ನಾರಾಯಣಪುರ: ಬಸವಸಾಗರ ಜಲಾಶಯ ಮುಂಭಾಗದಲ್ಲಿನ ಸೇತುವೆ ಮೇಲ್ಭಾಗದ ಎರಡೂ ಬದಿಯಲ್ಲಿ ಮಳೆ ನೀರು ಸಂಗ್ರಹವಾಗುತ್ತಿದೆ. ಇದರಿಂದ ಸೇತುವೆಗೆ ಧಕ್ಕೆಯಾಗುವ ಸಾಧ್ಯತೆಗಳಿವೆ ಎಂದು ಪ್ರವಾಸಿಗರು ಮತ್ತು ಸಾರ್ವಜನಿಕರು ದೂರುತ್ತಿದ್ದಾರೆ.
ಕಳೆದ ಕೆಲ ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಸೇತುವೆ ಮೇಲೆ ಸಂಗ್ರಹವಾಗುವ ಮಳೆ ನೀರು ಸರಾಗವಾಗಿ ಹೋಗಲು ಸೇತುವಿಗೆ ಇರುವ ರಂಧ್ರಗಳು ಮುಚ್ಚಿವೆ. ಹೀಗಾಗಿ ಸೇತುವೆ ಎರಡೂ ಬದಿಗಳಲ್ಲಿ ನೀರು ನಿಲ್ಲುತ್ತಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಶಿವಪ್ಪ ಬಿರಾದಾರ ತಿಳಿಸಿದ್ದಾರೆ.
ಮಳೆ ನೀರು ನಿಲ್ಲುವುದು ಇದೇ ರೀತಿ ಮುಂದುವರಿದರೆ ನೀರಿನ ತೇವಾಂಶ ಹೆಚ್ಚಾಗಿ ಸೇತುವೆಗೆ ಧಕ್ಕೆ ಉಂಟಾಗುವ ಸಾಧ್ಯತೆಗಳಿದ್ದು, ಬೇಗ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೇತುವೆಗೆ ಹೊಂದಿಕೊಂಡಿರುವ ಡ್ಯಾಂ ರಸ್ತೆಯ ನಿರ್ವಹಣೆ ಕೊರತೆಯಿಂದ ರಸ್ತೆ ಮೇಲೆ ತಗ್ಗು-ದಿನ್ನೆಗಳು ನಿರ್ಮಾಣವಾಗಿದ್ದು ಪ್ರಯಾಣಿಕರು, ವಾಹನ ಸವಾರರಿಗೆ ತೊಂದರೆಯಾಗಿದೆ. ಸಂಬಂಧ ಪಟ್ಟವರು ರಸ್ತೆ ದುರಸ್ತಿಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಶಿಕ್ಷಕ ಶ್ರೀಕಾಂತ ಕುಲಕರ್ಣಿ ಒತ್ತಾಯಿಸಿದ್ದಾರೆ.
ಪ್ರಮುಖ ಸೇತುವೆ: ರಾಯಚೂರು, ಯಾದಗಿರಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಗೆ ಸಂರ್ಪಕ ಕಲ್ಪಿಸುವ ಅಂದಾಜು ಒಂದು ಕಿ.ಮೀ ಉದ್ದದ ಕಾಂಕ್ರೀಟ್ ರಸ್ತೆ ಹೊಂದಿದ ಸೇತುವೆ ಇದಾಗಿದೆ. ಬಸವಸಾಗರ ಜಲಾಶಯ ಸೇರಿದಂತೆ ಶ್ರೀ ಛಾಯಾ ಭಗವತಿ, ಜಲದುರ್ಗ ಕೋಟೆ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಈ ಸೇತುವೆ ಮುಖ್ಯ ಸಂಪರ್ಕ ಕೊಂಡಿ. ಸಾವಿರಾರು ಸಂಖ್ಯೆಯ ವಾಹನಗಳು ಸೇರಿದಂತೆ ಕೃಷ್ಣಾ ಭಾಗ್ಯ ಜಲ ನಿಗಮದ ಹಿರಿಯ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿ ಗಳು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಆದರೂ ಈ ಬಗ್ಗೆ ಗಮನ ಹರಿಸದಿರುವುದು ವಿಪರ್ಯಾಸ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸೇತುವೆ ರಸ್ತೆ ದುರಸ್ತಿಗೆ ಮುಂದಾಗಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.