ವರದಿ: ಮಡಿವಾಳಪ್ಪ ಹೇರೂರ
ವಾಡಿ: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ತೊಗರಿ ಮೊಳಕೆಯೊಡೆಯುವ ಮುನ್ನವೇ ಮಹಾ ಮಳೆಯಿಂದಾಗಿ ಕೊಳೆತು ಮಣ್ಣಾಗಿದ್ದರಿಂದ ರೈತರು ಮರುಬಿತ್ತನೆಗೆ ಮುಂದಾಗಿದ್ದಾರೆ. ಚೇತರಿಸಿಕೊಳ್ಳದ ತೊಗರಿ ಬೆಳೆಯನ್ನು ಸಂಪೂರ್ಣ ಹರಗಿ ಮತ್ತೊಮ್ಮೆ ಭೂಮಿಗೆ ಬೀಜ ಹಾಕುತ್ತಿದ್ದಾರೆ.
ಚಿತ್ತಾಪುರ ತಾಲೂಕಿನಾದ್ಯಂತ ಸುರಿದ ಸತತ ಮಳೆಯಿಂದ ಈ ಭಾಗದ ರೈತರು ಅತಿವೃಷ್ಠಿ ಹೊಡೆತಕ್ಕೆ ನಲುಗಿದ್ದಾರೆ. ಬಿರುಸಿನ ಮಳೆಗೆ ತೊಗರಿ ಮತ್ತು ಹೆಸರು ಬೆಳೆ ಕೊಚ್ಚಿ ಹೋಗಿದೆ. ಭೂಮಿಗೆ ಬಿದ್ದ ಬೀಜ ಮಣ್ಣಿನಿಂದ ಎದ್ದರೂ ಚೇತರಿಸಿಕೊಳ್ಳಲಾಗದೆ ನೆಲಕಚ್ಚಿದೆ. ಶೇ.೮೦ ರಷ್ಟು ಬೀಜ ಮಣ್ಣಲ್ಲೇ ಮಣ್ಣಾಗಿ ರೈತರ ಎದೆಯ ಮೇಲೆ ನಷ್ಟದ ಬರೆ ಎಳೆದಿವೆ.
ತೊಗರಿ ಬಿತ್ತನೆಯಾದ ಬಹುತೇಕ ಹೊಲಗಳಲ್ಲಿ ಬೆಳೆ ಸಾಲುಗಳನ್ನು ತುಳಿದು ಗರಿಕೆ ಹುಲ್ಲು (ಮೇವು) ಹುಲುಸಾಗಿ ಬೆಳೆದುನಿಂತಿದೆ. ಮುಂಗಾರಿನ ಭರವಸೆಯ ಬೆಳೆ ಹೆಸರು ಕೂಡ ರೈತರ ಕೈಬಿಟ್ಟಿದೆ. ನೀರಿನಲ್ಲಿ ನಿಂತ ಬೆಳೆ ಹುಳು ಹೇನು ರೋಗಕ್ಕೆ ತುತ್ತಾಗಿ ಸರ್ವನಾಶದ ಹಾದಿ ಹಿಡಿದಿದೆ. ಪರಿಣಾಮ ಬೆಳೆ ಹರಗಲು ಮುಂದಾದ ಅನ್ನದಾತರು, ಮುಂದೆ ಸುರಿಯಬಹುದಾದ ಮಾನ್ಸೂನ್ ಮಳೆಗಳ ನಿರೀಕ್ಷೆಯಲ್ಲಿ ಮರುಬಿತ್ತನೆಗೆ ಆಧ್ಯತೆ ನೀಡಿರುವುದು ಎಲ್ಲೆಡೆ ಕಂಡುಬರುತ್ತಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಚಿತ್ತಾಪುರ, ವಾಡಿ, ನಾಲವಾರ, ಸನ್ನತಿ ವಲಯದಲ್ಲಿ ಭಾರಿ ಮಳೆಯಾಗಿದ್ದು, ಈ ಭಾಗಗಳಲ್ಲೇ ಅತಿ ಹೆಚ್ಚು ಬೆಳೆ ನಷ್ಟ ಉಂಟಾಗಿರುವುದು ಗೋಚರಿಸುತ್ತಿದೆ. ಹೊಲಗಳಲ್ಲಿ ಕೆರೆ ಹೊಳೆಯಂತೆ ನೀರು ನಿಂತಿದೆ. ಬೆಳೆ ಕೊಳೆತು ಕಳೆ ಏಳಲು ಕಾರಣವಾದ ಮಳೆ ರೈತರ ಬದುಕಿನ ಮೇಲೆ ದೊಡ್ಡ ಹೊಡೆತವೇ ನೀಡಿದೆ.
ಬೀಜಗಳ ಕೊರತೆಯ ನಡುವೆಯೂ ರೈತರು ಖಾಸಗಿಯಾಗಿ ಬೀಜ ತಂದು ತೊಗರಿ ಮರುಬಿತ್ತನೆ ಮಾಡುತ್ತಿದ್ದಾರೆ. ಇನ್ನೊಂದೆಡೆ ಕೃಷಿ ಕೂಲಿ ಕಾರ್ಮಿಕರು ಗರಿಕೆ ಹುಲ್ಲು ಕೀಳುವ ಕಾಯಕದಲ್ಲಿ ತೊಡಗಿದ್ದಾರೆ. ಮಳೆ ನಿಂತರೂ ಮುಗಿಲಾಳದಲ್ಲಿ ಮತ್ತೆ ಮೋಡಗಳು ಚೆಲಿಸುತ್ತಿವೆ. ಹವಾಮಾನ ಇಲಾಖೆಯ ಲೆಕ್ಕಾಚಾರವೆಲ್ಲಾ ಉಲ್ಟಾ ಹೊಡೆದಿದ್ದರಿಂದ ಮತ್ತೊಂದು ಮಹಾ ಮಳೆಯ ಆತಂಕ ರೈತರನ್ನು ಕಾಡುತ್ತಿದೆ. ಪ್ರವಾಹ ಭೀತಿಯಲ್ಲೇ ಕೃಷಿ ಚಟುವಟಿಕೆ ಸಾಗಿದ್ದು, ತೊಗರಿ, ಹೆಸರು, ಉದ್ದು ಬೆಳೆದವರು ಇಳುವರಿ ನಿರೀಕ್ಷೆಯನ್ನೇ ಕೈಬಿಟ್ಟಿದ್ದಾರೆ.