ಉಳ್ಳಾಲ: ಸೋಮೇಶ್ವರ ಗ್ರಾಮದ ಕುತ್ತಾರು ಆದಿಸ್ಥಳ ಶ್ರೀ ರಕ್ತೇಶ್ವರೀ ಬೆರ್ಮೆರ್ ಏಳ್ವೆರ್ ಸಿರಿಗಳು ಕೊರಗಜ್ಜ ಕ್ಷೇತ್ರದ ಶ್ರೀ ಬೆರ್ಮೆರ್ ಮಾಡ ಮತ್ತು ಏಳ್ವೆರ್ ಸಿರಿಗಳ ಚಾವಡಿ ನಿರ್ಮಾಣದ ಶಿಲಾನ್ಯಾಸವನ್ನು ರವಿವಾರ ಮಾವಂತೂರು ರಾಜಾರಾಮ ಭಟ್ ಅವರ ಪೌರೋಹಿತ್ಯದಲ್ಲಿ ವಾಸ್ತುಶಿಲ್ಪಿ ಬೆದ್ರಡ್ಕ ರಮೇಶ್ ಕಾರಂತರ ವಾಸ್ತುಶಿಲ್ಪಾನುಸಾರ ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರದ ಧರ್ಮದರ್ಶಿ ದೇವು ಮೂಲ್ಯಣ್ಣ ಅವರು ನೆರವೇರಿಸಿದರು.
ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾತನಾಡಿ, ನಮ್ಮ ಹಿರಿಯರು ದೇವರನ್ನು ಜನಪದೀಯವಾಗಿ ನಂಬಿಕೊಂಡು ಬಂದವರು. ದೇವರನ್ನು ದೈವದ ರೂಪದಲ್ಲಿ ಆರಾಧಿಸಿ ಅವರೊಂದಿಗೆ ಸಂವಾದ ನಡೆಸಿದ ಪರಂಪರೆ ನಮ್ಮದಾಗಿದೆ ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ನಾವು ಎಲ್ಲದರಲ್ಲಿಯೂ ಎಲ್ಲರಲ್ಲೂ ದೇವರಿದ್ದಾನೆ ಎಂಬ ನಂಬುವವರು. ದೈವ ದೇವರನ್ನು ವಿಶಿಷ್ಟವಾಗಿ ನಂಬಿಕೊಂಡು ಬಂದ ಸಮಾಜ ನಮ್ಮದು ಎಂದರು.
ಅಧ್ಯಕ್ಷತೆ ವಹಿಸಿದ ಉಳ್ಳಾಲ ಉಳಿಯ ಶ್ರೀ ಧರ್ಮ ಅರಸರ ಕ್ಷೇತ್ರದ ಧರ್ಮದರ್ಶಿ ದೇವು ಮೂಲ್ಯಣ್ಣ ಮಾತನಾಡಿದರು. ಶ್ರೀ ಕ್ಷೇತ್ರದ ತಂತ್ರಿ ಮಾವಂತೂರು ರಾಜಾರಾಮ ಭಟ್, ಜೋತಿಷಿ ರಂಗ ಐತಾಳ್ ಮತ್ತು ಪ್ರಶ್ನಾಚಿಂತಕ ಶಶಿ ಪಂಡಿತ್ ಧಾರ್ಮಿಕ ಉಪನ್ಯಾಸಗೈದರು.
ಶ್ರೀ ಕ್ಷೇತ್ರ ನಿರ್ಮಾಣದ ರೂವಾರಿ ಹರೀಶ್ ಕುತ್ತಾರು ಪ್ರಾಸ್ತಾವಿಕವಾಗಿ ಮಾತನಾಡಿಡಿದರು. ಜಯರಾಮ ಚೆಂಬುಗುಡ್ಡೆ ಸ್ವಾಗತಿಸಿದರು. ಅರುಣ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು. ಭವಾನಿ ಶಂಕರ್ ಸೇವಂತಿಗುತ್ತು ವಂದಿಸಿದರು.
ಮೂರು ರೀತಿಯ ಆರಾಧನೆ
ತುಳುನಾಡಿನಲ್ಲಿ ಮೂರು ರೀತಿಯ ಆರಾಧನೆಗಳಿವೆ. ದೇವರನ್ನು ದೈವತ್ವದ ರೂಪದಲ್ಲಿ ಆರಾಧನೆ, ಮಾನವ ದೈವತ್ವ ಪಡೆದು ಆರಾಧನೆ, ಸ್ಥಳ ಆಧಾರಿತ ದೈವಾಚರಣೆ. ಈ ಮೂರೂ ಪ್ರಕಾರದ ಆರಾಧನೆ ನಡೆಯುವ ಜಿಲ್ಲೆಯ ಏಕೈಕ ಕ್ಷೇತ್ರ ಸೋಮೇಶ್ವರ ಗ್ರಾಮದ ಕುತ್ತಾರು ಆದಿಸ್ಥಳ ಶ್ರೀ ರಕ್ತೇಶ್ವರೀ ಬೆರ್ಮೆರ್ ಏಳ್ವೆರ್ ಸಿರಿಗಳು ಕೊರಗಜ್ಜ ಕ್ಷೇತ್ರ. ಇಂತಹ ಸಾನ್ನಿಧ್ಯದ ಜೀರ್ಣೋದ್ಧಾರದಿಂದ ಎಲ್ಲರಿಗೂ ಲಾಭವಿದ್ದು, ಜಾತಿ ಧರ್ಮ ಮೀರಿ ದೈವಗಳು ಊರನ್ನು ಬೆಳಗಿಸುತ್ತವೆ, ಜನರನ್ನು ಕಾಪಾಡುತ್ತವೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.