ಹಾನಗಲ್ಲ: ಪರಿಸರ ನಾಶದಿಂದ ಜಾಗತಿಕ ತಾಪಮಾನ ಸಮತೋಲನ ಕಳೆದುಕೊಳ್ಳುತ್ತಿದೆ. ಕಾಡಿಲ್ಲದೆ ಮಳೆ ಇಲ್ಲ, ಮಳೆ ಇಲ್ಲದೆ ಬರ ಕಾಡುತ್ತಿದೆ, ಅರಣ್ಯ ನಾಶದಿಂದ ವಿನಾಶದತ್ತ ಮಾನವ ಕುಲ ಸಾಗುತ್ತಿರುವುದನ್ನು ಕಂಡೂ ಪರಿಸರ ಜಾಗೃತಿಗೆ ಮುಂದಾಗದೇ ಮಾನವ ಪರಿಸರದ ಶಾಪಕ್ಕೆ ಗುರಿಯಾಗುತ್ತಿದ್ದಾನೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಸುಜಾತಾ ಪಾಟೀಲ ಎಚ್ಚರಿಸಿದರು.
ಹಾನಗಲ್ಲಿನ ರೋಶನಿ ಸಮಾಜಸೇವಾ ಸಂಸ್ಥೆ ಆವರಣದಲ್ಲಿ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ, ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ರೋಶನಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸಂಯುಕ್ತವಾಗಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಭಿವೃದ್ಧಿ ಹೆಸರಿನಲ್ಲಿ ಕಾಡು ಕಡಿದು ಹಸಿರು ನಾಶ ಮಾಡಬೇಡಿ. ಮನೆಗೊಂದು ಮರ ಊರಿಗೊಂದು ವನ ಘೋಷಣೆ ಕಾಗದದಲ್ಲಷ್ಟೇ ಉಳಿಯದೆ ಎಲ್ಲರೂ ಕಡ್ಡಾಯವಾಗಿ ಪಾಲಿಸುವಂತಾಗಬೇಕು. ನಮಗಾಗಿ ಕಾಡು ಉಳಿಸಲು ನಾವೇ ಮುಂದಾಗಬೇಕು ಎಂದರು.
ಸಿವಿಲ್ ನ್ಯಾಯಾಧೀಶರಾದ ಎಫ್.ವಿ. ಕೆಳಗೇರ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಇಂದಿನ ಬರಗಾಲಕ್ಕೆ ಅರಣ್ಯ ನಾಶವೇ ಕಾರಣ. ಕುಡಿಯುವ ನೀರಿಗಾಗಿ ಜನ ಪರದಾಡುವಂತಾಗಿದೆ. ಕೈಗೆಟುಕುವಂತಿದ್ದ ನೀರು ಈಗ ಸಾವಿರ ಅಡಿ ಕೊರೆದರೂ ಸಿಗುತ್ತಿಲ್ಲ ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸೋಮಶೇಖರ ಕೋತಂಬರಿ ಮಾತನಾಡಿ, ಪರಿಸರ ನಾಶವಾದರೆ ಮನುಕುಲದ ನಾಶ ಸಮೀಪಿಸುತ್ತಿದೆ ಎಂದರ್ಥ. ಮಾನವ ಪ್ರಕೃತಿ ಆರಾಧಕನಾಗಬೇಕು ವಿನಃ ವಿರೋಧಿಯಾಗಬಾರದು. ಪರಿಸರ ಸಂರಕ್ಷಣೆ ಕಾಯ್ದೆ ಕಡ್ಡಾಯವಾಗಿ ಜಾರಿಗೊಳಿಸಬೇಕು. ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳು ಸಂಪೂರ್ಣ ನಿಷ್ಕ್ರೀಯರಾಗಿದ್ದಾರೆ. ಈ ಮಂಡಳಿಗಳು ಕ್ರಿಯಾಶೀಲವಾಗಿಲ್ಲ. ಕಾಡು ಉಳಿದರೆ ನಾಡು ಉಳಿಯುತ್ತದೆ. 12 ಲಕ್ಷ ಹೆಕ್ಟೇರ್ ಬಂಜರು ಭೂಮಿ ಕರ್ನಾಟಕದಲ್ಲಿದೆ. ಇಲ್ಲಿ ಗಿಡ ನೆಡುವ ಮೂಲಕ ಪರಿಸರ ಉಳಿಸಲು ಸಹಕಾರಿಯಾಗಬೇಕು ಎಂದರು.
ತಾಪಂ ಇಒ ಚನ್ನಬಸಪ್ಪ ಹಾವಣಗಿ ಅಧ್ಯಕ್ಷತೆವಹಿಸಿದ್ದರು. ನ್ಯಾಯವಾದಿಗಳಾದ ರವಿಬಾಬು ಪೂಜಾರ, ಎಸ್.ಎಂ. ಹಾದಿಮನಿ ಪರಿಸರ ಜಾಗೃತಿ ಕುರಿತು ಉಪನ್ಯಾಸ ನೀಡಿದರು. ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಪರಮೇಶ್ವರ ಪೇಳನವರ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಬಸವರಾಜ ಅರಿಶಿನದ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಂ. ಬೇವಿನಮರದ ಹಾಗೂ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.