Advertisement

ನಾಗನಿಗೆ ಮಾಹಿತಿ ನೀಡುತ್ತಿದ್ದವನ ಬಂಧನ

11:52 AM May 10, 2017 | |

ಬೆಂಗಳೂರು: ನೋಟು ಬದಲಾವಣೆ ದಂಧೆಯಲ್ಲಿ ಭಾಗಿಯಾಗಿ ಕಳೆದ 25 ದಿನಗಳಿಂದ ನಾಪತ್ತೆಯಾಗಿರುವ ಪಾಲಿಕೆ ಮಾಜಿ ಸದಸ್ಯ ನಾಗರಾಜ್‌ನ ಮತ್ತೂಬ್ಬ ಸಹಚರನನ್ನು ಎಸಿಪಿ ರವಿಕುಮಾರ್‌ ನೇತೃತ್ವದ ತಂಡ ಬಂಧಿಸಿದೆ.

Advertisement

ಸೌಂದರ್ಯ ರಾಜನ್‌ ಅಲಿಯಾಸ್‌ ಪೆರಿಯಾರ್‌ ಅಪ್ಪು (31) ಬಂಧಿತ ಆರೋಪಿ. ಈತ ನಾಗರಾಜ್‌ನ ಮಾಲೀಕತ್ವದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಅಲ್ಲದೇ ಬ್ಲ್ಯಾಕ್‌ ಆ್ಯಂಡ್‌ ವೈಟ್‌ ದಂಧೆಯಲ್ಲಿ ಭಾಗಿಯಾಗಿದ್ದು, ನಾಗರಾಜ್‌ಗೆ, ಇಲ್ಲಿನ ಎಲ್ಲ ಸಂಗತಿಗಳನ್ನು ಹಾಗೂ ಪೊಲೀಸರ ಚಟುವಟಿಕೆಗಳ ಬಗ್ಗೆ ನಾಗರಾಜ್‌ಗೆ ಮೊಬೈಲ್‌ ಮೂಲಕ ಮಾಹಿತಿ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ ಈಗಾಗಲೇ ಪೊಲೀಸ್‌ ವಶದಲ್ಲಿರುವ ಶರವಣ ವಿಚಾರಣೆ ವೇಳೆ ಪ್ರಮುಖ ಮಾಹಿತಿ ಬಾಯಿಬಿಟ್ಟಿದ್ದು, ಈತನ ಬಳಿ ಪತ್ತೆಯಾದ ಡೈರಿಯಲ್ಲಿ ಸುಮಾರು 25ಕ್ಕೂ ಅಧಿಕ ಮಂದಿ ವ್ಯಕ್ತಿಗಳು ಆರೋಪಿಯಿಂದ ವಂಚನೆಗೊಳಗಾಗಿರುವುದು ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ, ಕಳೆದ 25 ದಿನಗಳೀಂದೀಚೆಗೆ ನಾಗರಾಜ್‌ ಮೇಲೆ ಒಟ್ಟು 12 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ. 

ಐಟಿ, ಇಡಿಗೆ ಮಾಹಿತಿ: ನಾಗರಾಜ್‌ ಮನೆಯಲ್ಲಿ ಪತ್ತೆಯಾದ 14.80 ಕೋಟಿ ಹಳೆ ನೋಟುಗಳ ಬಗ್ಗೆ ನಗರ ಪೊಲೀಸರು ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡಿದ್ದಾರೆ. ಇಷ್ಟೊಂದು ಪ್ರಮಾಣದ ಹಣದ ಮೂಲದ ಪತ್ತೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿರುವ ಐಟಿ ಮತ್ತು ಇಡಿ ಅಧಿಕಾರಿಗಳು ನಾಗರಾಜ್‌ನ ಆಸ್ತಿ, ಪಾಸ್ತಿಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೋಹನ್‌ ಮತ್ತು ನನ್ನ ಕರೆ ವಿವರ ತೆಗೆದು ನೋಡಿ  
ತಲೆಮರೆಸಿಕೊಂಡಿರುವ ನಾಗರಾಜ್‌ ಅಜ್ಞಾತ ಸ್ಥಳದಲ್ಲಿ ಕುಳಿತೇ ಮತ್ತೂಂದು ವೀಡಿಯೋ ಬಿಡುಗಡೆ ಮಾಡಿದ್ದು, ಸಂಸದ ಪಿ.ಸಿ.ಮೋಹನ್‌ ವಿರುದ್ಧ ಹರಿಹಾಯ್ದಿದ್ದಾನೆ. ತಮ್ಮ ಹಾಗೂ ಪಿ.ಸಿ.ಮೋಹನ್‌ ಮತ್ತು ಅವರ ಕುಟುಂಬ ಸದಸ್ಯರ  ನಡುವಿನ ದೂರವಾಣಿ ಕರೆಗಳ ಸಂಭಾಷಣೆ  ಮಾಹಿತಿ ಪಡೆದರೆ ಪೊಲೀಸರಿಗೆ ಎಲ್ಲವೂ ತಿಳಿಯುತ್ತದೆ ಎಂದು ಹೇಳಿದ್ದಾನೆ.

Advertisement

ಜತೆಗೆ ಗೃಹ ಸಚಿವ ಪರಮೇಶ್ವರ್‌ ಅವರನ್ನು ಹೊಗಳಿದ್ದು,  ಅವರು ಹೇಳಿದರೆ ಕೆಲವೇ ನಿಮಿಷಗಳಲ್ಲಿ ಹಾಜರಾಗುತ್ತೇನೆ ಎಂದು ಹೇಳಿದ್ದಾನೆ. ಜತೆಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಬೇರೆ ಯಾರಿಗಾದರೂ ಸಹಾಯ ಮಾಡುತ್ತೇನೆ. ಅವರೇ ಗೆದ್ದುಕೊಳ್ಳಲಿ’ ಎಂದು ಹೇಳಿಕೊಂಡಿದ್ದಾನೆ. ಮತ್ತೆ ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next