ಹುಬ್ಬಳ್ಳಿ: ನಾಡಿನಲ್ಲಿ ಪ್ರಖ್ಯಾತಿ ಹೊಂದಿದ್ದ ಮಠ ಇಂದು ಅವನತಿ ಹಾದಿ ಹಿಡಿದಿದ್ದು, ಅದನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಮುಂದಾಗಬೇಕೆಂದು ಬಾಲೆಹೊಸೂರ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಬಮ್ಮಾಪುರ ಓಣಿ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ರವಿವಾರ ಭಕ್ತರ ಸಭೆ ನಡೆಸಿ ಮಾತನಾಡಿದ ಅವರು, ಮೂರುಸಾವಿರ ಮಠದ ಆಸ್ತಿ ಉಳಿಸುವುದಕ್ಕಾಗಿ ಭಕ್ತರನ್ನು ಹೇಗೆ ಕರೆಯಬೇಕು ಎನ್ನುವುದು ತಿಳಿಯುತ್ತಿಲ್ಲ. ಮಠದ ಅವನತಿ ನೋಡಿ ಸುಮ್ಮನೆ ಕುಳಿತುಕೊಳ್ಳುವುದು ಸಾಧ್ಯವಿಲ್ಲ ಎಂದರು.
ಹಿಂದಿನ ಜಗದ್ಗುರುಗಳು ಮಠದಿಂದ ಸಣ್ಣ ಕಾರಿನಲ್ಲಿ ಬಂದರು. ಹುಬ್ಬಳ್ಳಿ ಮೂರುಸಾವಿರ ಮಠದಿಂದ ಹಾನಗಲ್ಲ ಕುಮಾರಸ್ವಾಮಿ ಮಠದ ವರೆಗೂ ಪಾದಯಾತ್ರೆ ಮಾಡಿ ದೊಡ್ಡ ವಾಹನ ಖರೀದಿಸಿ ಕೊಟ್ಟವರು ನಾವು. ಈ ಹಿಂದೆ ಮಠದ ವ್ಯಾಜ್ಯ ನಡೆದಾಗ ಇಂದಿನ ಜಗದ್ಗುರುಗಳು ಕರೆದು ಅದರ ಜವಾಬ್ದಾರಿ ತೆಗೆದುಕೊಂಡು ಮುಂದುವರಿಯಬೇಕೆಂದು ಹೇಳಿದಾಗ ಅದನ್ನು ಮುಂದುವರಿಸಿ ನ್ಯಾಯಾಲಯಕ್ಕೆ ಅಲೆದಾಡಿ ಅದನ್ನು ಮಾಡಿಕೊಟ್ಟವರು ನಾವು. ಆದರೆ ಇಂದು ಮಠದ ಆಸ್ತಿ ಮಾರಾಟ ಮಾಡಿರುವುದು ಸರಿಯಲ್ಲ. ಭಕ್ತರು ದಾನ ನೀಡಿದ ಭೂಮಿಯನ್ನು ಮಠದ ಶ್ರೇಯೋಭಿವೃದ್ಧಿಗೆ ಬಳಸಬೇಕೆ ವಿನಃ ಮಾರಾಟ ಮಾಡುವುದಲ್ಲ ಎಂದು ಹೇಳಿದರು.
ಉನ್ನತ ಮಟ್ಟದ ಕಮಿಟಿ ರಚನೆಯಾದ ನಂತರ 11 ವರ್ಷದ ಅವ ಧಿಯಲ್ಲಿ ಮಠವನ್ನು ಹಾಳು ಮಾಡಿದ್ದಾರೆ. ಸರಕಾರದಲ್ಲಿರುವವರು ಮಠದ ಆಸ್ತಿಯನ್ನು ಮಾರಾಟ ಮಾಡಿಸಿದ್ದಾರೆ. ಕೇಂದ್ರ-ರಾಜ್ಯ ಮಂತ್ರಿಗಳು ಮಠದ ಅಸ್ತಿತ್ವದ ಬಗ್ಗೆ ಮಾತನಾಡುತ್ತಾರೆ. ಮಠದ ಅಭಿವೃದ್ಧಿಗೆ ಏನು ಬೇಕು ಎಂದು ಒಮ್ಮೆಯೂ ಕೇಳದವರು ಕೆಎಲ್‌ಇ ಸಂಸ್ಥೆಗೆ ಏನು ಬೇಕಾದರೂ ಮಾಡುತ್ತೇವೆ ಎಂದು ಹೇಳುತ್ತಾರೆ, ನಾಚಿಕೆಯಾಗಬೇಕು ಎಂದು ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಕೇಂದ್ರ ಸರ್ಕಾರಕ್ಕೆ ಕಣ್ಣು ಇಲ್ಲ ಕಿವಿಯಿಲ್ಲ: ಬಿ.ಆರ್.ಪಾಟೀಲ್ ವಾಗ್ದಾಳಿ
ಬಸವರಾಜ ಆಂಗಡಿ, ನಾಶಿ, ವಿನಾಯಕ ಹೊಸಕೇರಿ, ಮಂಜುನಾಥ ಎಂಟ್ರವಿ ಮಾತನಾಡಿದರು. ವಿವಿಧ ಮುಖಂಡರಿದ್ದರು. ರಾಜು ಓದುನವರ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕರ್ಜುನ ಶಿರಗುಪ್ಪಿ ನಿರೂಪಿಸಿದರು