ಮೂಡಬಿದಿರೆ: “ವಿದ್ಯಾರ್ಥಿಗಳಿಗೆ ಜೀವನದಲ್ಲಿ ನಿಶ್ಚಿತ ಗುರಿ ಇರಬೇಕು; ಅದನ್ನು ತಲುಪಲು ಪರಿಶ್ರಮ ಪಡಬೇಕು.ಸಾಧನೆಯ ಹಾದಿಯಲ್ಲಿ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸುವ ಸ್ಥೈರ್ಯವಿದ್ದಾಗ ಯಶಸ್ಸು ಸಾಧ್ಯ. ವೈಯಕ್ತಿಕವಾಗಿ ಪ್ರಗತಿ ಸಾಧಿಸುವ ಜತೆಗೆ ಸಾಂಘಿಕವಾಗಿ ಕಾರ್ಯನಿರ್ವಹಿಸುವ ಮೂಲಕ ದೊಡ್ಡ ಮಟ್ಟದಸಾಧನೆ ಮಾಡಲು ಸಾಧ್ಯ’ ಎಂದು ಬೆಂಗಳೂರು ಇಸ್ರೋ ವೈಜ್ಞಾನಿಕ ಕಾರ್ಯದರ್ಶಿ ಡಾ| ಪಿ.ಜಿ. ದಿವಾಕರ್ ಅವರು ಹೇಳಿದರು.
ಮಿಜಾರಿನಲ್ಲಿರುವ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಕಾಲೇಜಿನ 10ನೇ ಬಿ.ಇ. ತಂಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಸ್ರೋ ಪ್ರೋತ್ಸಾಹ”ಇಸ್ರೋದಲ್ಲಿರುವ ಸಾಂಘಿಕ ಪ್ರಯತ್ನ, ಸಮರ್ಪಣಾಭಾವದ ಫಲಶ್ರುತಿಯಾಗಿ ಬಾಹ್ಯಾಕಾಶ ತಂತ್ರಜ್ಞಾನ ದಲ್ಲಿ ಇಸ್ರೋ ಪ್ರಪಂಚದಲ್ಲೇ ಗುರುತಿಸಿಕೊಂಡಿದೆ. ಇಸ್ರೋ ಸಂಸ್ಥೆಯ ಮೂಲಕ ಉಡಾಯಿಸಲಾದ ಉಪಗ್ರಹಗಳಿಂ ದಾಗಿ ದೂರಸಂವಹನ, ಹವಾಮಾನ ಸ್ಥಿತಿ ಅಧ್ಯಯನ, ಪ್ರಾಕೃತಿಕ ವಿಕೋಪ ನಿರ್ವಹಣೆಯೇ ಮೊದಲಾದ ವಿಷಯಗಳಲ್ಲಿ ನಿತ್ಯ ಜನೋಪಯೋಗಿ ಕಾರ್ಯ ನಡೆಯುತ್ತಿದೆ’ ಎಂದ ಅವರು, ಇಸ್ರೋ ಸಂಸ್ಥೆಯ ಯೋಜನೆಗಳಿಗೆ ಆಳ್ವಾಸ್ ಸಹಕಾರ ನೀಡುತ್ತಿದೆ; ಆಳ್ವಾಸ್‌ನ ಜನೋಪಯೋಗಿ ಯೋಜನೆಗಳಿಗೆ ಇಸ್ರೋ ಮುಕ್ತವಾಗಿ ಪ್ರೋತ್ಸಾಹಿಸುತ್ತದೆ ಎಂದರು.
ಅಪಪ್ರಚಾರಕ್ಕೆ ಎದೆಗುಂದೆವು
ಆಳ್ವಾಸ್ ಎಜುಕೇಶನ್ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. “ಆಳ್ವಾಸ್ ಬದ್ಧತೆಯಿಂದ ಕೆಲಸ ಮಾಡುವ, ಯುವ ಮನಸ್ಸುಗಳನ್ನು ಕಟ್ಟುವ ಸಂಸ್ಥೆ. ಕಳೆದ 2 ದಶಕಗಳಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾರಂಗಗಳಲ್ಲಿ ತೋರುತ್ತಿರುವ ಸಾಧನೆಗೆ ಸಂಸ್ಥೆಯ ಅಧ್ಯಕ್ಷರ ಜತೆಗೆ ಬೋಧಕರ ಸಮರ್ಪಣ ಮನೋಭಾವವೇ ಕಾರಣ’ ಎಂದ ಅವರು, “ಬಹಳ ಕಷ್ಟಪಟ್ಟು ಕಟ್ಟಿದ ಸಂಸ್ಥೆಯ ಬಗ್ಗೆ ಕೀಳಂದಾಜು ಮಾಡುವುದಾಗಲೀ, ಅಪಪ್ರಚಾರ ಮಾಡುವುದಾಗಲೀ ಸಲ್ಲದು. ನಮಗೆ ನಮ್ಮ ವಿದ್ಯಾರ್ಥಿಗಳು, ಪೋಷಕರು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಸಂಸ್ಥೆಯು ಅಪಪ್ರಚಾರಕ್ಕೆ ಎದೆಗುಂದುವುದಿಲ್ಲ. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಶ್ನೆಯೇ ಇಲ್ಲ. ಸತ್ಯ ಎಂದಿಗೂ ಸುಳ್ಳಾಗದು, ಸುಳ್ಳೆಂದೂ ಸತ್ಯವಾಗದು. ಆಳ್ವಾಸ್ ಎಂದೆಂದಿಗೂ ನ್ಯಾಯದ ಪರವಾಗಿದೆ’ ಎಂದು ತಿಳಿಸಿದರು.
ಪ್ರಾಂಶುಪಾಲ ಡಾ| ಪೀಟರ್ ಫೆರ್ನಾಂಡಿಸ್, ವಿವಿಧ ವಿಭಾಗಗಳ ಮುಖ್ಯಸ್ಥರಾದ ಮಂಜುನಾಥ ಕೊಟ್ಟಾರಿ, ದುರ್ಗಾಪ್ರಸಾದ್ ಬಾಳಿಗ, ಕೆ.ವಿ. ಸುರೇಶ್, ಡಾ| ಮಂಜುನಾಥ್, ಜಯಂತ್ ರಾಥೋಡ್, ಡೀನ್‌ಗಳಾದ ಡಾ| ರವಿ ಕುಮಾರ್, ಡಾ| ಬಸವರಾಜ್, ಡಾ| ದತ್ತಾತ್ರೇಯ, ಡಾ| ಪ್ರವೀಣ್, ಡಾ| ರಾಮ್ ಪ್ರಸಾದ್ ವೇದಿಕೆಯಲ್ಲಿದ್ದರು.ಶ್ರುತಿ ಕುಮಾರಿ ನಿರೂಪಿಸಿದರು.