Advertisement

ಕಾಡು ಹಂದಿಗಳ ಹಾವಳಿಯಿಂದ ವ್ಯಾಪಕ ಕೃಷಿ ನಾಶ:ಬೆಳೆಗಾರರಲ್ಲಿ ಹೆಚ್ಚಿದ ಆತಂಕ

11:34 PM May 01, 2019 | sudhir |

ಕಾಸರಗೋಡು: ಗಡಿಪ್ರದೇಶಗಳಲ್ಲಿ ಕಾಡು ಹಂದಿ ಹಾವಳಿ ವಿಪರೀತಗೊಂಡಿದೆ. ಕೃಷಿ ತೋಟಗಳಿಗೆ ಹಿಂಡು ಹಿಂಡಾಗಿ ಆಗಮಿಸುವ ಕಾಡು ಹಂದಿಗಳು ವ್ಯಾಪಕ ಕೃಷಿ ನಾಶ ಮಾಡುತ್ತಿವೆ.

Advertisement

ಕಾಡಾನೆ, ಕಾಡು ಕೋಣಗಳ ಹಾವಳಿಯಿಂದ ತತ್ತರಿಸಿರುವ ಕೃಷಿಕರಿಗೆ ಕಾಡುಹಂದಿ ಹಾವಳಿ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಆದೂರಿನಲ್ಲಿ ಅಡಿಕೆ ತೋಟದಲ್ಲಿರುವ ಭಾರೀ ಪ್ರಮಾಣದ ಬಾಳೆ ಕೃಷಿಯನ್ನು ಕಾಡು ಹಂದಿಗಳು ನಾಶಗೊಳಿಸಿವೆ.

ಕೂಲಿ ಕಾರ್ಮಿಕ ಮಹಿಳೆಗಾಯ
ಕೊಟ್ಯಾಡಿ, ಪಾಂಡಿ, ದೇಲಂಪಾಡಿ, ಪೈಕ, ಮಾಡತ್ತಡ್ಕ, ಸ್ವರ್ಗ, ವಾಣೀನಗರ, ಕಿನ್ನಿಂಗಾರು ಮೊದಲಾದೆಡೆಗಳಲ್ಲಿ ಕಾಡು ಹಂದಿಗಳು ಕೃಷಿ ನಾಶ ಗೊಳಿಸಿದೆ. ಮಾಡತ್ತಡ್ಕದಲ್ಲಿ ಕೂಲಿ ಕಾರ್ಮಿಕ ಮಹಿಳೆಯೊಬ್ಬರು ಕಾಡು ಹಂದಿಗಳ ಆಕ್ರಮಣದಿಂದ ಗಾಯಗೊಂಡ ಘಟನೆ ನಡೆದಿದೆ. ಅಡೂರು, ನೀರ್ಚಾಲು, ಬೆಳ್ಳೂರು ಮೊದಲಾದೆಡೆಗಳಲ್ಲೂ ಇದೇ ರೀತಿ ಆಕ್ರಮಣ ನಡೆದಿದೆ. ತಿಂಗಳ ಹಿಂದೆ ಎಡನೀರಿನಲ್ಲಿ ಕಾಡು ಹಂದಿ ಆಕ್ರಮಣದಿಂದ ಗಾಯಗೊಂಡ ಮಧ್ಯ ವಯಸ್ಕನೋರ್ವ ತಿಂಗಳ ಕಾಲ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ವರ್ಷಗಳ ಹಿಂದೆಯಷ್ಟೇ ಕುಂಬಾxಜೆಯಲ್ಲಿ ಹಂದಿ ಆಕ್ರಮಣದಿಂದ ಮಹಿಳೆಯೊಬ್ಬರು ಸಾವಿಗೀಡಾಗಿದ್ದರು.

ಹಲವೆಡೆಗಳಲ್ಲಿ ಮನಯಂಗಳದಲ್ಲಿ, ದಾರಿಯಲ್ಲಿ ಹಂದಿಗಳು ಕಾಣಸಿಗುತ್ತವೆ. ಅಡೂರು, ಕಾರಡ್ಕ ಪ್ರದೇಶಗಳಲ್ಲಿ ಈ ಹಿಂದೆ ಕಾಡಾನೆ, ಕಾಡುಕೋಣ ಹಾವಳಿ ವ್ಯಾಪಕವಾಗಿತ್ತು. ಇದೀಗ ಹಂದಿ ಹಾವಳಿಯೂ ಸೇರಿದೆ.

Advertisement

ದೇಲಂಪಾಡಿಯ ಕೃಷಿಕರು ಈ ಬಗ್ಗೆ ಜಿಲ್ಲಾಧಿಕಾರಿಗೂ, ಆರೋಗ್ಯ ಅಧಿಕಾರಿಗೂ ಮನವಿ ಸಲ್ಲಿಸಿದ್ದಾರೆ. ಆದರೆ ಯಾವುದೇ ಕ್ರಮ ಉಂಟಾಗಿಲ್ಲವೆಂದು ಸ್ಥಳೀಯರು ಹೇಳುತ್ತಿದ್ದಾರೆ.

ಅಡೂರು ಪ್ರದೇಶದಲ್ಲಿ ಈ ಹಿಂದೆ ಕಾಡಾನೆಗಳು ಹಲವು ಕೃಷಿ ತೋಟವನ್ನು ನಾಶಗೈದಿತ್ತು. ಆದರೂ ನಷ್ಟ ಪರಿಹಾರ ಲಭಿಸಿಲ್ಲವೆಂದೂ ಕೃಷಿಕರು ಆರೋಪಿಸಿದ್ದಾರೆ. ಇದೀಗ ಹಂದಿ ಹಾವಳಿಯಿಂದ ಕೃಷಿ ವ್ಯಾಪಕವಾಗಿ ನಾಶಗೊಂಡಿದ್ದರೂ, ಯಾವುದೇ ನಷ್ಟ ಪರಿಹಾರ ಲಭಿಸಿಲ್ಲ.

ಕ್ರಮ ಕೈಗೊಳ್ಳಲು ಒತ್ತಾಯ
ಅರಣ್ಯಾಧಿಕಾರಿಗಳು ಈ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ವರದಿ ನೀಡುತ್ತಿಲ್ಲವೆಂದು ಕೃಷಿಕರು ಆರೋಪಿಸಿದ್ದಾರೆ. ಕಾಡಾನೆ, ಕಾಡುಕೋಣಗಳ ಜತೆ ಇದೀಗ ಕಾಡು ಹಂದಿಗಳ ಉಪಟಳ ವ್ಯಾಪಕಗೊಂಡಿದ್ದು, ಇದರ ವಿರುದ್ಧ ಸರಕಾರ ಎಚ್ಚೆತ್ತು ಕೃಷಿ ವಲಯವನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕಾಗಿ ಕೃಷಿಕರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next