ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದ ಕುಂದಾಪುರ ಮೂಲದ ಶ್ರೀಧರ ನಾಯರಿ ಅವರ ಬ್ಯಾಗಿನಲ್ಲಿದ್ದ ಚಿನ್ನಾಭರಣ ಹಾಗೂ ನಗದು ನೇತ್ರಾವತಿ ಸ್ನಾನಘಟ್ಟದ ಬಳಿ ಕಳವಾಗಿರುವ ಬಗ್ಗೆ ದೂರು ದಾಖಲಾಗಿದ್ದು, ಧರ್ಮಸ್ಥಳ ಪೊಲೀಸರು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಸಾಂಗೋಲಾದ ನಿವಾಸಿ ಮಿಥುನ್ ಚೌಹಾಣ್ (31)ಯನ್ನು ಬಂಧಿಸಿ 2.4 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಯು ದೇಶದ ವಿವಿಧ ಪ್ರಸಿದ್ಧ ಯಾತ್ರ ಸ್ಥಳಗಳಿಂದ ಕಳ್ಳತನ ಮಾಡುವ ಅಭ್ಯಾಸದವನಾಗಿದ್ದು, ಆತನ ಮೇಲೆ ಮಹಾರಾಷ್ಟ್ರದ ಪುಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸ್ ಅಧೀಕ್ಷಕರಾದ ಹೃಷಿಕೇಶ್ ಸೋನಾವಣೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್‌ಚಂದ್ರ ಮಾರ್ಗದರ್ಶನದಲ್ಲಿ ಬಂಟ್ವಾಳ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ಪ್ರಕಾಶ್‌ಸಿಂಗ್ ತೋರಟ್ ಮತ್ತು ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ್ ನೇತೃತ್ವದಲ್ಲಿ ಪಿಎಸ್‌ಐ ಕೃಷ್ಣಕಾಂತ ಪಾಟೀಲ್ ವಿಶೇಷ ತಂಡದ ಸಿಬಂದಿಗಳಾದ ಎಚ್‌ಸಿ ಬೆನ್ನಿಚ್ಚನ್, ಪ್ರಶಾಂತ್, ರಾಹುಲ್, ಸತೀಶ ನಾಯ್ಕ ಜಿ., ವಿಜು, ರವೀಂದ್ರ, ಸಿ. ಕೃಷ್ಣಪ್ಪ ಮತ್ತು ಜಿಲ್ಲಾ ಗಣಕ ಯಂತ್ರದ ವಿಭಾಗದ ಸಂಪತ್ ಮತ್ತು ದಿವಾಕರ ಭಾಗಿಯಾಗಿದ್ದರು.
ಪ್ರಕರಣ ಭೇದಿಸಿದ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಬಹುಮಾನ ಘೋಷಿಸಿದ್ದಾರೆ.