ಬೀದರ: ರಾಜ್ಯದ ವಿವಿಧೆಡೆ ಚರ್ಚ್ ಹಾಗೂ ಯೇಸು ಪ್ರತಿಮೆ ಧ್ವಂಸಗೊಳಿಸಿರುವುದನ್ನು ಖಂಡಿಸಿ ನಗರದಲ್ಲಿ ಗುರುವಾರ ಕರ್ನಾಟಕ ಕ್ರೈಸ್ತರ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ಮೂಲಕ ತೆರಳಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರ ಸಲ್ಲಿಸಿದರು. ಕೆಂಗೇರಿ ಮತ್ತು ಗೋಕುಂಟೆ ಗ್ರಾಮದಲ್ಲಿ ಚರ್ಚ್, ಯೇಸು ಪ್ರತಿಮೆ ಧ್ವಂಸ ಹೀನ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲವು ಸಮಾಜ ಘಾತುಕ ವ್ಯಕ್ತಿ ಹಾಗೂ ಸಂಘಟನೆಗಳು ಬಡ ಕ್ರೈಸ್ತರು, ಪ್ರಾರ್ಥನೆ ಮಂದಿರಗಳ ಮೇಲೆ ದಾಳಿ ಮಾಡುತ್ತ ತೊಂದರೆ ಕೊಡುತ್ತಿರುವುದು ಅಪರಾಧ. ಈ ದಾಳಿಗಳು ಹಲವು ವರ್ಷಗಳಿಂದ ನಡೆಯುತ್ತಿದ್ದರೂ ಸರ್ಕಾರ, ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದಾರೆ. ಕೆಲ ಸಮಾಜ ಘಾತುಕ ವ್ಯಕ್ತಿ ಹಾಗೂ ಸಂಘಟನೆಗಳು ಇದಕ್ಕೆ ಒತ್ತಾಯದ ಮತಾಂತರ ಬಣ್ಣ ಹಚ್ಚಿ ಅಮಾಯಕ ದೈವ ಸೇವಕರು ಹಾಗೂ ಕ್ರೈಸ್ತ ದೇವಾಲಯಗಳ ಮೇಲೆ ಹಲ್ಲೆ ಹಾಗೂ ದಾಳಿ ಮಾಡುತ್ತಿದ್ದಾರೆ ಎಂದು ದೂರಲಾಗಿದೆ.
ರಾಜ್ಯದಲ್ಲಿ ಅನಧಿಕೃತ ದೇವಾಲಯಗಳೆಂದು ಅನೇಕ ಚರ್ಚ್ ನೆಲಸಮ ಮಾಡಲಾಗಿದೆ ಮತ್ತು ಆಸ್ತಿ ಮೊಟಕುಗೊಳಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಬೆಂಗಳೂರಿನ ಕೆಂಗೇರಿಯ ಕ್ರೈಸ್ತ ದೇವಾಲಯಗಳ ಹಕ್ಕುಪತ್ರ ಇದ್ದರೂ ಯಾವುದೇ ನೋಟಿಸ್ ಹಾಗೂ ಸೂಚನೆ ನೀಡದೇ ಅಧಿಕಾರಿಗಳು, ಪೊಲೀಸರು ಸೇರಿ ದೇವಾಲಯಗಳು ನೆಲಸಮಗೊಳಿಸಿದ್ದಾರೆ. ಗೋಕುಂಟೆ ಗ್ರಾಮದಲ್ಲಿ ರಕ್ಷಣಾಗಿರಿಯಲ್ಲಿ ಕ್ರೈಸ್ತರ ಪ್ರತಿಮೆ ಸರ್ಕಾರದಿಂದ ಧ್ವಂಸಗೊಳಿಸಿರುವುದು ಖಂಡನೀಯ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಬೇಕು. ಅಲ್ಪಸಂಖ್ಯಾತರ ಕ್ರೈಸ್ತರ ಹಾಗೂ ದೇವಾಲಯಗಳಿಗೆ ರಕ್ಷಣೆ ನೀಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ವೇದಿಕೆ ರಾಜ್ಯಾಧ್ಯಕ್ಷ ಭಾಸ್ಕರಬಾಬು ಪಾತರಪಳ್ಳಿ, ಜಿಲ್ಲಾಧ್ಯಕ್ಷ ರಾಜೇಶ ಜ್ಯೋತಿ, ವಿಭಾಗ ಉಸ್ತುವಾರಿ ಪ್ರಕಾಶ ಕೋಟೆ, ಸ್ಯಾಮಸನ್ ಹಿಪ್ಪಳಗಾಂವ, ಸುಧಾಕರ ಢೋಣೆ, ಸುನೀಲ ಹಿರೇಮನಿ, ಮಾಣಿಕ ಕೌಠಾ, ರೇ. ರಾಜಕುಮಾರ ಬರ್ಮಾ, ಸಾಲೋಮನ ಟಿ, ದತ್ತು ಸೋನಿ, ಲೋಕೇಶ ಕನಕ, ಸುಂದರರಾಜ ಫಿರಂಗೆ, ದಶರಥ ಮಿಸೆ ಇತರರಿದ್ದರು.