ಬೆಂಗಳೂರು: ಬೆಳ್ಳಂದೂರಿನ ಹೊರ ವರ್ತುಲ ರಸ್ತೆಯಲ್ಲಿರುವ ಸಾಫ್ಟ್ವೇರ್ ಕಂಪನಿಯೊಂದಕ್ಕೆ ಕಿಟಕಿ ಸರಳಿನ ಮೂಲಕ ನುಗ್ಗಿ 10 ಲ್ಯಾಪ್ ಟಾಪ್ ಕಳವು ಮಾಡಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮಣಿಪುರ ಮೂಲದ ಕೂಮ್ ಬಿನ್ ಪಾವ್ (20), ಮಾಂಗ್ ಮಿನ್ ಲೂನ್ (21) ಹಾಗೂ ಲ್ಯಾಪ್‌ಟಾಪ್ ಖರೀದಿ ಮಾಡಿದ್ದ ಬೆಳ್ಳಂದೂರಿನ ಜಾನಮ್ (25), ಸುನೀಲ್ (25) ಬಂಧಿತರು.
ಎವಿಎಸ್ ಇಡಿಯು ಸೊಲ್ಯೂಷನ್ಸ್ ಹೆಸರಿನ ಸಾಫ್ಟ್ವೇರ್ ಕಂಪನಿಯಲ್ಲಿ 10 ಲ್ಯಾಪ್‌ಲಾಪ್‌ಗ್ಳು ಕಳುವಾಗಿದ್ದ ಸಂಬಂಧ ಕಂಪನಿ ಮಾಲೀಕ ವಿವೇಕ್ ಸೋಮಾನಿ ನೀಡಿದ ದೂರಿನ ಅನ್ವಯ ತನಿಖೆ ನಡೆಸಿದ ಬೆಳ್ಳಂದೂರು ಠಾಣೆ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸ್ಥಳೀಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳಾದ ಕೂಮ್ ಬಿನ್ ಪಾವ್ ಮತ್ತು ಮಾಂಗ್ ಮಿನ್ ಲೂನ್, ಹಣದ ಆಸೆಗಾಗಿ ಸಮೀಪದಲ್ಲಿಯೇ ಇರುವ ಕಂಪನಿಯಲ್ಲಿ ಲ್ಯಾಪ್‌ಟಾಪ್ ಕಳವು ಮಾಡಲು ಸಂಚು ರೂಪಿಸಿದ್ದರು.
ಅದರಂತೆ, ಜು.9ರಂದು ಕಂಪನಿ ಸಿಬ್ಬಂದಿ ಕೆಲಸ ಮುಗಿಸಿಕೊಂಡು ಹೋದ ಬಳಿಕ ಸೆಕ್ಯೂರಿಟಿ ಬಾಗಿಲು ಹಾಕುವುದನ್ನು ನೋಡಿಕೊಂಡಿದ್ದರು. ನಂತರ ಮಧ್ಯರಾತ್ರಿ 1.30ರ ಸುಮಾರಿಗೆ 4ನೇ ಮಹಡಿಯಲ್ಲಿರುವ ಕಿಟಕಿ ಮೂಲಕ ಇಬ್ಬರೂ ಕಂಪನಿ ಒಳಗೆ ನುಗ್ಗಿ ಲ್ಯಾಪ್‌ಟಾಪ್ ಕದ್ದು ತಂದಿದ್ದರು. ಬಳಿಕ ಒಂದು ಲ್ಯಾಪ್‌ಟಾಪ್‌ಗೆ 2 ಸಾವಿರ ರೂ. ಬೆಲೆಗೆ ಜಾನಮ್ ಮತ್ತು ಸುನೀಲ್‌ಗೆ ಮಾರಾಟ ಮಾಡಿದ್ದರು.
ಈ ಕುರಿತು ತನಿಖೆ ಆರಂಭಿಸಿದ ಪೊಲೀಸರು, ಕಂಪನಿಯ ಕಟ್ಟಡದಲ್ಲಿದ್ದ ಸಿಸಿಟವಿ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿಗಳ ಗುರುತು ಪತ್ತೆಯಾಗಿತ್ತು. ಈ ಸುಳಿವು ಆಧರಿಸಿ ನಾಲ್ವರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.