ಹುಣಸಗಿ: ಗ್ರಾಮೀಣ ಪ್ರದೇಶದಲ್ಲಿ ಸಿಸಿ ರಸ್ತೆ, ಚರಂಡಿ ಹಾಗೂ ಮೂಲ ಸೌಕರ್ಯ ಕಲ್ಪಿಸಲು ಸರಕಾರ ಸಾಕಷ್ಟು ಯೋಜನೆಗಳು ಜಾರಿಗೆ ತಂದರೂ ಕೂಡ ತಾಲೂಕಿನ ಚೆನ್ನೂರು ಗ್ರಾಮ ಈವರೆಗೆ ಸಿಸಿ ರಸ್ತೆ, ಚರಂಡಿ ಕಂಡಿಲ್ಲ. ಹೀಗಾಗಿ ಗ್ರಾಮದ ಪ್ರತಿ ವಾರ್ಡ್, ಓಣಿಗಳ ಮುಖ್ಯ ರಸ್ತೆಯಲ್ಲೇ ಕೊಳಚೆ ನೀರು ಹರಿಯುತ್ತಿದ್ದು, ಇದರಲ್ಲೇ ಜನ ಸಂಚರಿಸಲು ಹರಸಾಹಸ ಪಡಬೇಕಿದೆ.
ವಜ್ಜಲ್ ಗ್ರಾಪಂ ವ್ಯಾಪ್ತಿಯ ಚೆನ್ನೂರು ಗ್ರಾಮದಲ್ಲಿ ಸುಮಾರು 1600 ಜನಸಂಖ್ಯೆ ಇದೆ. ಇಬ್ಬರು ಗ್ರಾಪಂ ಸದಸ್ಯರಿದ್ದಾರೆ. ಈಗಷ್ಟೇ ಒಂದು ಸ್ಥಾನ ಹೆಚ್ಚಿಗೆ ಆಗಿದ್ದು, ಮೂವರು ಸದಸ್ಯರನ್ನು ಹೊಂದಿದೆ. ಆದರೆ ಗ್ರಾಮದ ಅಭಿವೃದ್ಧಿ ಮಾತ್ರ ಶೂನ್ಯ ಎಂದು ಗ್ರಾಮಸ್ಥರು ಅಸಮಾಧಾನ ತೋಡಿಕೊಂಡಿದ್ದಾರೆ.
ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಸಿಸಿ ರಸ್ತೆ ಕೊರತೆಯಿಂದ ಪ್ರತಿ ಮನೆಯ ಮೋರೆ ನೀರು ಹಾಗೂ ಮಳೆ ನೀರು ರಸ್ತೆಯಲ್ಲೇ ಹರಿಯುತ್ತದೆ. ಇನ್ನು ತಗ್ಗು ಪ್ರದೇಶದಲ್ಲಿ ಕೊಳಚೆ ನೀರು ನಿಂತು ರಸ್ತೆ ಕೆಸರುಗದ್ದೆಯಂತಾಗುತ್ತದೆ. ದುರ್ವಾಸನೆಯಿಂದ ವಾತಾವರಣ ಕಲುಷಿತಗೊಂಡಿದೆ. ಸೊಳ್ಳೆ ಕಾಟ ಹೆಚ್ಚಿದೆ. ಇಂತಹ ರಸ್ತೆಯಲ್ಲಿ ಮಕ್ಕಳು, ವೃದ್ಧರು ಸಂಚರಿಸಲು ಸಮಸ್ಯೆ ಎದುರಿಸುವಂತಾಗಿದೆ. ಕಾಲು ಜಾರಿ ಬಿದ್ದರೆ ಕೈ-ಕಾಲು ಮುರಿದುಕೊಳ್ಳುವಂತಿದೆ. ಮುಸ್ಲಿಂ ವಾರ್ಡ್‌ನಲ್ಲಿಯೇ ಹೆಚ್ಚು ಸಮಸ್ಯೆ ಇದೆ ಎಂದು ಇಲ್ಲಿನ ಜನರು ಹೇಳುತ್ತಾರೆ. ಮುಖ್ಯರಸ್ತೆ ಅಧೋಗತಿಯಿಂದಾಗಿ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಮಹಿಳೆಯರಿಗೆ ಶೌಚಾಲಯ ಇಲ್ಲದೇ ಸಮಸ್ಯೆ ಎದುರಿಸು ವಂತಾಗಿದೆ. ಸೊಳ್ಳೆಗಳ ಹಾವಳಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.
ಕನಿಷ್ಠ ಪಕ್ಷ ಗ್ರಾಮ ಪಂಚಾಯಿತಿಯವರು ಬ್ಲಿಚಿಂಗ್ ಪೌಡರ್ ಸಿಂಪಡಿಸುವ ಕಾರ್ಯಕ್ಕೂ ಮುಂದಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಸಿಸಿ ರಸ್ತೆ, ಚರಂಡಿ, ಶೌಚಾಲಯ, ಬೀದಿ ದೀಪದಂತಹ ಸೌಲಭ್ಯ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರಸ್ತೆ ಅವ್ಯವಸ್ಥೆಯಿಂದ ಭಾರೀ ಸಮಸ್ಯೆ ಆಗಿದೆ. ಸಂಚಾರಕ್ಕೆ ತೊಂದರೆಯಾಗಿದೆ. ಸಿಸಿ ರಸ್ತೆ, ಚರಂಡಿ ನಿರ್ಮಿಸಲು ಜನಪ್ರತಿನಿಧಿಗಳು ಗಮನಹರಿಸಬೇಕು.-
ಮಶಾಕ ಎಚ್.ಮುಲ್ಲಾ, ಚೆನ್ನೂರು ಗ್ರಾಮದ ನಿವಾಸಿ
ಬಾಲಪ್ಪ.ಎಂ.ಕುಪ್ಪಿ