Advertisement

ಹೇಗಿದೆ ಗೊತ್ತಾ ಮೋದಿ ಧ್ಯಾನ ಮಾಡಿದ ಆ ಗುಹೆ?

09:39 AM May 20, 2019 | Hari Prasad |

ಡೆಹ್ರಾಡೂನ್ : ಉತ್ತರಾಖಂಡದ ಕೇದಾರನಾಥನ ಸನ್ನಿಧಾನವು ಸಮುದ್ರಮಟ್ಟದಿಂದ ಬರೋಬ್ಬರಿ 12,000 ಅಡಿಗಳಷ್ಟು ಎತ್ತರದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರದಂದು ಕೇದಾರನಾಥನ ಸನ್ನಿಧಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಮತ್ತು ಪೂಜೆಯನ್ನು ಸಲ್ಲಿಸಿದ್ದರು.

Advertisement

ಆದರೆ ಮೋದಿ ಅವರ ಕೇದಾರನಾಥ ಕ್ಷೇತ್ರದ ಭೇಟಿ ಈ ಬಾರಿ ಇನ್ನೊಂದು ಕಾರಣಕ್ಕೆ ಸುದ್ದಿಯಾಯ್ತು. ಅದೇನೆಂದರೆ ಕೇದಾರನಾಥ ದೇವಸ್ಥಾನದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಧ್ಯಾನ ಗುಹೆಯೊಂದರಲ್ಲಿ ಪ್ರಧಾನಿ ಮೋದಿ ಅವರು ಧ್ಯಾನ ನಡೆಸಿದ್ದು ವಿಶೇಷವಾಗಿ ಇದೀಗ ದೇಶದ ಗಮನವನ್ನು ಸೆಳೆದಿದೆ.


ಮೋದಿ ಅವರು ಶನಿವಾರ ಧ್ಯಾನ ಮಾಡಿದ ಗುಹೆ ಸಾಮಾನ್ಯ ಗುಹೆ ಅಲ್ಲ. ಕಲ್ಲುಗಳನ್ನು ಕೊರೆದು ಈ ಗುಹೆಯನ್ನು ನಿರ್ಮಿಸಲಾಗಿದೆ. ಈ ಗುಹೆಗೆ ಉತ್ತಮ ಬೆಳಕಿನ ವ್ಯವಸ್ಥೆ ಇದೆ ಮಾತ್ರವಲ್ಲದೇ ಈ ಗುಹೆಗೆ ಹೊಂದಿಕೊಂಡಿರುವಂತೆ ವಾಶ್ ರೂಂ ಸೌಲಭ್ಯವೂ ಇದೆ. ಒಂದು ಕಿಟಕಿ ಹಾಗೂ ಹತ್ತು ಅಡಿ ಎತ್ತರದ ಮೇಲ್ಛಾವಣಿ ಇರುವ ಗುಹೆ ಇದಾಗಿದೆ. ಈ ಗುಹೆಯ ಮೂಲಕ ಪುರಾಣ ಪ್ರಸಿದ್ಧ ಕೇದಾರನಾಥ ದೇವಸ್ಥಾನದ ಸೊಬಗನ್ನೂ ಸವಿಯಬಹುದಾಗಿದೆ.

ಬೆಟ್ಟವನ್ನು ಕೊರೆದು ಕಲ್ಲುಗಳನ್ನು ಕಡಿದು ಹಲವು ತಿಂಗಳ ಶ್ರಮದಿಂದ ಧ್ಯಾನ ಗುಹೆಯನ್ನು ನಿರ್ಮಿಸಲಾಗಿದ್ದು. ಕಳೆದ ವರ್ಷವೇ ಈ ಗುಹೆ ಸಿದ್ಧಗೊಂಡಿತ್ತು ಮತ್ತು ನಿನ್ನೆಯವರೆಗೆ ಇದಕ್ಕೆ ಬೀಗ ಹಾಕಿಡಲಾಗಿತ್ತು. ಇನ್ನು ಮೋದಿ ಇಲ್ಲಿಗೆ ಭೇಟಿ ನೀಡುವುದಕ್ಕೆ ಸಾಕಷ್ಟು ಮುಂಚಿತವಾಗಿಯೇ ಈ ಗುಹೆಗೆ ಅಗತ್ಯವಿರುವ ಬೆಳಕು ಮತ್ತು ನೀರಿನ ಸೌಲಭ್ಯವನ್ನು ಕಲ್ಪಿಸಲಾಗಿತ್ತು ಎಂಬ ವಿವರವನ್ನು ನೆಹ್ರೂ ಇನ್ಸ್ಟಿಟ್ಯೂಟ್ ಆಫ್ ಮೌಂಟನಿಯರಿಂಗ್ ನ ಅಧಿಕಾರಿಯೊಬ್ಬರು ಖಾಸಗಿ ವೆಬ್ ಸೈಟ್ ಒಂದಕ್ಕೆ ಮಾಹಿತಿ ನೀಡಿದ್ದಾರೆ.


ಇನ್ನು ಪ್ರಧಾನಿ ಮೋದಿ ಅವರ ಭೇಟಿಯ ಹಿನ್ನಲೆಯಲ್ಲಿ ಈ ಗುಹೆಯಲ್ಲಿ ಸಿಸಿ ಕೆಮರಾಗಳ ವ್ಯವಸ್ಥೆಯನ್ನೂ ಸಹ ಮಾಡಲಾಗಿತ್ತು. ಇಲ್ಲಿಯ ಚಲನವಲನಗಳನ್ನು ಗುಹೆಯ ಹೊರಭಾಗದಲ್ಲಿದ್ದ ಶಿಬಿರವೊಂದರಲ್ಲಿ ರಚಿಸಲಾಗಿದ್ದ ನಿಯಂತ್ರಣ ಕೊಠಡಿಯಲ್ಲಿ ನಿಯಂತ್ರಿಸಲಾಗುತ್ತಿತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ.

ಒಟ್ಟಿನಲ್ಲಿ ಪ್ರಧಾನಿಯವರ ಭೇಟಿಯ ಬಳಿಕ ಮುಂಬರುವ ದಿನಗಳಲ್ಲಿ ಕೇದಾರನಾಥ ಕ್ಷೇತ್ರದಲ್ಲಿರುವ ಈ ಧ್ಯಾನ ಗುಹೆ ಪ್ರವಾಸಿಗರ ಮತ್ತು ಆಸ್ತಿಕ ಬಾಂಧವರ ನೆಚ್ಚಿನ ತಾಣವಾಗಿ ಬದಲಾಗುವುದರಲ್ಲಿ ಅನುಮಾನವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next