ಬೆಂಗಳೂರು: ಶುಕ್ರವಾರ ತಡರಾತ್ರಿ ಲಗ್ಗೆರೆ ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದ ಪುಷ್ಪಾ ಅವರ ಶವ ಪತ್ತೆಯಾಗಿದ್ದು, ತಾಯಿ ನಿಂಗಮ್ಮ ಅವರಿಗಾಗಿ ಶೋಧಕಾರ್ಯ ಮುಂದುವರಿದಿದೆ. ಕೊಚ್ಚಿಹೋದ ಸ್ಥಳದಿಂದ 13 ಕಿ.ಮೀ. ದೂರದ ಕುಂಬಳಗೋಡು ಬ್ರಿಡ್ಜ್ ಬಳಿ ಪುಷ್ಪಾ (22) ಶವ ದೊರೆತಿದೆ.
24 ಗಂಟೆಗಳ ಕಾಲ ಅಗ್ನಿಶಾಮಕ, ನಾಗರಿಕ ರಕ್ಷಣೆ, ರಾಜ್ಯ ಮತ್ತು ಕೇಂದ್ರ ವಿಪತ್ತು ನಿರ್ವಹಣಾ ದಳ ಸೇರಿದಂತೆ ನಾಲ್ಕು ವಿಭಾಗಗಳಿಂದ 80ಕ್ಕೂ ಅಧಿಕ ಸಿಬ್ಬಂದಿ ಒಳಗೊಂಡ ಏಳು ತಂಡಗಳು ನಿಂತರ ಕಾರ್ಯಾಚರಣೆ ನಡೆಸಿದ ಫಲವಾಗಿ ಭನುವಾರ ಬೆಳಗ್ಗೆ 11.30ಕ್ಕೆ ಪುಷ್ಪಾ ಶವ ಸಿಕ್ಕಿದೆ. ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಪಾರ್ಥಿವ ಶರೀರವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಮುಗಿಲು ಮುಟ್ಟಿದ ಆಕ್ರಂದನ: ಶವ ಹಸ್ತಾಂತರಗೊಳ್ಳುತ್ತಿದ್ದಂತೆ ಕುಟುಂಬದ ಸದಸ್ಯರ ಆಕ್ರಂದನ ಮುಗಿಲುಮುಟ್ಟಿತು. ಜನಪ್ರತಿನಿಧಿಗಳು, ಅಧಿಕಾರಿಗಳು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಮಧ್ಯೆ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಬಿಬಿಎಂಪಿಯು ಕುರುಬರಹಳ್ಳಿ ರಾಜಕಾಲುವೆ ಉದ್ದಕ್ಕೂ ಇರುವ ನಿವಾಸಿಗಳ ಸ್ಥಳಾಂತರಕ್ಕೆ ಸೂಚಿಸಿದ್ದು, ಐದು ಕಡೆ ಗಂಜಿಕೇಂದ್ರಗಳನ್ನು ತೆರೆಯಲಾಗಿದೆ.
ಶಂಕರಮಠದ ಮಂಜುಶ್ರೀ ಕಲ್ಯಾಣಮಂಟಪ ಮತ್ತು ಯೋಗಕೇಂದ್ರ, ಜೆ.ಸಿ.ನಗರದ ರಂಗಮಂದಿರ, ವಿಜಯಾನಂದನಗರ ಬಿಡಿ ಸಮುದಾಯ ಭವನ, ಚಂದ್ರಪ್ಪ ರಸ್ತೆಯ ಅಂಗನವಾಡಿ ಕೇಂದ್ರದಲ್ಲಿ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ವಾರ್ಡ್ ಸಂಖ್ಯೆ 44, 68, 74, 75 ಮತ್ತು 102ರ 2,400 ಕುಟುಂಬಗಳನ್ನು ಪುನರ್ವಸತಿಗೆ ಗುರುತಿಸಿದ್ದು, ತಲಾ 6 ಸಾವಿರ ತಿಂಡಿ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಇಸ್ಕಾನ್‌ನಿಂದ ಊಟ ಪೂರೈಕೆ ಆಗುತ್ತಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಜನ ಬಾರದಿರುವುದರಿಂದ ಸೋಮವಾರ ತಲಾ 2 ಸಾವಿರ ತಿಂಡಿ ಮತ್ತು ಊಟ ನೀಡಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಇಂದು ಚೆಕ್ ವಿತರಣೆ: ಮಳೆಯಿಂದ ಮೃತಪಟ್ಟವರ ಆರು ಕುಟುಂಬಗಳಿಗೆ ಸೋಮವಾರ ಬಿಬಿಎಂಪಿ ತಲಾ ಐದು ಲಕ್ಷ ರೂ. ಪರಿಹಾರ ಚೆಕ್ ವಿತರಿಸಲಿದೆ. ಮಧ್ಯಾಹ್ನ 3 ಗಂಟೆಗೆ ಮೇಯರ್ ಸಂಪತ್‌ರಾಜ್, ಆಯುಕ್ತ ಎನ್. ಮಂಜುನಾಥ ಪ್ರಸಾದ್ ಸೇರಿದಮತೆ ಮುಖಂಡರು ಸಂತ್ರಸ್ತರ ಮನೆಗಳಿಗೆ ತೆರಳಿ ಪರಿಹಾರದ ಚೆಕ್‌ಗಳನ್ನು ವಿತರಿಸಲಿದ್ದಾರೆ. ಮನೆ ಗೋಡೆ ಕುಸಿದು ಮೃತಪಟ್ಟ ಶಂಕರಪ್ಪ, ಕಮಲಮ್ಮ, ಕೊಚ್ಚಿಹೋಗಿದ್ದ ವಾಸುದೇವ್, ನಿಂಗಮ್ಮ, ಪುಷ್ಪಾ ಮತ್ತು ನರಸಮ್ಮ ಅವರ ಕುಟುಂಬದವರಿಗೆ ಚೆಕ್ ವಿತರಿಸಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.
ಹೊದಿಕೆ ವಿತರಣೆ: ಕುರುಬರಹಳ್ಳಿಯಲ್ಲಿ ಮಳೆ ಸಂತ್ರಸ್ತರಿಗೆ ಅಕ್ಕಿ-ಬೇಳೆ ಮತ್ತಿತರ ಆಹಾರಧಾನ್ಯ ಮತ್ತು ಹೊದಿಕೆಗಳನ್ನು ಬಿಬಿಎಂಪಿ ವಿತರಿಸಲಿದೆ. ರಾಜಕಾಲುವೆ ಆಸುಪಾಸು ಇರುವ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿರುವ ವಸ್ತುಗಳೆಲ್ಲಾ ನೆನೆದಿವೆ. ಹಾಗಾಗಿ, ಪ್ರತಿ ಮನೆಗಳಿಗೆ ಎರಡು ಹೊದಿಕೆಗಳನ್ನು ವಿತರಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.