಪಿಕಾಡ್‌ರವರ ಅಭಿಮಾನಿಗಳು. ತುಳುನಾಡಿನಲ್ಲಿರುವ ಶ್ರೇಷ್ಠ ನಾಮಾಂಕಿತ ಕಲಾವಿದರನ್ನು ತುಳು ರಂಗಭೂಮಿಗೆ ಪರಿಚಯಿಸಿದಂತಹ ಮಹಾನ್ ವ್ಯಕ್ತಿತ್ವ ಅವರದ್ದಾಗಿದೆ.
ಇಂದು ತುಳು ರಂಗಭೂಮಿ ಇಷ್ಟೊಂದು ಶ್ರೀಮಂತಿಕೆ ಹೊಂದಿದ್ದರೆ ಅದರ ಶ್ರೇಯಸ್ಸು ದೇವದಾಸ್ ಕಾಪಿಕಾಡ್‌ರವರಿಗೆ ಸಲ್ಲುತ್ತದೆ. ಕೇವಲ ನಾಟಕ ರಂಗ ಮಾತ್ರವಲ್ಲದೆ ತುಳು ಸಿನೆಮಾ ರಂಗದಲ್ಲೂ ಸೈ ಎನಿಸಿಕೊಂಡ ಕಾಪಿಕಾಡ್ ತುಳು ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದಾರೆ. ಇಂತಹ ಮಹಾನ್ ಕಲಾವಿದ ಅವರದೇ “ಚಾಪರ್ಕ’ ತಂಡದ ಮೂಲಕ ಇಂದು ಪುಣೆ ಬಂಟರ ಭವನದಲ್ಲಿ ನಮ್ಮೊಂದಿಗಿರುವುದು ಅಭಿಮಾನದ ಸಂಗತಿಯಾಗಿದೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಅಭಿಪ್ರಾಯಪಟ್ಟರು.
ಅವರು ಅ. 17ರಂದು ಪುಣೆ ಬಂಟರ ಸಂಘದ ವತಿಯಿಂದ “ಚಾಪರ್ಕ’ ಕಲಾವಿದರಿಂದ ತೆಲಿಕೆದ ಬೊಳ್ಳಿ ಖ್ಯಾತಿಯ ಲಯನ್ ದೇವದಾಸ್ ಕಾಪಿಕಾಡ್ ನಟಿಸಿ, ನಿರ್ದೇಶಿಸಿದ ತುಳು ಹಾಸ್ಯಮಯ ನಾಟಕ “ಪುಷ್ಪಕ್ಕನ ಇಮಾನ’ ಪ್ರದರ್ಶನದ ಮಧ್ಯಾಂತರದಲ್ಲಿ ದೇವದಾಸ್ ಕಾಪಿಕಾಡ್ ಅವರನ್ನು ಅಭಿನಂದಿಸಿ ಸತ್ಕರಿಸಿ ಮಾತನಾಡಿ, ದೇವದಾಸ್ ಕಾಪಿಕಾಡ್ ಅವರಿಂದ ತುಳು ರಂಗಭೂಮಿ ಹಾಗೂ ತುಳು ಸಿನೆಮಾರಂಗಕ್ಕೆ ಇನ್ನಷ್ಟು ಕೊಡುಗೆ ಸಲ್ಲುವಂತಾಗಲಿ ಎಂದರು.
ಲಯನ್ ದೇವದಾಸ್ ಕಾಪಿಕಾಡ್ ಚಾಪರ್ಕ ತಂಡದ ಮುಂಬಯಿ ಸಂಚಾಲಕ ಪ್ರಕಾಶ್ ಶೆಟ್ಟಿ ಸುರತ್ಕಲ್, “ಚಾಪರ್ಕ’ ತಂಡದ ಹಿರಿಯ ಕಲಾವಿದೆ ಸುಜಾತಾ ಹಾಗೂ ಕಲಾವಿದ ಸಾಯಿಕೃಷ್ಣ ಇವರುಗಳನ್ನು ಶಾಲು ಹೊದೆಸಿ, ಪುಷ್ಪಗುತ್ಛ ನೀಡಿ ಸತ್ಕರಿಸಲಾಯಿತು. ಈ ಸಂದರ್ಭ ದೇವದಾಸ್ ಕಾಪಿಕಾಡ್ ಅವರು ಮಾತನಾಡಿ, ಸುಮಾರು ಹತ್ತು ವರ್ಷಗಳ ಅನಂತರ ನಾವು ಮುಂಬಯಿ, ಪುಣೆಗಳಿಗೆ ಆಗಮಿಸುತ್ತಿದ್ದು ಕಲಾಭಿಮಾನಿಗಳ ಪ್ರೀತ್ಯಭಿಮಾನಕ್ಕೆ ವಂದನೆಗಳು.
ಅದೇ ರೀತಿ ಪುಣೆ ಬಂಟರ ಸಂಘವು ನಮ್ಮ ತಂಡಕ್ಕೆ ಪ್ರೋತ್ಸಾಹ ನೀಡಿರುವುದಕ್ಕೆ ಅಭಿವಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಕಲಾಭಿಮಾನಿಗಳೇ ಪ್ರೀತಿಯಿಂದ ನಮ್ಮನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ. ನವೆಂಬರ್‌ನಲ್ಲಿ ಬಿಡುಗಡೆಗೊಳ್ಳುವ ನೂತನ ತುಳು ಚಲನಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಬೇಕಾಗಿದೆ ಎಂದರು.
ಈ ಸಂದರ್ಭ ಸಂಘದ ಅಧ್ಯಕ್ಷರಾದ ಜಯಂತ್ ಶೆಟ್ಟಿ, ಉಪಾಧ್ಯಕ್ಷರಾದ ಸತೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಕೋಶಾಧಿಕಾರಿ ವೈ. ಚಂದ್ರಹಾಸ ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಜತೆ ಕೋಶಾಧಿಕಾರಿ ಶ್ರೀನಿವಾಸ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್. ಶೆಟ್ಟಿ ಮತ್ತು ಮಹಿಳಾ ಸದಸ್ಯರು, ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಗಣೇಶ್ ಪೂಂಜ, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ರವಿ ಕೆ. ಶೆಟ್ಟಿ ಮತ್ತು ಪದಾಧಿಕಾರಿಗಳು, ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಆನಂದ್ ಶೆಟ್ಟಿ ಮಿಯ್ನಾರ್, ಬಿಲ್ಲವ ಸಮಾಜ ಸೇವಾ ಸಂಘದಅಧ್ಯಕ್ಷ ವಿಶ್ವನಾಥ ಪೂಜಾರಿ ಕಡ್ತಲ, ಹರೀಶ್ ಭಟ್ ಉಪಸ್ಥಿತರಿದ್ದರು. ನಂತರ ಚಾ ಪರ್ಕ ಕಲಾವಿದರಿಂದ “ಪುಷ್ಪಕ್ಕನ ಇಮಾನ’ ನಾಟಕ ಪ್ರದರ್ಶನಗೊಂಡಿತು. ಅಧಿಕ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಉಪಸ್ಥಿತರಿದ್ದರು.
ಚಿತ್ರ-ವರದಿ: ಕಿರಣ್ ಬಿ. ರೈ ಕರ್ನೂರು