ಬೆಂಗಳೂರು: ಕಾಂಗ್ರೆಸ್ ನಾಯಕರ ಮೊದಲ ಟಾರ್ಗೆಟ್ ಜೆಡಿಎಸ್. ಇದು ಅವರ ಮೊದಲ ಅಜೆಂಡಾ ಆಗಿದೆ. ಬಿಜೆಪಿಗಿಂತ ನಮ್ಮ ಪಕ್ಷದ ಮೇಲೆಯೇ ಅವರಿಗೆ ಕೋಪ, ಅಸೂಯೆ ಜಾಸ್ತಿ. ನನಗೆ ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಇದೆ ಎಂದು ಇಲ್ಲಸಲ್ಲದ ಅಪಪ್ರಚಾರ ನಡೆಯುತ್ತಿದೆ. ಈಗಿನ ಬಿಜೆಪಿ ಅಭ್ಯರ್ಥಿಯನ್ನು ಬೆಳೆಸಿದವರೇ ಸೋಲಿಸಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಗ್ಗೆರೆಯಲ್ಲಿ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು 2004ರ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರಲಿಲ್ಲ. ಆಗ ಅನಿವಾರ್ಯವಾಗಿ ಕಾಂಗ್ರೆಸ್ ಜೊತೆ ಸರ್ಕಾರ ರಚನೆ ಮಾಡಬೇಕಾಯಿತು. ಆದರೆ ಆರು ತಿಂಗಳು ಸಂಪುಟ ವಿಸ್ತರಣೆ ಮಾಡಲೇ ಇಲ್ಲ. ಆದರೆ, ಅಂದೇ ಕಾಂಗ್ರೆಸ್ ನವರು ನಮ್ಮ ಪಕ್ಷವನ್ನು ಮುಗಿಸಲು ಆರಂಭಿಸಿದ್ದರು. ಅದೇ ಕಾರಣಕ್ಕೆ ಕಾಂಗ್ರೆಸ್ ಜೊತೆ ಸರ್ಕಾರ ರಚನೆಗೆ ನನಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ ಎಂದರು.
ಬಿಜೆಪಿ ಹಾಗೂ ಬಿಜೆಪಿ ಅಭ್ಯರ್ಥಿ ಬಗ್ಗೆ ಕುಮಾರಸ್ವಾಮಿ ಸಾಫ್ಟ್‌ಕಾರ್ನರ್ ಹೊಂದಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಜನರ ಹಣ ಲೂಟಿ ಹೊಡೆಯೋರ ಬಗ್ಗೆ ನಾನು ಮಾತಾಡಲ್ಲ. 250 ಕೋಟಿ ರೂ. ಕಳ್ಳ ಬಿಲ್ ಮಾಡಿ ಹಣ ಗುಳುಂ ಮಾಡಿದ್ದಾರೆ. ಬೆವರು ಸುರಿಸಿ ದುಡಿದ ಹಣದಲ್ಲಿ ನಮ್ಮ ಅಭ್ಯರ್ಥಿ ಕೃಷ್ಣಮೂರ್ತಿ ಕೋವಿಡ್ ಸಮಯದಲ್ಲಿ ಜನಕ್ಕೆ ಸಹಾಯ ಮಾಡಿದ್ದಾರೆ. ಆದರೆ, ಜನರ ಪಾಪದ ಹಣದಲ್ಲಿ ಬಿಜೆಪಿ ಅಭ್ಯರ್ಥಿ ಫುಡ್‌ಕಿಟ್ ನೀಡಿದ್ದಾರೆ ಎಂದು ಮುನಿರತ್ನ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಶಿರಾ, ಆರ್ ಆರ್ ನಗರ ಉಪಚುನಾವಣೆಯಲ್ಲಿ ನಮ್ಮದೇ ಗೆಲುವು: ಬಿ ಎಸ್ ವೈ ವಿಶ್ವಾಸ
ನನ್ನ ಸರಕಾರವನ್ನು ಯಾರೂ 10 ಪರ್ಸೆಂಟ್ ಸರಕಾರ ಎಂದು ಯಾರೂ ಹೇಳಲಿಲ್ಲ. ನಾನು ಅಧಿಕಾರದಲ್ಲಿದ್ದಾಗ ಜನರಿಗೆ ಶಾಶ್ವತ ಕಾರ್ಯಕ್ರಮಗಳನ್ನು ನೀಡಿದ್ದೇನೆ. ಪ್ರಧಾನಿ ಮೋದಿ ನಮ್ಮ ಮುಖ್ಯಮಂತ್ರಿ ಜೊತೆ ಮಾತನಾಡಲು ಸಮಯ ನೀಡುತ್ತಿಲ್ಲ. ಈ ರೀತಿ ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ಅವಮಾನ ಮಾಡುತ್ತಿವೆ. ಕನ್ನಡಿಗರ ಸ್ವಾಭಿಮಾನ, ಗೌರವ ಉಳಿಸಲು ಈ ಚುನಾವಣೆ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಉತ್ತರ ನೀಡಿ ಎಂದು ತಿಳಿಸಿದರು.
ಆರು ವರ್ಷದಲ್ಲಿ ಪ್ರಧಾನಿ ಮೋದಿ ಅವರಿಂದ ದೇಶ ಚೀನಾ ವಿರುದ್ಧ ಸ್ಪರ್ಧೆ ಮಾಡುವುದು ಇರಲಿ, ಬಾಂಗ್ಲಾದೇಶದ ಜೊತೆ ಸ್ಪರ್ಧೆ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ದಿನಕ್ಕೆ ಮೂರು ನಾಲ್ಕು ಡ್ರೆಸ್ ಹಾಕಿಕೊಂಡು ಚೆನ್ನಾಗಿ ಕಾಣುವುದೇ ಮೋದಿ ಅವರ ಸಾಧನೆಯಾಗಿದೆ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ, ಇಲ್ಲಿ ಕೃಷ್ಣಮೂರ್ತಿ ಅಭ್ಯರ್ಥಿಯಲ್ಲ, ಕಾರ್ಯಕರ್ತರೇ ಅಭ್ಯರ್ಥಿಗಳು ಎಂದು ತಿಳಿದು ಜೆಡಿಎಸ್ ಸಮಾಧಿ ಮಾಡುತ್ತೇವೆ ಎಂದವರಿಗೆ ಉತ್ತರ ನೀಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.