Advertisement

ಕಾಡಾನೆ ಭಯಕ್ಕೆ ಕೆರೆ ನಾಶ!

10:21 AM Mar 17, 2020 | mahesh |

ಜಮೀನಿಗೆ ಕಾಡಾನೆ ನುಗ್ಗುತ್ತವೆಂದು ಕೃಷಿಕರೊಬ್ಬರು ಆಳದ ಕಂದಕ ಹೊಡೆಸಿದರು. ಆನೆ ತಡೆಯುವುದೇನೋ ಕೃಷಿಕರ ಅನಿವಾರ್ಯತೆ, ಆದರೆ ಕಂದಕದಿಂದ ಕೆರೆ ಕೊಲ್ಲುವ ಕೆಲಸ ನಡೆಯಿತು. ಸೂಕ್ಷ್ಮ ಕೆರೆ ಪರಿಸರದಲ್ಲಿ ಏನು ಮಾಡಬಾರದೆಂದು ಸರಿಯಾಗಿ ತಿಳಿದಿರಬೇಕು.

Advertisement

ಚಾಮರಾಜನಗರದ ಯಳಂದೂರಿನಿಂದ ಗೌಡಳ್ಳಿ ಹೊಸಕೆರೆ 13 ಕಿ.ಮೀ. ದೂರ. ಮಧ್ಯಾಹ್ನ 3 ಗಂಟೆಯಿಂದ ಪ್ರತಿನಿತ್ಯ ಈ ಕೆರೆ ಬಿಳಿಗಿರಿ ರಂಗನ ಬೆಟ್ಟದ ವನ್ಯಜೀವಿಗಳನ್ನು ಕರೆಯುತ್ತದೆ. ಜಿಂಕೆ, ಕಾಡೆಮ್ಮೆ (ಕಾಟಿ), ಕರಡಿ, ಆನೆ, ಚಿರತೆ, ಹುಲಿಗಳು ನೀರು ಕುಡಿಯುವುದನ್ನು, ಜಲಪಕ್ಷಿಗಳ ಮೇಳವನ್ನೂ ಇಲ್ಲಿ ಕಾಣಬಹುದು. ಬೆಟ್ಟದ ಸಾಲಿನ ಬುಡದ ಆಯಕಟ್ಟಿನಲ್ಲಿ ನಿರ್ಮಿಸಿದ ಅತ್ಯಂತ ಸುಂದರ ಕೆರೆಯಿದು.

ಕ್ರಿ.ಶ. 1983-84ರಲ್ಲಿ ನಿರ್ಮಿಸಿದ ಗೌಡಳ್ಳಿ ಹೊಸಕೆರೆ 60.70 ಹೆಕ್ಟೇರ್‌ ವಿಸ್ತೀರ್ಣವಿದೆ. 14 ಮೀಟರ್‌ ಎತ್ತರ 731 ಮೀಟರ್‌ ಉದ್ದದ ಕೆರೆ ದಂಡೆಗೆ ವ್ಯವಸ್ಥಿತವಾಗಿ ಕಲ್ಲು ಕಟ್ಟಲಾಗಿದೆ. ತೂಬಿನ ಸ್ವರೂಪವೂ ಕಲಾತ್ಮಕವಾಗಿದೆ. ಬೆಟ್ಟದ ವಿಶಾಲ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆ ನೀರು, ಹೇಗೆ ಕೆರೆಯತ್ತ ಹರಿದು ಬರುತ್ತದೆಂದು ದಂಡೆಯಿಂದ ವೀಕ್ಷಿಸಬಹುದು. ಕೃಷಿ ನೀರಾವರಿಗೆ ಕೆರೆ ನಿರ್ಮಿಸಿದ್ದರೂ ಮುಖ್ಯ ವಾರಸುದಾರರು ವನ್ಯಜೀವಿಗಳೇ!

ಕಾಡಾನೆ ರಕ್ಷಣೆಗೆ ಕಂದಕ
ಕೆರೆ ವೀಕ್ಷಣೆಗೆ ಹೋಗಿದ್ದಾಗ ಹಳ್ಳಿಗ ತಿಮ್ಮರಾಜು, ಪುರಾಣಿ ಬೆಟ್ಟದ ಮಳೆ ನೀರು ಗೌಡಳ್ಳಿ ಕೆರೆಯನ್ನು ಪ್ರತಿ ವರ್ಷ ತುಂಬುತ್ತಿರುವ ವಿಶೇಷ ವಿವರಿಸಿದರು. ಬೆಟ್ಟದ ಸೊಬಗು ನೋಡಿ ಕೆರೆ ಕಟ್ಟಿದ ಕೌಶಲ್ಯ ಗಮನಿಸುತ್ತಾ ದಂಡೆಯ ತಗ್ಗಿನ ಕೃಷಿ ಭೂಮಿ ನೋಡಿದರೆ ಆಘಾತವಾಯಿತು! ಕೆರೆಯ ಪಕ್ಕದ ಸುಮಾರು 40 ಎಕರೆ ಭೂಮಿ ಖರೀದಿಸಿದ ವ್ಯಕ್ತಿಯೊಬ್ಬರು ದಂಡೆಯ ಪಕ್ಕದಲ್ಲಿ ಭರ್ಜರಿಯಾಗಿ ಗುಂಡಿ ತೋಡಿದ್ದಾರೆ. ಕಾಡಾನೆಗಳು ತೋಟಕ್ಕೆ ನುಗ್ಗುತ್ತಿರುವುದನ್ನು ತಡೆಯಲು 2 ಮೀಟರ್‌ ಅಗಲ ಹಾಗೂ 3 ಮೀಟರ್‌ ಆಳದ ಕಂದಕವನ್ನು ತೆಗೆದಿದ್ದಾರೆ. ಕೆರೆಯಲ್ಲಿ ಸಂಗ್ರಹವಾದ ಮಳೆ ನೀರು ಕಂದಕದಿಂದ ಮೇಲೇಳುತ್ತಿದೆ.

ಆನೆ ತಡೆಗೆ ಖಾಸಗಿ ಭೂಮಿಯವರು ಅಗಳ ತೆಗೆಯುವುದನ್ನು ಯಾರೂ ತಡೆದಿಲ್ಲ. ಮಾಲ್ಕಿ ಭೂಮಿಯಲ್ಲಿ ಸ್ವಂತ ಖರ್ಚಿನಲ್ಲಿ ಕಂದಕ ತೆಗೆದರೆ ಪ್ರಶ್ನಿಸುವುದು ಹೇಗೆ ಎಂಬುದು ಅಧಿಕಾರಿಗಳ ಸಂದೇಹ. ತೆರೆದ ಬಾವಿಯ ಪಕ್ಕದಲ್ಲಿ ಆಳದ ಕೊಳವೆ ಬಾವಿ ಕೊರೆದಾಗ ಬಾವಿಗಳಲ್ಲಿ ನೀರು ಕಡಿಮೆಯಾಗುವಂತೆ ಇಲ್ಲಿಯೂ ಆಗುತ್ತಿದೆ. ವರ್ಷವಿಡೀ ವನ್ಯಜೀವಿಗಳಿಗೆ ಆಸರೆಯಾಗಿದ್ದ ಕೆರೆಗೆ ಇದರಿಂದ ಅಪಾಯ ಒದಗಿದೆ.

Advertisement

ಕೆರೆಯ ವಿಚಿತ್ರ ನೋಡಿ
ಬಿಳಿಗಿರಿ ರಂಗನ ಬೆಟ್ಟದ ಅಭಯಾರಣ್ಯದ ಅಧೀನದಲ್ಲಿರುವ ಅರಣ್ಯದಿಂದ ಕೆರೆಗೆ ನೀರು ಬರುತ್ತದೆ. ಕೆರೆ ರಾಜ್ಯ ಸಣ್ಣ ನೀರಾವರಿ ಇಲಾಖೆಯ ಸುಪರ್ದಿಗೆ ಬರುತ್ತದೆ. ಕೆರೆ ಪಕ್ಕದ ಜಾಗ ಖಾಸಗಿ ಒಡೆತನದಲ್ಲಿದೆ. ಒಂದೊಮ್ಮೆ ನೀರಾವರಿ ಇಲಾಖೆ ಕೆರೆಯ ಹೂಳು ತೆಗೆಯಲು ನಿರ್ಧರಿಸಿದರೂ ಅಭಯಾರಣ್ಯದ ಕಠಿಣ ಕಾನೂನು ಅಡ್ಡಿಯಾಗುತ್ತದೆ. ಜೆಸಿಬಿ ಬಳಸಬೇಡಿ, ಟ್ರ್ಯಾಕ್ಟರ್‌ ಸಂಚಾರ ಬೇಡವೆಂದು ನಿರಾಕರಿಸಲಾಗುತ್ತದೆ. ಆಹಾರ ಹುಡುಕಿ ಆನೆಗಳು ತೋಟಗಳಿಗೆ ನುಗ್ಗುವುದನ್ನು ತಡೆಯಲು ಕಂದಕ ನಿರ್ಮಿಸುವ ಕಾರ್ಯವನ್ನು ಸ್ವತಃ ಅರಣ್ಯ ಇಲಾಖೆಯೇ ಜೆಸಿಬಿ ಯಂತ್ರ ಬಳಸಿಯೇ ಮಾಡುತ್ತದೆ. ಇದನ್ನು ನೋಡಿಯೇ ಕೃಷಿಕರು ಕೆರೆಯ ಪಕ್ಕ ಕಂದಕ ಹೊಡೆಸಿದ್ದಾರೆ. ಗೌಡಳ್ಳಿ ಹೊಸಕೆರೆಯ ದುರಂತ ಅಂತ್ಯ ಸಮೀಪಿಸಿದೆ.

ಸಾವಿರ ಲೀಟರ್‌ ಸಂಗ್ರಹ
ನೀರಿನ ನಡೆ ಅರ್ಥಮಾಡಿಕೊಳ್ಳದೆ ಅಗಳ, ಆನೆ ಕಂದಕ ಕಾಮಗಾರಿ ನಡೆದ ಕಾರಣಕ್ಕೆ ವಾರ್ಷಿಕ 500- 1500 ಮಿಲಿಮೀಟರ್‌ ಮಳೆ ಸುರಿಯುವ ನೆಲೆಗಳು ಇದರ ಪರಿಣಾಮಕ್ಕೆ ತುತ್ತಾಗಿವೆ. ಒಂದು ಕ್ಯುಬಿಕ್‌ ಮೀಟರ್‌ ಕಂದಕ ನಿರ್ಮಾಣವಾದರೆ, ಅದರಲ್ಲಿ 1,000 ಲೀಟರ್‌ ನೀರು ಶೇಖರಣೆಯಾಗುತ್ತದೆ. ಪ್ರತಿಸಾರಿ ಮಳೆ ಸುರಿದಾಗಲೂ ಭರ್ತಿಯಾಗುತ್ತಾ ಇಂಗುತ್ತದೆ. ಪ್ರತಿ ಎಕರೆಯಲ್ಲಿ 40- 50 ಲಕ್ಷ ಲೀಟರ್‌ ಮಳೆ ಸುರಿಯುವ ಪ್ರದೇಶದಲ್ಲಿ ಇಳಿಜಾರಿಗೆ ಅಡ್ಡವಾಗಿ ನಿರ್ಮಿಸಿದ ಕಂದಕಗಳು ಭೂಮಿಗೆ ನೀರಿಂಗಿಸುವುದಕ್ಕೆ ಮೇಲ್ನೋಟಕ್ಕೆ ನೆರವಾದಂತೆ ಕಾಣುತ್ತದೆ. ಕೃಷಿಯ ಮೂಲ ನೆಲೆ, ಕೆರೆ, ಹಳ್ಳಗಳಿಂದ ಬಹಳ ದೂರದಲ್ಲಿ ಇಂಗಿದರೆ ಪ್ರಯೋಜನ ಕಡಿಮೆ. ನೈಸರ್ಗಿಕ ಹರಿವಿನಿಂದ ತಗ್ಗಿನ ಪ್ರದೇಶದ ಕೆರೆಗಳಿಗೆ ನೀರು ಬಾರದಿರುವುದರಿಂದ ಈಗ ಮಳೆ ಬಂದರೂ ಕೆರೆ ತುಂಬದ ಸ್ಥಿತಿಯಿದೆ. ಬಂಡೀಪುರ ಅರಣ್ಯದಲ್ಲಿ ನಿರ್ಮಿಸಿದ ಚೆಕ್‌ಡ್ಯಾಂಗಳಿಂದ 15.83 ಹೆಕ್ಟೇರ್‌ ವಿಸ್ತೀರ್ಣ ಸೋಮನಾಪುರ ಹಳೆಯ ಕೆರೆ ಇವತ್ತು ನೀರಿಲ್ಲದೇ ಒಣಗಿದೆ. ಕಲಬುರಗಿ, ಬೀದರ್‌, ರಾಯಚೂರು, ಧಾರವಾಡ, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿಯೂ ಇದೇ ಪರಿಸ್ಥಿತಿಯನ್ನು ನೋಡಬಹುದು. 700 ಮಿಲಿಮೀಟರ್‌ ಸುರಿದರೆ ಭರ್ತಿಯಾಗುತ್ತಿದ್ದ ಕೆರೆಗಳು ಈಗ 1200 ಮಿಲಿ ಮೀಟರ್‌ ಸುರಿದರೂ ಏಕೆ ತುಂಬುತ್ತಿಲ್ಲವೆಂದು ಗಮನಿಸುತ್ತ ಹೋದರೆ ದಾರಿ ತಪ್ಪಿದ ನೀರ ನಡೆ ಕಾಣಿಸುತ್ತದೆ.

ಆನೆ ನಿಯಂತ್ರಣ, ನೆಡುತೋಪು ರಕ್ಷಣೆ, ಅರಣ್ಯ ಗಡಿ ಗುರುತೆಂದು ರಾಜ್ಯದ ಎಲ್ಲೆಡೆಯೂ ಕರ್ನಾಟಕ ಅರಣ್ಯ ಇಲಾಖೆ ಅಗಳ, ಕಂದಕಗಳನ್ನು 30 ವರ್ಷಗಳಿಂದ ಮಾಡುತ್ತಿದೆ. ಪ್ರತಿ ವರ್ಷ ಒಂದರಿಂದ ಒಂದೂವರೆ ಸಾವಿರ ಮೀಟರ್‌ ಹೊಸ ಅಗಳ ಹೊಡೆಯುವುದು ರಾಜ್ಯದ ಪ್ರತಿ ಅರಣ್ಯ ವಲಯದ ಕಾಮಗಾರಿಯಾಗಿದೆ. ಬೆಟ್ಟ, ತಗ್ಗು, ಹಳ್ಳ, ಝರಿ ಯಾವುದರ ಪರಿವೆಯೇ ಇಲ್ಲದೆ ಅಗಳ ಹೊಡೆಯುವ ಕೆಲಸ ನಡೆಯುತ್ತದೆ. ಸಂರಕ್ಷಣೆಗಿಂತ ಇದರ ಹಿಂದೆ ಕಾಮಗಾರಿಯ ಹಣದ ವಹಿವಾಟು ಮುಖ್ಯವಾಗಿದೆ. ಕಣಿವೆಯಲ್ಲಿ ನೀರು ಹರಿದು ಬರುವ ದಾರಿ ಇವತ್ತಿನದಲ್ಲ, ಕೋಟ್ಯಂತರ ವರ್ಷಗಳಿಂದ ರೂಪಿತಗೊಂಡ ಜಲ ಮಾರ್ಗಕ್ಕೆ ತಕ್ಕಂತೆ ಬೇಸಾಯ ನಡೆದಿದೆ. ಹೊಳೆ, ಕೆರೆಗಳಿಂದ ನೀರು ದೊರೆಯುತ್ತಿದೆ. ಬೃಹತ್‌ ಅಗಳಗಳ ಕಾರಣ ಪುರಾತನ ಕೆರೆಗಳಿಗೆ ನೀರು ಬರುವ ಕಾಡಿನ ದಾರಿಗಳು ಮುಚ್ಚಲ್ಪಟ್ಟು ಕೆರೆಗಳು ಹಾಳಾದ ಉದಾಹರಣೆಗಳಿವೆ.

– ಶಿವಾನಂದ ಕಳವೆ

Advertisement

Udayavani is now on Telegram. Click here to join our channel and stay updated with the latest news.

Next