ಹುಣಸೂರು: ಕಾಡಂಚಿನಲ್ಲಿ ಅರಣ್ಯ ಇಲಾಖೆ ರೆಲ್ವೆಕಂಬಿ ತಡೆಗೋಡೆ ನಿರ್ಮಿಸಿದ್ದಾರೆಂಬ ನೆಮ್ಮದಿಯಲ್ಲಿದ್ದ ರೈತರ ಜಮೀನುಗಳಿಗೆ ಐದು ಕಾಡಾನೆಗಳು ದಾಳಿ ಇಟ್ಟು ಅಪಾರ ಪ್ರಮಾಣದ ಬೆಳೆ ನಾಶಪಡಿಸಿರುವ ಘಟನೆ ತಾಲೂಕಿನ ಗುರುಪುರಬಳಿ ನಡೆದಿದೆ.
ಐದು ಆನೆಗಳ ಹಿಂಡು ಸಂಜೆಯಾಯಿತೆಂದರೆ ಗುರುಪುರ, ಸರ್ವೆ.ನಂ.25, ಹುಣಸೆಕಟ್ಟೆ ಹಳ್ಳ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಜಮೀನುಗಳಲ್ಲಿ ಬೆಳೆ ತಿಂದು-ತುಳಿದು ನಾಶಪಡಿಸುತ್ತಿವೆ. ಸರ್ವೆ ನಂ 25ರ ನಾಗಶೆಟ್ಟಿ, ಚಿಕ್ಕೇಗೌಡ, ಮೆಹಬೂಬ, ದೇವಮ್ಮ, ಚಿಕ್ಕಶೆಟ್ಟಿ, ಪ್ರಕಾಶ, ಹುಣಸೆಕಟ್ಟೆ ಹಳ್ಳದ ರಾಜಣ್ಣ,
ಮಾಜಿಗುರುಪುರದ ಸಣ್ಣಶೆಟ್ಟಿ ಮತ್ತಿತರ ರೈತರ ಜಮೀನುಗಳಿಗೆ ರಾತ್ರಿ ವೇಳೆ ಒಮ್ಮೆಲೆ ನುಗ್ಗಿ ಭತ್ತದ ಬೆಳೆ, ರಾಗಿ, ಜೋಳ, ತೆಂಗಿನ ಮರಗಳ ಸುಳಿ ತಿಂದು ಹಾಕಿವೆ. ಇಷ್ಟೆಲ್ಲ ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ನಾಶಪಡಿಸಿದ್ದರೂ ಆನೆ ಹಾವಳಿ ತಡೆಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂಬುದು ರೈತರ ಆಕ್ರೋಶವಾಗಿದ್ದು, ಇದೀಗ ಭತ್ತದ ಬೆಳೆ ಕೊಯ್ಲಿಗೆ ಬಂದಿದ್ದು,
ಭತ್ತ ಮತ್ತಿತರ ಬೆಳೆಗಳ ರಕ್ಷಣೆಗೆ ಇನ್ನಾದರೂ ಅರಣ್ಯ ಇಲಾಖೆ ಸಬೂಬು ಹೇಳದೆ ಕಾವಲು ಕಾದು ಕಾಡಿನಿಂದ ಕಾಡಾನೆಗಳು ಹೊರಬರದಂತೆ ಕಟ್ಟು ನಿಟ್ಟಿನ ಕ್ರಮ ವಹಿಸಬೇಕೆಂದು ಆಗ್ರಹಿಸಿ, ಕಾಡಾನೆ ಹಾವಳಿ ಮುಂದುವರೆದರೆ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ನಾಗರಹೊಳೆಯ ವೀರನಹೊಸಹಳ್ಳಿ ವಲಯದಲ್ಲಿ ರೈಲುಕಂಬಿ ತಡೆಗೋಡೆ ನಿರ್ಮಿಸಿದ ನಂತರ ಸಾಕಷ್ಟು ಪ್ರಮಾಣದಲ್ಲಿ ಆನೆಗಳ ಹಾವಳಿ ತಪ್ಪಿತ್ತು, ಆದರೆ ಎಚ್.ಡಿ.ಕೋಟೆ ಭಾಗದಲ್ಲಿ ಇನ್ನೂ ಬೇಲಿ ನಿರ್ಮಿಸದೆ ಆನೆಗಳು ದಾವಿಸುತ್ತಿವೆ ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆಂದು ರೈತರು ಆರೋಪಿಸಿದ್ದಾರೆ.