Advertisement

ಜಾಗತೀಕರಣದಿಂದ ಭಾಷಿಕ ಬಹುತ್ವ ನಾಶ: ಕೋಡಗುಂಟಿ

12:30 PM Mar 31, 2018 | |

ಬಸವಕಲ್ಯಾಣ: ಜಾಗತೀಕರಣದ ಪ್ರಭಾವದಿಂದ ಭಾಷಿಕ ಬಹುತ್ವ ನಾಶವಾಗುತ್ತಿದೆ. ಆಧುನಿಕ ಭಾರತದ ಮಾರುಕಟ್ಟೆಯಲ್ಲಿ ಗ್ರಾಹಕರ ಭಾಷೆ ಕಲಿಯಬೇಕೆಂದು ಬಹುರಾಷ್ಟ್ರೀಯ ಕಂಪನಿಗಳು ಒತ್ತಡ ಹೇರುತ್ತಿವೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ| ಬಸವರಾಜ ಕೋಡಗುಂಟಿ ಹೇಳಿದರು.

Advertisement

ನಗರದ ದೊಡ್ಡಪ್ಪ ಅಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ಡಾ| ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನ ಆಯೋಜಿಸಿದ್ದ 27ನೇ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ “ಬಹುಭಾಷಿಕತೆ’ ಕುರಿತು ಉಪನ್ಯಾಸ ನೀಡಿದ ಅವರು, ಯುರೋಪ, ಅಮೆರಿಕದಲ್ಲಿ ಬಹುಭಾಷೆಗಳ ಬಳಕೆಯಿಲ್ಲ. ಬಹುಭಾಷಿಕವಾಗಿ ಭಾರತ ಅತ್ಯಂತ ಶ್ರೀಮಂತವಾಗಿದೆ ಎಂದರು.

ಬಹುಭಾಷಿಕರು ಹೆಚ್ಚು ಸೂಕ್ಷ್ಮವಾಗಿರುತ್ತಾರೆ. ಹೆಚ್ಚು ಸವಾಲುಗಳನ್ನು ಎದುರಿಸುವ ಗುಣ ಹೊಂದಿರುತ್ತಾರೆ. ಭಾರತದಲ್ಲಿ ಬಹುಭಾಷಿಕತೆ ಎಂದೂ ಸಮಸ್ಯೆಯಾಗಿ ಕಾಣಲಿಲ್ಲ. ಇಲ್ಲಿ ಭಾಷೆಯ ಬಗ್ಗೆ ಮುಕ್ತತೆಯಿದೆ. ಬಹುಭಾಷಿಕತೆಯಲ್ಲಿ ಕೊಡುವ ಮತ್ತು ಕೊಳ್ಳುವ ಕ್ರಿಯೆ ಸಹಜವಾಗಿದೆ. ಸಾಮಾಜಿಕ ಸಂಬಂಧದ ಆಧಾರದ ಮೇಲೆ ಭಾಷೆಯ ಜೊತೆ ಸಾಂಸ್ಕೃತಿಕ ಕೊಡುಕೊಳ್ಳುವಿಕೆ ಸಾಧ್ಯವಾಗುತ್ತದೆ ಎಂದರು. 

ಭಾಷೆ ಅತ್ಯಂತ ಸಂಕೀರ್ಣವಾದದ್ದು. ಭಾಷೆಯ ರಚನೆ ಮತ್ತು ಭಾಷೆಯ ಕಾರ್ಯ ಇವೆರಡೂ ಭಾಷೆಯಲ್ಲಿ ಮುಖ್ಯವಾದವು. ಭಾಷೆಯ ರಚನಾ ವಿಧಾನ ಅರವತ್ತು ಸಾವಿರ ವರ್ಷಗಳ ಹಿಂದೆ ನಡೆದಿತ್ತು. ಲಿಪಿ ಕೇವಲ ಆರು ಸಾವಿರ ವರ್ಷಗಳ ಚರಿತ್ರೆ ಹೊಂದಿದೆ. ವೇದಗಳ ಕಾರಣದಿಂದ ಸಂಸ್ಕೃತ ಭಾಷೆ ಸಾಮಾಜಿಕ ಪ್ರತಿಷ್ಠೆ ಪಡೆಯಿತು. ವಸಾಹತುಶಾಹಿ ಮತ್ತು ಜಾಗತಿಕರಣದಿಂದಾಗಿ ಇಂದು ಇಂಗ್ಲಿಷ್‌ ಸಾಮಾಜಿಕ ಪ್ರತಿಷ್ಠೆಯ ಭಾಷೆಯಾಗಿದೆ. ಆದರೆ ಮಾತೃಭಾಷೆಯಿಂದ ಮಾತ್ರ ಸಾಮಾಜಿಕ ಮತ್ತು ಸಾಂಸ್ಕೃತಿಕ ಗ್ರಹಿಕೆ ಪ್ರಾಮಾಣಿಕವಾಗಿ ಸಾಧ್ಯವಾಗುತ್ತದೆ. ನಮ್ಮ ಭಾಷೆ ನಮ್ಮ ಭಾವಲೋಕ ಮತ್ತು ಬದುಕಿಗೆ ಅಂಟಿಕೊಂಡೆ ಇರುತ್ತದೆ ಎಂದರು. ಉತ್ತರ ಕರ್ನಾಟಕದ ಭಾಷೆ ಒರಟಾಗಿದೆ ಎಂದು ಬೆಂಗಳೂರಿಗರು ಹೇಳುತ್ತಾರೆ. ಆದರೆ ಅಲ್ಲಮ, ಬಸವಣ್ಣ, ರಾಘವೇಂದ್ರ, ಶ್ರೀವಿಜಯ, ವಿಜ್ಞಾನೇಶ್ವರ, ಬಂದೆನವಾಜ ಮಾತನಾಡಿದ್ದು ಇದೆ ಭಾಷೆ. ಒರಟುತನ ಮನೋಭಾವನೆಯಲ್ಲಿರುತ್ತದೆ ಹೊರತು ಭಾಷೆಯಲಿಲ್ಲ. ಕನ್ನಡದ ಸಾಂಸ್ಕೃತಿಕ ಅಸ್ಮಿತೆಯನ್ನು ಕಟ್ಟಿದವರು ಮಳಖೇಡದವರು ಮತ್ತು ವಚನಕಾರರು. ಅದು ಈ ಭಾಗದ ಭಾಷೆಯಲ್ಲಿ ಎಂದರು. 

ಭಾರತದಲ್ಲಿ ದ್ರಾವಿಡ ಮತ್ತು ಇಂಡೋ ಆರ್ಯನ್‌ ಭಾಷೆಗಳು ಕೂಡಿ ಬದುಕುತ್ತವೆ. ಯುದ್ಧ, ಕಾದಾಟ, ಹೊಡೆದಾಟಗಳು ಜನಸಾಮಾನ್ಯರಿಗೆ ಬೇಕಾಗಿಲ್ಲ. ಜನಸಾಮಾನ್ಯರು ಕೂಡಿ ಬದುಕುವುದು ಭಾಷೆಗಳ ಸಮಾನ ಗುಣಗಳಿಂದ. ಅನೇಕ ಭಾಷಿಕರು ಭಾವನಾತ್ಮಕವಾಗಿ ಜೊತೆ ಜೊತೆಗೆ ಬದುಕಿದ್ದು ಇದೇ ಕಾರಣದಿಂದ ಎಂದರು.

Advertisement

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಜರುಗಿತು. ಉಪನ್ಯಾಸಕ ಭೀಮಾಶಂಕರ ಬಿರಾದಾರ, ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ರಾಚಯ್ಯ ಮಠಪತಿ ಮಾತನಾಡಿದರು. ಸಿಯುಕೆ ಅಧ್ಯಾಪಕ ಡಾ| ಉಪೇಂದ್ರ ಮಾಲೋಥ್‌, ಅನಿರ್ಬನ್‌ ಸರ್ಕಾರ್‌, ವಿಠೊಬಾ ದೋಣ್ಣೆಗೌಡರ್‌, ಚಂದ್ರಕಾಂತ ಅಕ್ಕಣ್ಣ, ನೀಲೇಶ ಟೋಂಪೆ, ಡಾ| ರೂಪೇಶ ಭೋಸ್ಲೆ, ಡಾ| ಸಂಜೀವಕುಮಾರ ಪಂಗರಗೆ, ಸಂಗೀತಾ ಮಠಪತಿ, ಅರುಣಾ ಕಾಡಾದಿ, ಅಶೋಕ ಕಾವಲ್‌ ಉಪಸ್ಥಿತರಿದ್ದರು. ಬಸವರಾಜ ಶೇರಿ ಸ್ವಾಗತಿಸಿದರು. ಬಸವರಾಜ ಗೊನಾಕಿ ನಿರೂಪಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next