ಹೊಳಲ್ಕೆರೆ: ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಹದಗೆಟ್ಟ ರಸ್ತೆಗಳಿಂದ ಸಂಚಾರಕ್ಕೆ ತೊಂದರೆಯಾಗಿ ಪರಿಣಮಿಸಿದೆ. ತಾಲೂಕಿನ ರಾಮಘಟ್ಟ, ಅಂಜನಾಪುರ, ದುಮ್ಮಿ ಮಾರ್ಗದಲ್ಲಿರುವ 5 ಕಿಮೀ ತಾಲೂಕು ಹೆದ್ದಾರಿ ರಸ್ತೆ ಹದಗೆಟ್ಟು ಹಲವು ವರ್ಷಗಳೆ ಉರುಳಿದರೂ ಅಭಿವೃದ್ಧಿ ಕಾಣದೇ ಈ ಭಾಗದ ಜನರು ಪ್ರಯಾಣ ಮಾಡುವುದು ದುಸ್ತರವಾಗಿದೆ. ರಸ್ತೆಗುಂಡಿಗಳಿಂದ ತುಂಬಿ ಹೋಗಿದೆ. ರಸ್ತೆಯ ಪಕ್ಕದಲ್ಲಿ ಬೆಳೆದು ನಿಂತ ಜಾಲಿಮುಳ್ಳು ಸಂಚರಿಸುವ ವ್ಯಕ್ತಿಯ ಪ್ರಾಣಕ್ಕೆ ಸಂಚಕಾರ ತರುವ ಮೃತ್ಯುಕೂಪವಾಗಿದೆ.
ಹಲವಾರು ವರ್ಷಗಳ ಹಿಂದೆ ಅಭಿವೃದ್ಧಿಗಾಗಿ ಕಾಮಗಾರಿ ಎನ್ನದೆ, ಕಾಮಗಾರಿಗಾಗಿ ರಸ್ತೆ ಅಭಿವೃದ್ಧಿ ಎಂಬಂತೆ ರಸ್ತೆಯಲ್ಲಿದ್ದ ಗುಂಡಿಗಳನ್ನು ಮುಚ್ಚಿ ಅರೆಬರೆಯಾಗಿ ರಸ್ತೆ ನಿರ್ಮಿಸಿ ಕೈ ತೊಳೆದುಕೊಂಡಿದ್ದು, ಬಿಟ್ಟರೇ ರಸ್ತೆ ಪರಿಸ್ಥಿತಿ ಬಗ್ಗೆ ಯರೊಬ್ಬರು ಚಿಂತಿಸಿಲ್ಲ. ರಸ್ತೆಗೆ ಸಂಬಂಧಿಸಿದ ಇಲಾಖೆ ಇತ್ತ ತಿರುಗಿ ನೋಡುವ ಗೋಜಿಗೆ ಹೋಗಿಲ್ಲ. ಸಾರ್ವಜನಿಕರ ಸುರಕ್ಷಿತ ಪ್ರಯಾಣಕ್ಕೆ ಬೇಕಾದ ರಸ್ತೆ ನಿರ್ಮಿಸುವ ಹೊಣೆ ಇರುವ ಇಲಾಖೆ ಅಧಿಕಾರಿಗಳು, ಇಲ್ಲಿನ ಜನಪ್ರತಿನಿಧಿಗಳ ಕಣ್ಣಿಗೆ ದುಸ್ಥಿತಿಯಲ್ಲಿರುವ ರಸ್ತೆ ರಾಚುತ್ತಿದ್ದರೂ ಕಣ್ಣಿದ್ದರೂ ಕುರುಡರಂತಾಗಿದ್ದಾರೆ. ದಾವಣಗೆರೆ ಮುಖ್ಯ ರಸ್ತೆಯಿಂದ ದುಮ್ಮಿಯಲ್ಲಿ ಹಾದು ಹೋಗಿರುವ ಶಿವಮೊಗ್ಗ ಚಿತ್ರದುರ್ಗ ರಸ್ತೆಗೆ ಲಿಂಕ್ ನೀಡಿ ದೂರ ಕಡಿಮೆ ಮಾಡುವ ರಸ್ತೆ ದುಸ್ಥಿತಿ ಯಿಂದ ಜನರು ಹತ್ತಿಪ್ಪತ್ತು ಕಿಮೀ ಸುತ್ತುವರೆದು ಪ್ರಯಾಣಿಸಬೇಕಾಗಿದೆ. ಚಿಕ್ಕಜಾಜೂರು ರೈಲ್ವೆ ಸ್ಟೇಷನ್ ಬರುವ ದೂರದ ಊರಿನ ಪ್ರಯಾಣಿಕರಿಗೆ ಹಾಗೂ ಚನ್ನಗಿರಿ ಭಾಗಕ್ಕೆ ಪ್ರಯಾಣಿಸಲು ಚಿಕ್ಕಜಾಜೂರು, ಕೋಟೆಹಾಳ್, ಕೊಡಗವಳ್ಳಿ, ಎಮ್ಮಿಗನೂರು, ಚಿಕ್ಕನಕಟ್ಟೆ ತನಕ ಉತ್ತಮ ರಸ್ತೆ ಇದೆ. ರಸ್ತೆಯ ಪಕ್ಕದಲ್ಲಿ ಬೆಳೆದು ನಿಂತಿರುವ ಜಾಲಿ ಮರಗಳು ಪ್ರಯಾಣಿಕರ ಬದುಕಿಗೆ ಮಾರಕವಾಗಿದೆ.
ರಾಮಘಟ್ಟದಿಂದ ದುಮ್ಮಿಯಲ್ಲಿ ಹಾದು ಹೋಗುವ ಶಿವಮೊಗ್ಗ ರಸ್ತೆ ಸಂಪರ್ಕ ಸಾಧಿಸಲು ಸಾಕಷ್ಟು ಜನರು ರಾಮಘಟ್ಟ ದುಮ್ಮಿ ರಸ್ತೆಯಲ್ಲಿ ಸಂಚರಿಸುತ್ತಾರೆ. ರಸ್ತೆ ದುಸ್ಥಿತಿ ಹಾಗೂ ಮುಳ್ಳಿನ ಗಿಡಗಳ ಸಮಸ್ಯೆಗಳಿಂದ ಈ ಮಾರ್ಗದ ಬದಲಿಗೆ ಹೊಳಲ್ಕೆರೆ ಮಾರ್ಗವಾಗಿ ಸಂಚಾರ ಮಾಡುವುದರಿಂದ 25 ಕಿಮೀ ಹೆಚ್ಚುವರಿಯಾಗಿ ಕ್ರಮಿಸಬೇಕಾಗಿದೆ. ಹಾಗಾಗಿ ರಸ್ತೆ ಹದಗೆಟ್ಟಿರುವ ರಾಮಘಟ್ಟ ಅಂಜನಾಪುರ ದುಮ್ಮಿ ಮಾರ್ಗವನ್ನು ಅಗಲೀಕರಣಗೊಳಿಸಿ ಡಾಂಬರ್ ರಸ್ತೆಯನ್ನಾಗಿ ಮಾಡಬೇಕಾಗಿದೆ.
ರಾಮಘಟ್ಟ ದುಮ್ಮಿ ಮಾರ್ಗಕ್ಕೆ ಈ ಹಿಂದೆ ಡಾಂಬರೀಕರಣಗೊಳಿಸಿದ್ದರೂ ಅದು, ಈಗ ಸಂಪೂರ್ಣ ಕಿತ್ತು ಹೋಗಿದೆ. ರಸ್ತೆಯ ಪಕ್ಕದಲ್ಲಿ ಜಾಲಿಗಿಡಗಳು ಬೆಳೆದು ನಿಂತು ಜನರು ಪ್ರಯಾಣಿಸುವುದು ದುಸ್ತರವಾಗಿದೆ. ಇನ್ನು ವಾಹನಗಳಿಗೆ ಜಾಲಿ ಮುಳ್ಳು ತಗುಲಿ ವಾಹನಗಳ ಮೇಲಿನ ಬಣ್ಣ ಹಾಳಾಗುತ್ತಿದೆ. ಬೈಕ್‌ನಲ್ಲಿ ಸಂಚರಿಸಲು ಸಾಧ್ಯವಿಲ್ಲದಷ್ಟು ಮುಳ್ಳಿನ ಗಿಡಗಳು ರಸ್ತೆಯ ಇಕ್ಕೆಲದಲ್ಲಿ ಬೆಳೆದಿದೆ. ಇದರಿಂದಾಗಿ ಎದುರಿಗೆ ಬರುವಂತಹ ವಾಹನ ಜಾಗ ಬಿಡಲು ಹೋದಾಗ ಮುಳ್ಳಿ ಪೊದೆಗೆ ಹೋಗಿ ಹತ್ತಾರು ಜನರು ಮುಳ್ಳಿನ ಹೊಡೆತಕ್ಕೆ ಕಣ್ಣು ಕಳೆದುಕೊಂಡಿದ್ದಾರೆ. ಕೆಲ ಬೈಕ್‌ಚಾಲಕರು ಮುಳ್ಳಿನ ಪೊದೆಯಲ್ಲಿ ಸಿಕ್ಕಿಕೊಂಡು ಮೈಕೈಯಿಗೆ ಮುಳ್ಳುಗಳನ್ನು ಚುಚ್ಚಿಸಿಕೊಂಡಿದ್ದಾರೆ.
ಹಾಗಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಕಡೆಗೆ ಗಮನಹರಿಸಿ ಮುಳ್ಳಿನ ಗಿಡಗಳನ್ನು ತೆರವುಗೊಳಿಸಿ, ದುರಸ್ಥಿಯಲ್ಲಿರುವ ರಸ್ತೆ ಆಭಿವೃದ್ಧಿಪಡಿಸಬೇಕೆಂದು ಜನರು ಆಗ್ರಹಿಸಿದ್ದಾರೆ.
ರಾಮಘಟ್ಟ-ದುಮ್ಮಿ ರಸ್ತೆಯನ್ನು ದುರಸ್ತಿಗೊಳಿಸಿ ಅಗಲೀಕರಣಗೊಳಿಸುವಂತೆ ಸಾಕಷ್ಟು ವರ್ಷಗಳಿಂದ ಎಲ್ಲ ಜನಪ್ರತಿನಿಧಿ , ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ತಿರುಗಿ ನೋಡಿಲ್ಲ. ಹೋರಾಟಕ್ಕೆ ಅಣಿಯಾಗುವ ಮೊದಲೆ ರಸ್ತೆ ನಿರ್ಮಾಣ ಮಾಡಬೇಕು.
–ಕೆ.ಎಸ್.ಮಲ್ಲಿಕಾರ್ಜುನ್, ವಕೀಲರು.