ಚಾಮರಾಜನಗರ: ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ಅತಿ ಹೆಚ್ಚು ಆದಾಯ ತರುವ ಕ್ಷೇತ್ರವಾಗಿರುವ ಮಲೆ ಮಹದೇಶ್ವರ ಬೆಟ್ಟದ ರಸ್ತೆ ತೀವ್ರ ಹದಗೆಟ್ಟು ಪ್ರಯಾಣಿಕರು ಪ್ರಯಾಸ ಪಡುವಂತವಾಗಿದೆ.
ಕೊಳ್ಳೇಗಾಲದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ 80 ಕಿ.ಮೀ. ಅಂತರವಿದ್ದು, ಕೊಳ್ಳೇಗಾಲದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುವವರೆಗೂ ರಸ್ತೆ ಗುಂಡಿ ಬಿದ್ದಿದೆ. ಕೊಳ್ಳೇಗಾಲದಿಂದ ಮಹದೇಶ್ವರ ಬೆಟ್ಟಕ್ಕೆ ಹೋಗುವ ರಸ್ತೆಗೆ ವಾಹನ ತಿರುಗಿಸಿದರೆ ಗುಂಡಿಗಳ ರಸ್ತೆ ಆರಂಭವಾಗುತ್ತದೆ.
ಸಾವಿರಾರು ಪ್ರಯಾಣಿಕರು ಭೇಟಿ: ರಾಜ್ಯ ಹೆದ್ದಾರಿಯಾದ ಈ ರಸ್ತೆ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೊಳಪಡುತ್ತದೆ. ಕೊಳ್ಳೇಗಾಲದಿಂದ ಕೌದಳ್ಳಿತನಕ ಕೊಳ್ಳೇಗಾಲ ಉಪ ವಿಭಾಗಕ್ಕೆ, ಕೌದಳ್ಳಿಯಿಂದ ಪಾಲರ್ ತನಕ ಮಲೆ ಮಹದೇಶ್ವರ ಉಪ ವಿಭಾಗಕ್ಕೆ ಸೇರಿದೆ. ರಾಜ್ಯದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲೊಂದಾದ ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಭೇಟಿ ನೀಡುತ್ತಾರೆ. ಹಾಗಾಗಿ ಈ ರಸ್ತೆಯಲ್ಲಿ ಪ್ರತಿ ದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಶಿವರಾತ್ರಿ, ಯುಗಾದಿ, ದಸರಾ, ದೀಪಾವಳಿ, ಅಮಾವಾಸ್ಯೆ ಮುಂತಾದ ದಿನಗಳಲ್ಲಿ ವಾಹನಗಳ ಸಂಖ್ಯೆ ಲಕ್ಷ ದಾಟುತ್ತದೆ. ಕೇವಲ ವಾಹನಗಳು ಮಾತ್ರವಲ್ಲ ಅನೇಕ ಭಕ್ತರು ಬೆಟ್ಟಕ್ಕೆ ಕಾಲ್ನಡಿಗೆಯಲ್ಲೂ ತೆರಳುತ್ತಾರೆ. ಇಂತಹ ಪುಣ್ಯ ಕ್ಷೇತ್ರದ ರಸ್ತೆ ಸಹಜವಾಗಿ ಉತ್ತಮ ಗುಣಮಟ್ಟದಿಂದ ಕೂಡಿರಬೇಕಿತ್ತು. ಬೇರೆ ರಾಜ್ಯಗಳಿಂದ, ಜಿಲ್ಲೆಗಳಿಂದ ಬರುವ ಜನರಿಗೆ ಮಲೆ ಮಹದೇಶ್ವರ ಬೆಟ್ಟದ ರಸ್ತೆ ಉತ್ತಮವಾಗಿರುತ್ತದೆ ಎಂಬ ಭಾವನೆ ಇರುತ್ತದೆ. ಆದರೆ, ಕೊಳ್ಳೇಗಾಲ ದಾಟುತ್ತಿದ್ದಂತೆಯೇ ಅವರ ಅನಿಸಿಕೆ ಸುಳ್ಳು ಎಂಬುದು ಅರಿವಾಗುತ್ತದೆ.
ರಸ್ತೆಗೆ ತೇಪೆ ಹಚ್ಚುವ ಕೆಲಸ: ಗುಂಡಿ ಬಿದ್ದ ರಸ್ತೆ, ಜಲ್ಲಿ ಕಲ್ಲುಗಳು ಮೇಲೆದ್ದು ಬಂದ ರಸ್ತೆಯಲ್ಲಿ ವಾಹನ ಚಲಿಸುತ್ತಿದ್ದರೆ, ವಾಹನದ ಕುಲುಕಾಟದಿಂದ ಪ್ರಯಾಣಿಕರು ಪ್ರಯಾಸ ಪಡಬೇಕಾಗಿದೆ. ಆಗಾಗ ಈ ರಸ್ತೆಗೆ ತೇಪೆ ಹಚ್ಚುವ ಕೆಲಸ ನಡೆಯುತ್ತದೆ. ತೇಪೆ ಹಾಕಿದ ಕೆಲ ದಿನಗಳ ಬಳಿಕ ರಸ್ತೆ ಮತ್ತೆ ಗುಂಡಿ ಬೀಳುತ್ತದೆ. ಗುಂಡಿ ಬಿದ್ದ ರಸ್ತೆಗೆ ಮತ್ತೆ ತೇಪೆ ಹಾಕಲಾಗುತ್ತದೆ.ಈಗಂತೂ ತೇಪೆ ಹಾಕಿದ ಅಕ್ಕಪಕ್ಕದಲ್ಲಿ ಉದ್ದಕ್ಕೂ ಗುಂಡಿ ಬಿದ್ದು, ರಸ್ತೆ ಪ್ರಯಾಣಿಕರಿಗೆ ಪ್ರಯಾಸ ಮೂಡಿಸುತ್ತದೆ.
ಕಿರಿದಾಗಿಯೇ ಇದೆ ರಸ್ತೆ: ಇನ್ನು, ತಾಳ ಬೆಟ್ಟದಿಂದ ಮಹದೇಶ್ವರ ಬೆಟ್ಟದ ವರೆಗಿನ ರಸ್ತೆ ಅನಾದಿ ಕಾಲದಿಂದಲೂ ಅಗಲೀಕರಣವಾಗಿಲ್ಲ. ದಶಕಗಳಿಂದಲೂ ರಸ್ತೆ ಕಿರಿದಾಗಿಯೇ ಇದೆ. ಆದರೆ, ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಕೆಲವು ತಿರುವುಗಳಲ್ಲಿ ವಾಹನ ಸವಾರರು ಆತಂಕದಿಂದಲೇ ಚಲಿಸಬೇಕಾದ ಸ್ಥಿತಿ ಇದೆ. ಭದ್ರತೆಗಾಗಿ ನಿರ್ಮಾಣ ಮಾಡಿರುವ ತಡೆ ಗೋಡೆಗಳು ಕುಸಿದು ಬೀಳಬಹುದೆಂಬ ಆತಂಕ ಪ್ರಯಾಣಿಕರಲ್ಲಿ ಮೂಡುತ್ತದೆ. ರಂಗಸ್ವಾಮಿ ಒಡ್ಡು, ಆನೆ ತಲೆದಿಂಬದಿಂದ ಆಣೆಹೊಲದ ತನಕ ರಸ್ತೆ ಇಕ್ಕಟ್ಟಾಗಿದೆ. ಜಾತ್ರಾ ಸಮಯದಲ್ಲಿ ಟ್ರಾಫಿಕ್ ಜಾಮ್. ಆದರೆ ಎರಡು ಮೂರು ಗಂಟೆ ರಸ್ತೆ ಬಂದ್ ಆಗಿ ಯಾತ್ರಿಕರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ.
ರಸ್ತೆ ಅಭಿವೃದ್ಧಿಪಡಿಸಲು ಆಗ್ರಹ: ತಾಳ ಬೆಟ್ಟದಿಂದ ಮಹದೇಶ್ವರ ಬೆಟ್ಟದವರಗೆ ಎಲ್ಲಿ ಯಾವಾಗ ಏನಾಗುತ್ತದೆ ಎಂಬುದೆ ಗೊತ್ತಾಗುವುದಿಲ್ಲ, ಮೃತ್ಯು ಕೂಪವಾಗಿರವ ಈ ರಸ್ತೆಯನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಿ ಯಾತ್ರಿಕರು ನೆಮ್ಮದಿಯಿಂದ ಹೋಗಿ ಬರಲು ಅನುವು ಮಾಡಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ. ಈ ರಸ್ತೆಯನ್ನು ಕೆಶಿಪ್‌ಗೆ ಸೇರಿಸಲಾಗಿದೆ. ರಸ್ತೆ ಅಭಿವೃದ್ಧಿಕಾಮಗಾರಿ ಆರಂಭವಾಗಲಿದೆ ಎಂದು ವರ್ಷಗಳಿಂದ ಹೇಳುತ್ತಲೇ ಬರಲಾಗಿದೆ. ಆದರೆ, ಅಭಿವೃದ್ಧ ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಸೌಲಭ್ಯವಿದ್ದರೂ ಸಮರ್ಪಕ ರಸ್ತೆ ಇಲ್ಲ: ರಾಜ್ಯದಪ್ರಸಿದ್ಧ ಯಾತ್ರಸ್ಥಳ ಹಾಗೂ ಹೆಚ್ಚು ಆದಾಯ ಹೊಂದಿರುವ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ರಸ್ತೆ ಹೀಗಾಗಿರುವುದು ಪ್ರಯಾಣಿಕರಲ್ಲಿ ಬೇಸರ ಮೂಡಿಸುತ್ತದೆ. ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿಗೊಳ್ಳುತ್ತಿದ್ದಂತೆ ಯಾತ್ರಿಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಾಗೆಯೇ ಪ್ರತಿ ತಿಂಗಳು ಹುಂಡಿಯ ಆದಾಯ ಹೆಚ್ಚುತ್ತಲೇ ಇದೆ. ಬೆಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ಉತ್ತಮವಾಗಿ ನಡೆಯುತ್ತಿವೆ. ಯಾತ್ರೆಗೆ ಬರುವ ಜನರಿಗೆ ಹೆಚ್ಚಿನ ಅನುಕೂಲಗಳನ್ನು ಮಾಡಿಕೊಡಲಾಗುತ್ತಿದೆ. ಮೂಲ ಸೌಕರ್ಯಗಳು ಸಮರ್ಪಕವಾಗಿದೆ. ಭಕ್ತರಿಗೆ ನಿರಂತರ ದಾಸೋಹ ವ್ಯವಸ್ಥೆ ಸೇರಿದಂತೆ ಇತರೆ ಅನುಕೂಲಗಳನ್ನು ಮಾಡಿಕೊಡಲಾಗುತ್ತಿದೆ. ಆದರೆ, ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೇ ಚೆನ್ನಾಗಿಲ್ಲದಂತಹ ಪರಿಸ್ಥಿತಿ ತಲೆದೋರಿದೆ.
-ಕೆ.ಎಸ್. ಬನಶಂಕರ ಆರಾಧ್ಯ