ಚಿಕ್ಕಬಳ್ಳಾಪುರ: ಲಕ್ಷಾಂತರ ರೂ. ಬಂಡವಾಳ ಹಾಕಿ ಹೂವು ಬೆಳೆದರೂ ಕೊರೊನಾ ವೈರಸ್ ಸಂಕಷ್ಟದಿಂದ ಹೂವು ಮಾರಾಟಗೊಳ್ಳಲಿಲ್ಲ ಎಂದು ಮನನೊಂದ ರೈತರು ತಮ್ಮ ಹೂವು ತೋಟಗಳನ್ನು ನಾಶಗೊಳಿಸುತ್ತಿರುವ ಪ್ರಸಂಗ ಗಳು ಜಿಲ್ಲೆಯಲ್ಲಿ ವರದಿಯಾಗುತ್ತಿವೆ.
ಹೌದು, ಪುಪ್ಪೋದ್ಯಮಕ್ಕೆ ಹೆಸರಾದ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಕೊರೊನಾ ಸಂಕಷ್ಟ ದಿಂದ ಇಡೀ ದೇಶವೇ ಲಾಕ್‌ಡೌನ್ ಆಗಿರುವು ದರಿಂದ ಹೂವು ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ಸಿಗದೇ ಹಾಕಿದ ಬಂಡವಾಳ ಕೈ ಸೇರದೆ ಕಂಗಾಲಾಗಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ದ್ರಾಕ್ಷಿಯಷ್ಟೇ ಹೂವು ಬೆಳೆಯುವ ರೈತರ ಸಂಖ್ಯೆ ಅಧಿಕವಾಗಿದೆ. ದ್ರಾಕ್ಷಿ ಬೆಲೆ ಕುಸಿತಗೊಂಡಾಗ ಸರ್ಕಾರ ಅವರ ನೆರವಿಗೆ ಧಾವಿಸಿ ಮಾರಾಟ ಹಾಗೂ ಸಾಗಾಟಕ್ಕೆ ಅವಕಾಶ ನೀಡಿತು. ಅಲ್ಲದೇ ಬೆಂಗಳೂರು ಮಹಾ ನಗರದಲ್ಲಿ ಸೂಕ್ತ ಮಾರುಕಟ್ಟೆ ಭರವಸೆ ನೀಡಿತು. ಹೀಗಾಗಿ ಸ್ವಲ್ಪ ಮಟ್ಟಿಗೆ ದ್ರಾಕ್ಷಿ ಬೆಳೆಗಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಆದರೆ ಹೂವು ಬೆಳೆಗಾರರಿಗೆ ಮಾರುಕಟ್ಟೆ ಇಲ್ಲದೇ ತೀವ್ರ ಸಮಸ್ಯೆ ಆಗಿದೆ. ಹೂವು ಬೆಳೆದರೂ ಬೇಡಿಕೆ ಇಲ್ಲದ ಪರಿಣಾಮ ಬೆಲೆ ಸಿಗದಂತಾಗಿದ್ದು, ಲಕ್ಷಾಂತರ ರೂ. ಬಂಡವಾಳ ಹಾಕಿದ ರೈತರು ಈ ಕೈ ಸುಟ್ಟುಕೊಳ್ಳುವ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.
ಹಲವು ತಿಂಗಳಿಂದ ಸಾಕಷ್ಟು ಬೇಸಾಯ ಮಾಡಿ ಹೂವು ತೋಟಕ್ಕೆ ಬಂಡವಾಳ ಹೂಡಿದ ರೈತ ಈಗ ಕೊರೊನಾ ಸಂಕಷ್ಟದಿಂದ ಹೂವುಗೆ ಬೇಡಿಕೆ ಇಲ್ಲದೇ ಬೆಳೆದ ಹೂವು ತೋಟ ಗಳನ್ನು ಜೆಸಿಬಿಯಿಂದ ನಾಶಗೊಳಿಸುತ್ತಿ ರುವ ದೃಶ್ಯ ಗಳು ಜಿಲ್ಲೆಯಲ್ಲಿ ಕಂಡು ಬಂದಿದೆ.
ತೋಟ ತೆರವು: ದ್ರಾಕ್ಷಿಯನ್ನು ತಿಪ್ಪೆಗಳಿಗೆ ಎಸೆದಂತೆ ಹೂವು ಬೆಳೆಗಾರರು ನಿತ್ಯ ಹೂವು ಕಿತ್ತು ತಿಪ್ಪೆಗೆ ಏಕೆ ಹಾಕಬೇಕೆಂದು ತೋಟಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂ ದಾ ಗಿರುವುದು ಚಿಕ್ಕಬಳ್ಳಾಪುರ ತಾಲೂಕಿ ನಲ್ಲಿ ಸಾಮಾನ್ಯವಾಗಿದೆ. ಚಿಕ್ಕಬಳ್ಳಾಪುರದಲ್ಲಿ ಬೆಳೆಯುವ ತರಹೇವಾರಿ ಗುಲಾಬಿ ಹೂವುಗಳು ನೆರೆಯ ಹೈದರಾಬಾದ್ ಮೂಲಕ ವಿದೇಶ ಗಳಿಗೆ ರಫ್ತು ಅಗುತ್ತಿತ್ತು. ಆದರೆ ಕಳೆದ ಎರಡು ತಿಂಗಳಿಂದ ಜಗತ್ತಿಗೆ ಆವರಿಸಿರುವ ಕೋವಿಡ್ 19 ವೈರಸ್‌ನಿಂದ ಹೂವುಗೆ ಬೇಡಿಕೆ ಕುಸಿದಿರುವುದರಿಂದ ರೈತರು ಅನಿವಾರ್ಯವಾಗಿ ಹೂವು ತೋಟ ಗಳನ್ನು ತೆರವು ಮಾಡುತ್ತಿದ್ದಾರೆ.
ಸುಮಾರು ಎರಡು ಲಕ್ಷ ರೂ. ಖರ್ಚು ಮಾಡಿ ಹೂವು ತೋಟ ಬೆಳೆಸಿದೆವು. ಫಸಲು ಚೆನ್ನಾಗಿ ಬಂತು. ಆದರೆ ಕೋವಿಡ್ 19 ದಿಂದ ಹೂವು ಮಾರಾಟವಾಗಲಿಲ್ಲ. ಮಾರುಕಟ್ಟೆ ಬಂದ್ ಆಗಿದ್ದರಿಂದ ತೋಟ ತೆರವು ಮಾಡಿದೆವು.
–ಮಂಚನಬಲೆ ಶ್ರೀನಿವಾಸ್, ರೈತ
– ಕಾಗತಿ ನಾಗರಾಜಪ್ಪ