Advertisement
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಶ್ರೀನಿವಾಸ್ (29), ಮಂಜುನಾಥ್ (29), ಲಗ್ಗೇರೆಯ ಜೀವನ್ (26), ರಾಮನಗರದ ಆರ್ಕೇಶ್ (23), ಚಿತ್ರದುರ್ಗದ ಅಬ್ದುಲ್ ವಹಾಬ್ (24), ನೂರುಲ್ಲಾ (22) ಬಂಧಿತರು. ಆರೋಪಿಗಳಿಂದ 1.26 ಕೋಟಿ ರೂ. ಮೌಲ್ಯದ 17 ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಉತ್ತರ ವಿಭಾಗದ ಪೊಲೀಸರು ತಿಳಿಸಿದ್ದಾರೆ.
Related Articles
Advertisement
ಬಂಧಿತರೆಲ್ಲರೂ ಕಾರು ಚಾಲಕರಾಗಿದ್ದು, ಐಷಾರಾಮಿ ಜೀವನಕ್ಕಾಗಿ ಕೃತ್ಯವೆಸಗುತ್ತಿದ್ದರು. ಈ ಪೈಕಿ ಶ್ರೀನಿವಾಸ್ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದಾನೆ. ಅಲ್ಲದೆ, ಯುಟ್ಯೂಬ್ ನೋಡಿ ದರೋಡೆ ಮಾಡುತ್ತಿದ್ದ ಕಾರುಗಳ ನಕಲಿ ದಾಖಲೆಗಳನ್ನು ಫೋಟೋಶಾಪ್‌ನಲ್ಲಿ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯದ ಶೈಲಿ: ಆರೋಪಿಗಳು ಕೆಲ ತಿಂಗಳ ಹಿಂದೆ ಮಂಗಳೂರಿನಲ್ಲಿ ಒಂದು ಸ್ವಿಫ್ಟ್ ಡಿಸೈರ್ ಕಾರು, ಬೆಳಗಾವಿ ಹಾಗೂ ತಮಿಳುನಾಡಿನಲ್ಲಿ ತಲಾ ಒಂದೊಂದು ಇನ್ನೋವಾ ಕಾರುಗಳನ್ನು, ಆನ್‌ಲೈನ್ ಮೂಲಕ ಕಾಯ್ದಿರಿಸಿದ್ದರು.
ಕಾರು ಹತ್ತಿದ ಬಳಿಕ ಮಾರ್ಗ ಮಧ್ಯೆ ಚಾಲಕನಿಗೆ ಕಾರು ನಿಲ್ಲಿಸುವಂತೆ ಸೂಚಿಸಿ, ನಂತರ ಆತನಿಗೆ ಬಲವಂತವಾಗಿ ಮದ್ಯ ಕುಡಿಸಿದ್ದರು. ಮದ್ಯದ ನಶೆಯಲ್ಲಿದ್ದ ಚಾಲಕನ ಕೈ, ಕಾಲುಗಳನ್ನು ಹಗ್ಗದಿಂದ ಕಟ್ಟಿ, ಬಾಯಿಗೆ ಗಮ್‌ಟೇಪ್ ಸುತ್ತಿದ್ದರು. ಮಾರಕಾಸ್ತ್ರ ಹಾಗೂ ಏರ್‌ಗನ್ ತೋರಿಸಿ ಪ್ರಾಣ ಬೆದರಿಕೆ ಹಾಕಿ, ನಿರ್ಜನ ಪ್ರದೇಶದಲ್ಲಿ ಆತನನ್ನು ಬಿಟ್ಟು ಕಾರು ಸಮೇತ ಪರಾರಿಯಾಗಿದ್ದರು.
ವಂಚನೆ ಹೇಗೆ?: ಓಎಲ್‌ಎಕ್ಸ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಕಾರು ಮಾರಾಟ ಕುರಿತು ಜಾಹೀರಾತು ನೀಡುತ್ತಿದ್ದ ಮಾಲೀಕರನ್ನು ಸಂಪರ್ಕಿಸುತ್ತಿದ್ದ ಶ್ರೀನಿವಾಸ್ ಹಾಗೂ ಜೀವನ್, ಬಾಕಿ ಇರುವ ಬ್ಯಾಂಕ್ ಸಾಲದ ಮೊತ್ತವನ್ನು ತಾವೇ ಕಟ್ಟಿಕೊಳ್ಳುತ್ತೇವೆ ಎಂದು ನಂಬಿಸಿ ಒಪ್ಪಂದ ಮಾಡಿಕೊಂಡು, ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದರು. ಆರಂಭದಲ್ಲಿ ಅಲ್ಪಸ್ಪಲ್ಪ ಹಣ ಕಟ್ಟುತ್ತಿದ್ದ ಆರೋಪಿಗಳು, ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗುತ್ತಿದ್ದರು. ಈ ರೀತಿ ವಂಚಿಸಿದ 12 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುಟ್ಯೂಬ್ ನೋಡಿ ನಕಲಿ ಕಾರ್ಡ್: ತನ್ನ ಸಹಚರರ ಮೂಲಕವೂ ಕಾರುಗಳನ್ನು ತನ್ನ ವಶಕ್ಕೆ ಪಡೆಯುತ್ತಿದ್ದ ಆರೋಪಿ ಶ್ರೀನಿವಾಸ್, ಆರ್‌ಸಿ ಕಾರ್ಡ್‌ಗಳನ್ನು ನಕಲಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ಯುಟ್ಯೂಬ್ ವಿಡಿಯೋಗಳನ್ನು ನೋಡಿದ್ದ.
ಬಳಿಕ ಅಸಲಿ ಆರ್‌ಸಿ ಕಾರ್ಡ್‌ಗಳನ್ನು ಸ್ಕ್ಯಾನ್ ಮಾಡಿಕೊಂಡು, ಫೋಟೋಶಾಪ್‌ನಲ್ಲಿ ವಾಹನದ ಎಂಜಿನ್, ಚಾರ್ಸಿ ನಂಬರ್ ಹೊರತು ಪಡಿಸಿ ಇತರೆ ಎಲ್ಲ ಮಾಹಿತಿಯನ್ನು ನಕಲಿ ಮಾಡಿ ಕಾರ್ಡ್‌ಗಳನ್ನು ಸಿದ್ಧಪಡಿಸುತ್ತಿದ್ದ. ಅಲ್ಲದೆ, ಬ್ಯಾಂಕ್‌ಗಳಿಂದ ಎನ್‌ಓಸಿ ನೀಡಿದಂತೆ ನಕಲಿ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ವಾಹನಗಳನ್ನು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಫೈವ್‌ಸ್ಟಾರ್ ಹೋಟೆಲಲ್ಲೇ ವಾಸ್ತವ್ಯ: ಆರೋಪಿಗಳ ಪೈಕಿ ಶ್ರೀನಿವಾಸ್ ಮತ್ತು ಜೀವನ್ ಈ ಮೊದಲು ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ ವ್ಯವಹಾರ ನಡೆಸುತ್ತಿದ್ದರು. ಈ ವೇಳೆ ಸಂಪರ್ಕದಲ್ಲಿದ್ದ ಕೆಲ ಕಾರು ಮಾಲೀಕರಿಗೂ ಆರೋಪಿಗಳು ವಂಚಿಸಿದ್ದಾರೆ. ಬಳಿಕ ತಮ್ಮದೇ ಆದ ತಂಡ ಕಟ್ಟಿಕೊಂಡು ಕೃತ್ಯ ಎಸಗುತ್ತಿದ್ದರು. ಗೋವಾ, ತಮಿಳುನಾಡು ಸೇರಿ ಕೆಲ ರಾಜ್ಯಗಳ ಕಡೆ ಪ್ರವಾಸಕ್ಕೆಂದು ಹೋಗುತ್ತಿದ್ದ ಆರೋಪಿಗಳು, ಪಂಚತಾರಾ ಹೋಟೆಲ್‌ಗಳಲ್ಲೇ ವಾಸ್ತವ್ಯ ಹೂಡುತ್ತಿದ್ದರು.