ಬೆಂಗಳೂರು: ಸಹೋದರಿಯನ್ನು ಚುಡಾಯಿಸಿದಕ್ಕೆ ಹಲ್ಲೆ ನಡೆಸಿದ ರೌಡಿಶೀಟರ್ನನ್ನು ಬರ್ಬರವಾಗಿ ಹತ್ಯೆಗೈದ ಆರು ಮಂದಿಯನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಗೊಲ್ಲರಹಟ್ಟಿಯ ಮುರುಗೇಶ (33), ಈತನ ಮೊದಲನೇ ಪತ್ನಿ ಶಶಿಕಲಾ (32), ಕೋಲಾರದ ಹರೀಶ ಸೂದನ (28), ಲೂರ್ದು ಲೀನಸ್ (27), ವಿಜಯ ಕುಮಾರ್ (22), ಸಚಿನ್ (22) ಬಂಧಿತರು. ಆರೋಪಿಗಳು ನ.22ರಂದು ಪಂತರಪಾಳ್ಯದ ನಿವಾಸಿ ಮಂಜುನಾಥ್ ಅಲಿಯಾಸ್ ರೋಮಿಯೋ (24)ನನ್ನು ಹತ್ಯೆಗೈದಿದ್ದರು.
ಕೊಲೆಯಾದ ಮಂಜುನಾಥ್ ಬ್ಯಾಟರಾಯನಪುರ ಠಾಣೆಯ ರೌಡಿಶೀಟರ್ ಆಗಿದ್ದು, ಕುಟುಂಬ ಜತೆ ಪಂತರಪಾಳ್ಯದಲ್ಲಿ ನೆಲೆಸಿದ್ದ. ಮಂಜುನಾಥ್ ತಂಗಿಯನ್ನು ಆರೋಪಿ ಮುರುಗೇಶ್ ಚುಡಾಯಿಸುತ್ತಿದ್ದ. ಇದರಿಂದ ಆಕ್ರೋಶಗೊಂಡ ಮಂಜುನಾಥ್ ತನ್ನ ತಂಗಿಯ ತಂಟೆಗೆ ಬಾರದಂತೆ ಮುರುಗೇಶ್ ಮೇಲೆ ಹಲ್ಲೆ ನಡೆಸಿದ್ದ. ಇದರಿಂದ ಕೋಪಗೊಂಡ ಮುರುಗೇಶ್, ತನ್ನ ಸಹಚರರ ಜತೆ ಸೇರಿ ಮಂಜುನಾಥ್ನನ್ನು ಹತ್ಯೆಗೈದಿದ್ದ.
ಮೊದಲ ಪತ್ನಿ ಕಳುಹಿಸಿದ್ದ ಮುರುಗೇಶ್: ಮಂಜುನಾಥ್ ತನ್ನ ಮಾವ ರಾಜು ಅವರ ಮನೆಯಲ್ಲಿ ಮಲಗಿರುವ ವಿಷಯ ತಿಳಿದ ಮುರುಗೇಶ್, ಆತ ಒಂಟಿಯಾಗಿದ್ದಾನೆಯೇ ಎಂದು ತಿಳಿದುಕೊಂಡು ಬರಲು ತನ್ನ ಮೊದಲ ಪತ್ನಿ ಶಶಿಕಲಾಳನ್ನು ಕಳುಹಿಸಿದ್ದ.
ಈ ಹಿನ್ನೆಲೆಯಲ್ಲಿ ರಾಜು ಮನೆಗೆ ಬಂದ ಈಕೆ, ಮಂಜುನಾಥ್ ಒಂಟಿಯಾಗಿ ಮಲಗಿರುವ ಮಾಹಿತಿ ನೀಡಿದ್ದಳು. ಕೂಡಲೇ ತನ್ನ ಸಹಚರರ ಜತೆ ಆಗಮಿಸಿದ ಮುರುಗೇಶ್, ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.