Advertisement

ದರೋಡೆ ನಾಟಕವಾಡಿದ್ದ ಚಾಲಕನ ಬಂಧನ

10:25 AM Apr 04, 2019 | Team Udayavani |

ಉಪ್ಪಿನಂಗಡಿ : ಕಳೆದ ತಿಂಗಳ 25ರಂದು ನಸುಕಿನ ವೇಳೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಗೋಳಿತ್ತೂಟ್ಟಿನಲ್ಲಿ ಲಾರಿ ಚಾಲಕನನ್ನು ಕಟ್ಟಿಹಾಕಿ ದರೋಡೆ ಮಾಡಲಾಗಿತ್ತು ಎಂಬ ಪ್ರಕರಣದ ಹಿಂದಿನ ರಹಸ್ಯವನ್ನು ಪೊಲೀಸರು ಭೇದಿಸಿದ್ದು, ದೂರುದಾತನನ್ನೇ ಪೊಲೀಸರು ಬಂಧಿಸಿದ್ದಾರೆ. ಲಾರಿ ಚಾಲಕನೇ ದರೋಡೆ ನಾಟಕವಾಡಿದ್ದು, ಆತ ಮಾರಾಟ ಮಾಡಿದ್ದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

Advertisement

ಪ್ರಕರಣದ ವಿವರ
ಮಂಡ್ಯದ ಪಾಂಡವಪುರ ತಾಲೂಕಿನ ರಾಮೇಗೌಡರ ಪುತ್ರ ಅಂಬರೀಷ್‌ ಎಸ್‌. ಆರ್‌. (35) ತನ್ನ ಲಾರಿಯಲ್ಲಿ ಚಿಕ್ಕ ಬಳ್ಳಾಪುರದ ಹಿಂದೂಸ್ಥಾನ್‌ ಲಿವರ್‌ ಕಂಪೆನಿಯಿಂದ ಸಾಬೂನು, ಶ್ಯಾಂಪೋ, ಚಾ ಹಾಗೂ ಕಾಫಿ ಹುಡಿಗಳನ್ನು ಮಂಗಳೂರು ಕಡೆಗೆ ಸಾಗಿಸುತ್ತಿದ್ದ. ಚಿಕ್ಕಬಳ್ಳಾಪುರದಿಂದ ಮಂಡ್ಯ, ಶ್ರೀರಂಗಪಟ್ಟಣ, ಕೆ.ಆರ್‌. ಪೇಟೆ, ಚನ್ನರಾಯ ಪಟ್ಟಣ ಮೂಲಕ ಮಂಗಳೂರು ಕಡೆಗೆ ಬರುತ್ತಿದ್ದ ಈತ ಮಾ. 25ರಂದು ಸಂಜೆ 6.30ರ ಹೊತ್ತಿಗೆ ಹಾಸನ ತಲುಪಿದ್ದ. ರಾತ್ರಿ ಸಕಲೇಶಪುರ ಸಮೀಪದ ಮಾರನಹಳ್ಳಿಯಲ್ಲಿ ಊಟ ಮಾಡಿ ಪುತ್ತೂರು ಕಡೆಗೆ ಬರುತ್ತಿದ್ದ.

ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಗೋಳಿತ್ತೂಟ್ಟು ಗ್ರಾಮದ ಶಿರಡಿಗುಡ್ಡೆಯ ಏರುರಸ್ತೆಯಲ್ಲಿ ಸಾಗುತ್ತಿದ್ದಂತೆ ಹಿಂದಿನಿಂದ ಬಂದ ಇಂಡಿಕಾ ಕಾರಿನಲ್ಲಿದ್ದ ಇಬ್ಬರು ತನ್ನ ಮೇಲೆ ಹಲ್ಲೆ ನಡೆಸಿ, ಕಟ್ಟಿ ಹಾಕಿ ದರೋಡೆ ಮಾಡಿದ್ದರು ಎಂದು ಅಂಬರೀಷ್‌ ಪೊಲೀಸರಿಗೆ ದೂರು ನೀಡಿದ್ದ. ತನ್ನ ಪ್ಯಾಂಟಿನಲ್ಲಿದ್ದ 5,200 ರೂ. ಹಾಗೂ 2,000 ರೂ. ಮೌಲ್ಯದ ಮೊಬೈಲನ್ನು ದರೋಡೆ ಮಾಡಿದ್ದಾರೆ. ಅಲ್ಲದೆ ಲಾರಿಯಲ್ಲಿದ್ದ ಕೆಲವು ಬಾಕ್ಸ್‌ ಸಾಮಗ್ರಿಗಳನ್ನು ಕೊಂಡೊಯ್ದಿದ್ದಾರೆ ಎಂದು ನೀಡಿದ್ದ ದೂರಿನ ಆಧಾರದಲ್ಲಿ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಶೇಷ ತಂಡ ರಚನೆ
ಇದೊಂದು ಹೆದ್ದಾರಿ ದರೋಡೆ ಪ್ರಕರಣವಾಗಿದ್ದರಿಂದ ತನಿಖೆ ಕೈಗೊಂಡ ಪೊಲೀಸರು, ಪ್ರೊಬೆಷನರಿ ಎಎಸ್‌ಪಿ ಪ್ರದೀಪ್‌ ಗುಂಟಿ ಐಪಿಎಸ್‌, ಉಪ್ಪಿನಂಗಡಿ ಎಸ್‌ಐ ನಂದ  ಕುಮಾರ್‌, ಪ್ರೊಬೆಷನರಿ ಎಸ್‌ಐ ಪವನ್‌ ಕುಮಾರ್‌ ಹಾಗೂ ಪುತ್ತೂರು ಗ್ರಾಮಾಂತರ ಸಿಐಡಿ. ಮಂಜುನಾಥ್‌ ನೇತೃತ್ವದ ವಿಶೇಷ ತಂಡ ರಚಿಸಿದ್ದರು.

ದೂರಿನಲ್ಲಿ ಪೊಲೀಸರಿಗೆ ಸಂಶಯ ವ್ಯಕ್ತವಾಗಿದ್ದು, ಇದೊಂದು ಕಟ್ಟು ಕಥೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂತು. ಅಂಬರೀಷ್‌ ನನ್ನು ತೀವ್ರ ವಿಚಾರಣೆ ನಡೆಸಿದಾಗ ದರೋಡೆ ನಾಟಕವಾಡಿದ್ದನ್ನು ಒಪ್ಪಿಕೊಂಡ. ದರೋಡೆ ನಡೆದಿದೆ ಎಂದು ಹೇಳಲಾಗಿದ್ದ ಲಾರಿಯ ಮಾಲಕನೂ ಆಗಿದ್ದ ಅಂಬರೀಷ್‌ಗೆ ವಿಪರೀತ ಸಾಲವಿತ್ತು. ಸಾಲ ತೀರಿಸಲೆಂದು ಲಾರಿಯಲ್ಲಿದ್ದ ಸಾಮಗ್ರಿಗಳ ಪ್ಯಾಕೆಟ್‌ಗಳನ್ನು ಚನ್ನಪಟ್ಟಣದ ಅಂಗಡಿಗೆ ಮಾರಿದ್ದ. ಇದನ್ನು ಮರೆಮಾಚಲು ದರೋಡೆ ನಾಟಕವಾಡಿದ್ದನ್ನು ಪೊಲೀಸರ ಮುಂದೆ ಒಪ್ಪಿ ಕೊಂಡಿದ್ದಾನೆ.

Advertisement

ಅಂಬರೀಷ್‌ನನ್ನು ಬಂಧಿಸಿ, ಈತ ಲಾರಿಯಿಂದ ಕದ್ದು ಮಾರಾಟ ಮಾಡಿದ್ದ ಸಾಮಗ್ರಿಗಳನ್ನು ಚನ್ನಪಟ್ಟಣದಿಂದ ವಶಕ್ಕೆ ಪಡೆಯಲಾಯಿತು. ಈ ಸೊತ್ತುಗಳ ಒಟ್ಟು ಮೌಲ್ಯ 58,867 ರೂ. ಎಂದು ಅಂದಾಜಿಲಗಿದೆ. ಅಲ್ಲದೆ ಸೊತ್ತು ಮಾರಿ ಪಡೆದಿದ್ದ 51,500 ರೂ. ಅನ್ನು ಈತನಿಂದ ವಶ ಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next