ಹುಣಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಹಳ್ಳಿ ವನ್ಯಜೀವಿ ವಲಯದಲ್ಲಿ ಜಿಂಕೆ ಬೇಟೆಯಾಡಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಮಾಂಸವನ್ನು ವಶಕ್ಕೆ ಪಡೆದು ತಂದೆ, ಇಬ್ಬರು ಮಕ್ಕಳು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
ಎಚ್.ಡಿ.ಕೋಟೆ ತಾಲೂಕಿನ ಬೊಮ್ಮಲಾಪುರ ಹಾಡಿಯ ಕರಿಯ ಹಾಗೂ ಈತನ ಪುತ್ರರಾದ ಮಂಜು ಮತ್ತು ಶಿವಕುಮಾರ್ ಬಂಧಿತ ಆರೋಪಿಗಳು.
ನಾಗರಹೊಳೆ ಉದ್ಯಾನವನದ ವೀರನಹೊಸಹಳ್ಳಿ ವನ್ಯಜೀವಿ ವಲಯದ ಅಗಸನ ಹುಂಡಿ ಶಾಖೆಯ ಬಫರ್ ಝೋನ್ ವ್ಯಾಪ್ತಿಯಲ್ಲಿ ಜಿಂಕೆ ಬೇಟೆಯಾಡಿ ಮನೆಯಲ್ಲಿ ಮಾಂಸವನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಉದ್ಯಾನದ ಮುಖ್ಯಸ್ಥ ಡಿ.ಮಹೇಶ್‌ಕುಮಾರ್, ಎ.ಸಿ.ಎಫ್.ಸತೀಶ್‌ರ ಮಾರ್ಗದರ್ಶನದಲ್ಲಿ ಆರೋಪಿ ಮನೆ ಮೇಲೆ ಆರ್.ಎಫ್.ಓ. ನಮನ್ ನಾರಾಯಣ ನಾಯಕ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ ವೇಳೆ ಮನೆಯಲ್ಲಿ ಮಾಂಸ ಪತ್ತೆಯಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ದಾಳಿಯಲ್ಲಿ ಡಿ.ಆರ್.ಎಫ್.ಓ.ಸಚ್ಚಿನ್, ವೆಂಕಟೇಶ್ ಹಾಗೂ ರಮೇಶ್ ಭಾಗವಹಿಸಿದ್ದರೆಂದು ಡಿ.ಎಫ್.ಓ.ಮಹೇಶ್ ಕುಮಾರ್ ತಿಳಿಸಿದ್ದಾರೆ.
ಚಾರ್ಲಿಯ ಪ್ರಥಮ ಬೇಟೆ ಸಕ್ಸಸ್
ನಾಗರಹೊಳೆ ಉದ್ಯಾನದಲ್ಲಿ ಅಕ್ರಮ ಚಟುವಟಿಕೆ ಮತ್ತೆ ಹಚ್ಚುವ ಕಾರ್ಯಕ್ಕಾಗಿ ಇತ್ತೀಚೆಗಷ್ಟೆ ನಿಯೋಜನೆಗೊಂಡಿರುವ ಚಾರ್ಲಿ(ಶ್ವಾನ)ಯು ಜಿಂಕೆ ಭೇಟೆ ಪತ್ತೆ ಹಚ್ಚುವ ಕಾರ್ಯದಲ್ಲಿ ಪ್ರಥಮವಾಗಿ ತೊಡಗಿಸಿಕೊಂಡು ಸಕ್ಸಸ್ ಆಗಿದ್ದು, ಸಾಕಷ್ಟು ಗಮನ ಸೆಳೆದಿದೆ. ಒಂದು ವರ್ಷದ ಚುರುಕಾಗಿರುವ ಚಾರ್ಲಿಯನ್ನು ಇಂತಹ ಅಪರಾಧ ಪತ್ತೆ ಪ್ರಕರಣಗಳಲ್ಲಿ ಬಳಸಿಕೊಳ್ಳಲಾಗುವುದೆಂದು ಎಸಿಎಫ್ ಸತೀಶ್ ಉದಯವಾಣಿಗೆ ತಿಳಿಸಿದ್ದಾರೆ.