ಬೆಂಗಳೂರು: ನಗರದ ರೆಸೆಡೆನ್ಸಿ ರಸ್ತೆಯಲ್ಲಿರುವ ನ್ಯೂ ರಾಯಲ್ ಟೆಕ್ ರಿಕ್ರಿಯೆಷನ್ ಕ್ಲಬ್‌ನಲ್ಲಿ ಅಕ್ರಮವಾಗಿ ವಿಡಿಯೋ ಗೇಮ್ ಆಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ ವೇಳೆ ಮಣಿಪುರ ಮೂಲದ ವ್ಯಕ್ತಿಯೊಬ್ಬ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಈ ಸಂಬಂಧ ಮಣಿಪುರ ಮೂಲದ ಜಂಪೆಲ್ ದೋರ್ಜಿ(32) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಅಶೋಕನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಕ್ರಮವಾಗಿ ವಿಡಿಯೋ ಗೇಮ್ ಆಡಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಮಫ್ತಿಯಲ್ಲಿ ಸಿಸಿಬಿ ಪೊಲೀಸರು ಕ್ಲಬ್ ಮೇಲೆ ದಾಳಿ ನಡೆಸಿದ್ದರು.
ಈ ವೇಳೆ ಆರೋಪಿ, ಗನ್ ಮಾದರಿಯ ಸಿಗರೇಟ್ ಹಚ್ಚಿಕೊಳ್ಳುವ ಲೈಟರ್‌ನ್ನು ಪೊಲೀಸರಿಗೆ ತೋರಿಸಿ ಬೆದರಿಕೆಯೊಡ್ಡಲು ಯತ್ನಿಸಿದ್ದಾನೆ. ಪ್ರಾಣ ರಕ್ಷಣೆಗಾಗಿ ಸಿಸಿಬಿ ಇನ್‌ಸ್ಪೆಕ್ಟರ್ ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಯನ್ನು ಹಿಡಿಯಲು ಮುಂದಾಗಿದ್ದಾರೆ. ಆದರೂ ಆರೋಪಿ ತಪ್ಪಿಸಿಕೊಂಡು ಓಡಲು ಯತ್ನಿಸಿದ್ದಾನೆ.
ಇದನ್ನು ಕಂಡ ಸಿಸಿಬಿ ಪೇದೆ ಹರೀಶ್ ಆತನನ್ನು ಹಿಡಿಯಲು ಮುಂದಾಗಿದ್ದಾರೆ. ಆಗ ಹರೀಶ್ ಕೈ ಕಚ್ಚಿ ಪಕ್ಕಕ್ಕೆ ತಳ್ಳಿ ಓಡಲು ಯತ್ನಿಸಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಇತರೆ ಪೊಲೀಸ್ ಸಿಬ್ಬಂದಿ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದೇ ವೇಳೆ ಆರೋಪಿಗೆ ಸಹಕಾರ ನೀಡಿದ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಅಶೋಕ್‌ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಜಂಪೆಲ್ ದೋರ್ಜಿ ಸೇರಿದಂತೆ ಎಲ್ಲ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಬಿ ಪೊಲೀಸರ ಕಾರ್ಯಾಚರಣೆ ವೇಳೆ ಜಂಪೆಲ್ ದೋರ್ಜಿ ಎಂಬಾತ ಹಲ್ಲೆಗೆ ನಡೆಸಲು ಬಂದ. ಈ ವೇಳೆ ಪೇದೆಯೊಬ್ಬರು ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಅಶೋಕ್‌ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಹಾಗೆಯೇ ಜಂಪೆಲ್ ದೋರ್ಜಿ ಸೇರಿದಂತೆ ಎಲ್ಲ ಬಂಧಿತರನ್ನು ವಿಚಾರಣೆ ನಡೆಸಲಾಗುತ್ತಿದೆ.
-ಡಾ. ಚಂದ್ರಗುಪ್ತಾ, ಡಿಸಿಪಿ ಕೇಂದ್ರ ವಿಭಾಗ